Advertisement

ಬಂದಾರು:ಬತ್ತಿದ್ದ ಬಿಸಿನೀರ ಚಿಲುಮೆಗೆ ಮತ್ತೆ ಜೀವ- ದಿನಕ್ಕೆ 2 ಬಾರಿ ನೀರಿನ ಉಷ್ಣತೆ ಪರೀಕ್ಷೆ

02:57 PM Jul 09, 2024 | Team Udayavani |

ಉಪ್ಪಿನಂಗಡಿ: ಕಳೆದ ಎರಡು ವರ್ಷಗಳಿಂದ ಬೇಸಗೆಯಲ್ಲಿ ಬತ್ತುತ್ತಿರುವ ಬಂದಾರು ಗ್ರಾಮದಲ್ಲಿರುವ ಬಿಸಿ ನೀರ ಚಿಲುಮೆ
ಮಳೆಗಾಲದಲ್ಲಿ ಮತ್ತೆ ಚೇತರಿಸಿಕೊಂಡಿದ್ದು ಬಂಡೆಗಳ ನಡುವಿನಿಂದ ಬಿಸಿ ನೀರು ಹರಿದು ಬರಲು ಆರಂಭವಾಗಿದೆ. ಬಂದಾರು ಗ್ರಾಮದ ಅಂಕರಮಜಲಿನ ಬಟ್ಲಡ್ಕದಲ್ಲಿ ಮುಹಮ್ಮದ್‌ ಅವರ ಜಾಗದ ಒಂದೆಡೆ ಕಲ್ಲುಗಳ ಸಂದಿನಿಂದ ಸುಮಾರು ಅರ್ಧ ಇಂಚಿನಷ್ಟು ಬಿಸಿನೀರು ಹರಿದು ಬರುತ್ತದೆ. ನೀರು ಬಂದು ಬೀಳುವ ಜಾಗದಲ್ಲಿ ಕಲ್ಲುಗಳನ್ನು ಜೋಡಿಸಿ ಸುಮಾರು 12 ಅಡಿ ಉದ್ದ, ಏಳು ಅಡಿ ಅಗಲ, ಐದು ಅಡಿ ಆಳವಿರುವ ಕೆರೆ ಮಾದರಿಯನ್ನು ಮಾಡಲಾಗಿದೆ. ಈ ಬಿಸಿ ನೀರಿನ ಚಿಲುಮೆ ಅನಾದಿ ಲದಿಂದಲೂ ಹೀಗೆ ಇತ್ತು.

Advertisement

ನಾನು ಕಂಡಂತೆ ವರ್ಷದ 365 ದಿನವೂ ಇದು ಬತ್ತುತ್ತಿರಲಿಲ್ಲ. ಆದರೆ ಕಳೆದ ಎರಡು ವರ್ಷದಿಂದ ಇದು ಬೇಸಗೆಯಲ್ಲಿ
ಬತ್ತಲಾರಂಭಿಸಿದೆ. ಈ ನೀರು ಬಂದು ಬೀಳುವ ಕೆರೆಯಂತಹ ಜಾಗದ ಅಡಿಗೆ ಕಾಂಕ್ರೀಟ್‌ ಹಾಕಿ, ಕೆರೆಯ ಬದಿಯ ಬಂಡೆಗಳಿಗೆ ಬಣ್ಣ ಹಚ್ಚಿದ್ದಲ್ಲದೆ ಬಿಸಿ ನೀರು ಬರುವ ಜಾಗಕ್ಕೆ ಪೈಪೊಂದನ್ನು ಜೋಡಿಸಿದ್ದು ಬಿಟ್ಟರೆ, ಮತ್ತೆ ಯಾವ ಸ್ವರೂಪವನ್ನು ಬದಲಾಯಿಸಿಲ್ಲ ಎನ್ನುತ್ತಾರೆ ಅವರು.

