ಕಾಪು: ಕಾಪು ಕ್ಷೇತ್ರದಲ್ಲಿ ಅಗಾಧ ಮಾನವ ಸಂಪನ್ಮೂಲ, ಜಲ ಸಂಪನ್ಮೂಲವಿದೆ. ಅದನ್ನು ಸದ್ಭಳಕೆ ಮಾಡಿಕೊಂಡು ಕಾಪು ಕರಾವಳಿ ತೀರವನ್ನು ಪ್ರವಾಸೋದ್ಯಮದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ಧಿ ಗೊಳಿಸಲಾಗುವುದು. ಅದಕ್ಕೆ ಪೂರಕವಾಗಿ ಹೆದ್ದಾರಿಯಿಂದ ಸಮುದ್ರ ತೀರಕ್ಕೆ ಸಮಾನಾಂತರವಾಗಿ ರಸ್ತೆ ಸಂಪರ್ಕ ನಿರ್ಮಾಣದ ಮಾಸ್ಟ ಪ್ಲಾನ್ ನನ್ನ ಮುಂದಿದೆ ಎಂದು ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
ಕಾಪು ಬೀಚ್, ಪೊಲಿಪು ಯಾರ್ಡ್‌ನಲ್ಲಿ ಮತಬೇಟೆ ನಡೆಸಿ ಮಾತನಾಡಿದ ಅವರು ಮೀನುಗಾರ ವೃತ್ತಿ ನಿರತರಿಗೆ 3 ಲಕ್ಷ ರೂ. ಬಡ್ಡಿ ರಹಿತ ಸಾಲ, ಪೊಲಿಪುವಿನಲ್ಲಿ ಮೀನುಗಾರಿಕಾ ಜಟ್ಟಿ ನಿರ್ಮಾಣ, ಮೊಗವೀರ ಸಮುದಾಯದ ಅಭಿವೃದ್ಧಿ ಸಹಿತವಾಗಿ ಮೀನುಗಾರರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.
ಕರಾವಳಿ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿದ್ದು ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಮಣಿಪುರದಿಂದ ಕಾಪುವಿಗೆ ಕುಡಿಯುವ ನೀರು ಪೂರೈಕೆಯ ಭಗೀರಥ ಪ್ರಯತ್ನಕ್ಕೆ 2013ರಲ್ಲೇ ಚಾಲನೆ ನೀಡಲಾಗಿತ್ತು. ಬಿಜೆಪಿ ಶಾಸಕರ ಕಾರಣದಿಂದಾಗಿ ಯೋಜನೆ ಅನುಷ್ಟಾನಕ್ಕೆ ವಿಳಂಭವಾಗಿದ್ದು ಶಾಸಕನಾಗಿ ಆಯ್ಕೆಯಾದ ಮರುಕ್ಷಣದಿಂದಲೇ ಕಾಮಗಾರಿಯ ವೇಗ ಹೆಚ್ಚಿಸಿ, ಮನೆ ಮನೆಗೆ ನೀರು ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಕಾಪು ಪಡು ಪೊಯ್ಯ ಪೊಡಿಕಲ್ಲ ಗರಡಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಅವರನ್ನು ಗರಡಿಯ ಅರ್ಚಕ ಜಗನ್ನಾಥ ಪೂಜಾರಿ, ದರ್ಶನ ಪಾತ್ರಿ ಶ್ರೀನಿವಾಸ ಪೂಜಾರಿ ಆಶೀರ್ವದಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ವಿಕ್ರಂ ಕಾಪು, ದೀಪಕ್ ಕುಮಾರ್ ಎರ್ಮಾಳ್, ರಾಜೇಶ್ ಮೆಂಡನ್, ಮಾಧವ ಪಾಲನ್, ಸದಾನಂದ ಸುವರ್ಣ, ಉಸ್ಮಾನ್, ದಿನೇಶ್ ಸಾಲ್ಯಾನ್, ಯೋಗೀಶ್ ಕೋಟ್ಯಾನ್, ದಯಾನಂದ ಕೋಟ್ಯಾನ್, ಶಂಕರ ಸಾಲ್ಯಾನ್, ಲವ ಕರ್ಕೆàರ, ರಾಧಿಕಾ ಸುವರ್ಣ, ಶೋಭ ಸಾಲ್ಯಾನ್, ಫರ್ಜಾನ, ಆಶಾ ಶಂಕರ ಸಾಲ್ಯಾನ್, ಹರೀಶ್ ನಾಯಕ್, ದೇವರಾಜ್ ಕೋಟ್ಯಾನ್, ಮಧ್ವರಾಜ್ ಬಂಗೇರ, ಸೂರ್ಯ ನಾರಾಯಣ, ಸುರೇಶ್ ಅಂಚನ್ ಉಪಸ್ಥಿತರಿದ್ದರು.
