ಬಸವನಬಾಗೇವಾಡಿ: 2018ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಕಾರ್ಯಕರ್ತರು ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು. ಬುಧವಾರ ಪಟ್ಟಣದ ವಿರಕ್ತಮಠದ ಶಿವಾನುಭವ ಮಂಟಪದಲ್ಲಿ ಬಸವನಬಾಗೇವಾಡಿ ಮಂಡಳ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲ ಏತ ನೀರಾವರಿ ಯೋಜನೆ ಜಾರಿಯಾಗುವರೆಗೆ ಬೇರೆ ದೇಶಕ್ಕೆ ಹೋಗುವುದಿಲ್ಲ. ಕಾರ್ಯಕರ್ತರು ಮತ್ತು ವಿವಿಧ ಮಂಡಳಿಯ ಪದಾಧಿ ಕಾರಿಗಳು ಗುರಿ ಇಟ್ಟು ಕೆಲಸ ಮಾಡಬೇಕು ಎಂದು ಹೇಳಿದರು.
ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಅವರು ತಾಲೂಕಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನನ್ನಿಂದಲೇ ನಡೆದಿವೆ ಎಂದು ಹೇಳುತ್ತಿದ್ದಾರೆ. ಆದರೆ ಬಿಜೆಪಿ ಕಾರ್ಯಕರ್ತರು ಬಿಜೆಪಿ ಸರಕಾರ ಮತ್ತು ಮಾಜಿ ಶಾಸಕ ಎಸ್.ಕೆ. ಬೆಳ್ಳುಬ್ಬಿ ಮಾಡಿರುವ ಅಭಿವೃದ್ಧಿ ಕಾರ್ಯಗಳೆಂದು ಹೇಳಲು ಮುಂದೆ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಮಂಡಳದ ವಿವಿಧ ಪದಾಧಿ ಕಾರಿಗಳು ಮತ್ತು ಕಾರ್ಯಕರ್ತರು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ಇಲ್ಲದಿದ್ದರೆ ಗೆಲುವು ಸಾಧಿಸಲು ಕಷ್ಟವಾಗುತ್ತದೆ ಎಂದರು. ರಾಜ್ಯನಾಯಕರು ಮತ್ತು ನಮ್ಮ ಮತಕ್ಷೇತ್ರದ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಪಕ್ಷವನ್ನು ಬಲಿ ಕೊಡಬೇಡಿ. ಏನೇ ಭಿನ್ನಾಭಿಪ್ರಾಯ ಇದ್ದರೂ ಬಗೆಹರಿಸಿಕೊಂಡು ಪಕ್ಷ ಸಂಘಟನೆ ಮಾಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ವಿಸ್ತಾರಕ ಉಸ್ತುವಾರಿ ವಿವೇಕಾನಂದ ಡೆಬ್ಬಿ ಮಾತನಾಡಿ, ವಿಸ್ತಾರಕ ಕಾರ್ಯಕ್ರಮದ ಸಂದೇಶ ಮನೆ ಮನೆ ತಲುಪಿಲ್ಲ. ಹೀಗಾಗಿ ಮತ್ತೆ ಜಿಲ್ಲೆಯಲ್ಲಿ ಮರು ವಿಸ್ತಾರಕರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗರಾಜ ದೇಸಾಯಿ, ನಿಗಮ ಮಂಡಳಿ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ, ಬ್ಲಾಕ್ ಬಿಜೆಪಿ ಅಧ್ಯಕ್ಷ ಬಿ.ಕೆ. ಕಲ್ಲೂರ ಮಾತನಾಡಿದರು. ಜಿಪಂ ಸದಸ್ಯರಾದ ಕಲ್ಲಪ್ಪ ಮಟ್ಟಿ, ಸಂತೋಷ ನಾಯಕ, ಮುಖಂಡರಾದ ವಿ.ಎಂ. ಪರೆಣ್ಣವರ, ಸಂಗನಗೌಡ ಚಿಕ್ಕೊಂಡ, ಟಿ.ಟಿ. ಹೇಗಿದಾಳ, ಶಂಕರಗೌಡ ಪಾಟೀಲ, ಮಲ್ಲು ಸೇಬಗೊಂಡ, ಸಾವಿತ್ರಿ ಕಲ್ಯಾಣಶೆಟ್ಟಿ, ಕೊಲ್ಹಾರ ಪಪಂ. ಅಧ್ಯಕ್ಷ ಕಲ್ಲಪ್ಪ ಸೊನ್ನದ ಉಪಸ್ಥಿತರಿದ್ದರು.
ಪುರಸಭೆ ಮಾಜಿ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ ಸ್ವಾಗತಿಸಿದರು. ಗೋಪಾಲ ಚೋಳಿ ನಿರೂಪಿಸಿದರು. ರಾಮು ಜಗತಾಪ ವಂದಿಸಿದರು.