10 ವರ್ಷಗಳಿಂದ ವಿಜ್ಞಾನಿಗಳ ತಂಡವೊಂದು ಇಲ್ಲಿಗೆ ಆಗಮಿಸಿ, ಅಧ್ಯಯನ ನಡೆಸುತ್ತಿದ್ದಾರೆ. ಆರಂಭದಲ್ಲಿ ಚೆನ್ನೈನಿಂದ, ಈಗ
ತಿರುವನಂತಪುರದಿಂದ ಕೇಂದ್ರ ಸರಕಾರದ ಭೂ ವಿಜ್ಞಾನ ಸಚಿವಾಲಯದ ವಿಜ್ಞಾನಿಗಳ ತಂಡವೊಂದು ಆರು ತಿಂಗಳಿಗೊಮ್ಮೆ ಭೇಟಿ ನೀಡಿ ಅಧ್ಯಯನ ನಡೆಸುತ್ತಿದೆ. ಈ ನಡುವೆ ಅವರಿಗೆ ಪ್ರತೀ ದಿನ ಬೆಳಗ್ಗೆ ಮತ್ತು ಸಂಜೆ ನಾನು
ಈ ನೀರಿನ ತಾಪಮಾನವನ್ನು ಪರೀಕ್ಷಿಸಿ ವರದಿ ಕಳುಹಿಸುತ್ತಿದ್ದೇನೆ. .

ಸಾಮಾನ್ಯವಾಗಿ ನೀರಿನ ತಾಪಮಾನ 36.6 ಡಿಗ್ರಿ ಸೆಲ್ಸಿಯಸ್‌ ಆಸುಪಾಸು ಇರುತ್ತಿತ್ತು. ಆದರೆ ಕೆಲವು ದಿನಗಳ ಹಿಂದೆ 40.3 ಡಿಗ್ರಿ ಸೆಲ್ಸಿಯಸ್‌ ಒಮ್ಮೆ ತಲುಪಿತ್ತು. ಇನ್ನೂ ನಿಗೂಢತೆಗಳನ್ನು ಬಿಟ್ಟುಕೊಡದ ಇದು ವಿಜ್ಞಾನಿಗಳಿಗೆ ಸವಾಲಾಗಿಯೇ ಇದೆ ಎನ್ನುತ್ತಾರೆ ಮುಹಮ್ಮದ್‌.

Advertisement

ಜಾಗ ಕೊಡುವುದಿಲ್ಲ…ಅಭಿವೃದ್ಧಿಗೆ ಆಕ್ಷೇಪವಿಲ್ಲ :ಈ ಜಾಗವನ್ನು ಬಿಟ್ಟುಕೊಡಿ. ನಾವು ಇದನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಸರಕಾರ ಕೇಳಿತ್ತು. ಆದರೆ ಜಾಗವನ್ನು ಮಾತ್ರ ನಾನು ಬಿಟ್ಟು ಕೊಡುವುದಿಲ್ಲ. ಇಲ್ಲಿ ಅಭಿವೃದ್ಧಿ ನಡೆಸುವುದಾದರೆ ನನ್ನದೇನೂ ಆಕ್ಷೇಪವಿಲ್ಲ ಎಂದು ಮಾಲಕ ಮುಹಮ್ಮದ್‌ ಹೇಳುತ್ತಾರೆ.

ಗಡುಸು ನೀರು
ಇದು ಗಡುಸು ನೀರಾಗಿದ್ದು, ಇದರಲ್ಲಿ ಸ್ನಾನ ಮಾಡಿದಾಗ ಸಾಬೂನಿನಲ್ಲಿ ನೊರೆಯೇ ಬರುವುದಿಲ್ಲ. ಮತ್ತೆ ಕೂದಲು ಕೂಡಾ
ದಪ್ಪವಾಗುತ್ತದೆ. ಈ ನೀರಿನಲ್ಲಿ ಮೀನುಗಳನ್ನು ಹಾಕಿದ್ದೆವು ಆದರೆ ಅದು ಬದುಕುವುದಿಲ್ಲ. ನೀರು ಚರ್ಮ ರೋಗ ನಿವಾರಣೆಗೆ ಉತ್ತಮ ಎಂದು ಇದರ ಅನುಭವ ಪಡೆದವರು ತಿಳಿಸಿದ್ದಾರೆ. ಇಲ್ಲಿಗೆ ಬಂದು ಸ್ನಾನ ಮಾಡಿಕೊಂಡು ಹೋಗುವುದಕ್ಕೆ ನಮ್ಮದೇನೂ ಆಕ್ಷೇಪವಿಲ್ಲ. ಅವರಿಗೆ ಬೇಕಾದ ನೆರವು ನಾನೇ ಮಾಡಿಕೊಡುತ್ತೇನೆ ಎನ್ನುತ್ತಾರೆ ಮುಹಮ್ಮದ್‌.

Advertisement

Udayavani is now on Telegram. Click here to join our channel and stay updated with the latest news.

Next