ಅಧಿಕಾರ ದರ್ಪವಿಲ್ಲದ ಅಪರೂಪದ ರಾಜಕಾರಣಿ ವಿನಯ ಕುಮಾರ್ ಸೊರಕೆ : ನಿಕೇತ್‌ರಾಜ್ ಮೌರ್ಯ
ಪಡುಬಿದ್ರಿ : ಅಧಿಕಾರ ದರ್ಪವಿಲ್ಲದ, ಬಡವರ ಪರ ಕಾಳಜಿ ಇರುವ ಅಪರೂಪದ ರಾಜಕಾರಣಿ ವಿನಯ ಕುಮಾರ್ ಸೊರಕೆ. ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಇಟ್ಟುಕೊಂಡಿರುವ ಮತ್ತು ಕಾರ್ಯಕರ್ತರಿಗೆ ಅತ್ಯಂತ ಗೌರವ ಕೊಡುವ ಸೊರಕೆ ಅವರು ಕಾಪು ಕ್ಷೇತ್ರದ ಅಭ್ಯರ್ಥಿಯಾಗಿರುವುದು ನಿಮ್ಮೆಲ್ಲರ ಸೌಭಾಗ್ಯ. ಭ್ರಷ್ಟಾಚಾರ, ದುರಾಡಳಿತದ ಆರೋಪವಿಲ್ಲದ, ಶುದ್ಧ ಪ್ರಾಮಾಣಿಕ ವ್ಯಕ್ತಿತ್ವದ ಸೊರಕೆಯವರ ಕೈ ಹಿಡಿದು ಅವರನ್ನು ಗೆಲ್ಲಿಸುವುದು ಮತದಾರರ ಕರ್ತವ್ಯವಾಗಿದೆ ಎಂದು ಕಾಂಗ್ರೆಸ್ ವಕ್ತಾರ ನಿಕೇತ್‌ರಾಜ್ ಮೌರ್ಯ ಹೇಳಿದರು.
ರವಿವಾರ ಮುದರಂಗಡಿ ಮತ್ತು ಬೆಳಪು ಪೇಟೆಯಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವುದು ನಿಶ್ಚಿತಎನ್ನುವುದನ್ನು ಎಲ್ಲ ಸಮೀಕ್ಷೆಗಳೂ ಹೇಳುತ್ತಿವೆ. ವಿನಯ್ ಕುಮಾರ್ ಸೊರಕೆ ಅವರನ್ನು ನೀವು ಶಾಸಕರನ್ನಾಗಿ ಆಯ್ಕೆ ಮಾಡಿದರೆ ಅವರು ಮಂತ್ರಿಯಾಗುತ್ತಾರೆ. ಅವರ ನೇತೃತ್ವದಲ್ಲಿ ಕಾಪು ಕ್ಷೇತ್ರ ಇನ್ನೆಂದೂ ಕಾಣದ ರೀತಿಯಲ್ಲಿ ಅಭಿವೃದ್ಧಿಯಾಗುತ್ತದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ , ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಪ್ರಚಾರ ಸಮಿತಿ ಅಧ್ಯಕ್ಷ ಜಿತೇಂದ್ರ ಫುಟಾರ್ಡೊ, ಪಕ್ಷದ ಮುಖಂಡರಾದ ಕೃಷ್ಣ ಪೂಜಾರಿ, ಮೈಕಲ್ ಡಿ ಸೋಜ, ಶಿವಾಜಿ ಸುವರ್ಣ, ಸೋಮನಾಥ್ ಪೂಜಾರಿ, ಸುನೀಲ್ ರಾಜ್ ಶೆಟ್ಟಿ, ರೋಹನ್ ಕುಮಾರ್ ಕುತ್ಯಾರು, ಯು.ಸಿ. ಶೇಖಬ್ಬ, ರಮೀಜ್ ಪಡುಬಿದ್ರಿ, ಅಬ್ದುಲ್ ಅಜೀಜ್, ಡೇವಿಡ್ ಡಿಸೋಜ, ಜಹೀರ್ ಅಹಮದ್, ನಿಂಜನ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕರ್ತರಿಗೆ ಗೌರವ ಕೊಡುವ ಸೊರಕೆ
ರಾಯಚೂರಿನಲ್ಲಿ ಕಾಂಗ್ರೆಸ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಗಳು ಕಾಂಗ್ರೆಸ್ ಕಾರ್ಯಕರ್ತರೊಬ್ಬರನ್ನು ವಿಐಪಿ ಗ್ಯಾಲರಿಯೊಳಗೆ ಬಿಡುವುದಿಲ್ಲ ಎಂದು ತಾಕೀತು ಮಾಡಿದ್ದರು. ಅಲ್ಲೇ ಹಿಂದೆ ಇದ್ದ ವಿನಯಣ್ಣ ಕಾರ್ಯಕರ್ತನನ್ನು ಒಳಗೆ ಬಿಡಿ ಎಂದು ವಿನಂತಿಸಕೊಂಡರೂ ಭದ್ರತಾ ಸಿಬ್ಬಂದಿಗಳು ಒಳಗೆ ಬಿಟ್ಟಿರಲಿಲ್ಲ. ಆಗ ವಿಐಪಿ ಗ್ಯಾಲರಿಗೆ ಹೋಗಬೇಕಿದ್ದ ಸೊರಕೆ ಅವರು ತನ್ನ ಪಾಸ್‌ನ್ನು ಕಾರ್ಯಕರ್ತನಿಗೆ ನೀಡಿ, ತಾವು ಕಾರ್ಯಕರ್ತರೊಂದಿಗೆ ರಸ್ತೆಯಲ್ಲಿ ಕೂತು ರಾಹುಲ್ ಗಾಂಧಿ ಕಾರ್ಯಕ್ರಮವನ್ನು ವೀಕ್ಷಿಸಿದ್ದರು. ಇದು ಸೊರಕೆಯವರು ಕಾರ್ಯಕರ್ತರಿಗೆ ಕೊಡುವ ಗೌರವಕ್ಕೆ ಸಾಕ್ಷಿಯಾಗಿದೆ ಎಂದು ನಿಕೇತ್ ರಾಜ್ ಮೌರ್ಯ ಹೇಳಿದರು.