ಶಿಡ್ಲಘಟ್ಟ: ಉದ್ಯೋಗ ಖಾತ್ರಿ ಯೋಜನೆಮೂಲಕ ಜಿಲ್ಲಾದ್ಯಂತ ಅಂರ್ತಜಲ ವೃದ್ಧಿಗೊಳಿಸುವ ಚೆಕ್ ಡ್ಯಾಂ, ಕಲ್ಯಾಣಿ, ಕರೆ- ಕುಂಟೆಗಳನ್ನು ಅಭಿವೃದ್ಧಿಗೊಳಿಸಿ ಗಮನ ಸೆಳೆದಿರುವ ಜಿಪಂ ಸಿಇಒ ಫೌಝೀಯಾ ತರುನ್ನುಮ್, ಈಗ ನಗರ ಮಾದರಿಯಲ್ಲಿ ಗ್ರಾಮೀಣ ಪ್ರದೇ ಶದಲ್ಲೂ ಸ್ವಚ್ಛ ಭಾರತ ಯೋಜನೆ ಮೂಲಕ ನೈರ್ಮಲ್ಯ ಕಾಪಾಡಲು ಮುಂದಾಗಿದ್ದಾರೆ.
ಜಿಲ್ಲೆಯ 97 ಗ್ರಾಪಂ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ಪಡೆದಿರುವ ಸಿಇಒ, ಆಗಸ್ಟ್ ಅಂತ್ಯದೊಳಗೆ ಜಿಲ್ಲೆಯ 24 ಗ್ರಾಪಂ ವ್ಯಾಪ್ತಿಯಲ್ಲಿ ಪ್ರಥಮ ಹಂತದಲ್ಲಿ 9 ತ್ಯಾಜ್ಯ ವಿಲೇವಾರಿ ಘಟಕ ಕಾರ್ಯಾರಂಭಗೊಳಿಸಲು ಇಒ, ಪಿಡಿಒಗಳಿಗೆ ಗುರಿ ನೀಡಿ, ಕಾಮಗಾರಿ ಆರಂಭಿಸಿದ್ದಾರೆ.
ಜನಜಾಗೃತಿ: ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಗ್ರಾಮ ನೈರ್ಮಲ್ಯ ಕಾಪಾಡಲು ಗ್ರಾಮೀಣ ಜನರಲ್ಲಿ ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ. ಮುಂದಿನ ಮಾರ್ಚ್ ಅಂತ್ಯದೊಳಗೆ 157 ಗ್ರಾಪಂ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಲು ಯೋಜನೆ ರೂಪಿಸಿ, ಈಗಾಗಲೇ 97 ಗ್ರಾಪಂ ವ್ಯಾಪ್ತಿಯಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮನೆಯಲ್ಲಿ ಕಸ ಸಂಗ್ರಹ ಮಾಡಲು 32 ಆಟೋ ಟಿಪ್ಪರ್, 7 ಟ್ರ್ಯಾಕ್ಟರ್‌ಗಳನ್ನು ಖರೀದಿಸಿ, ಪಿಡಿಒಗಳಿಗೆ ಹಸ್ತಾಂತರಿಸಿದ್ದು, ಇನ್ನೂ ಉಳಿಕೆ ಗ್ರಾಪಂಗಳಿಗೂ ಖರೀದಿಸಲು ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಆಗಸ್ಟ್15ಕ್ಕೆ ಉದ್ಘಾಟನೆ: ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಮತ್ತು ಅರೂರು ಗ್ರಾಪಂ ಜಂಟಿ ಸಹಭಾಗಿತ್ವದಲ್ಲಿ ಅವುಲನಾಗೇನಹಳ್ಳಿ ಗ್ರಾಮದಲ್ಲಿ ಸ್ಥಾಪಿಸಿರುವ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಸಚಿವ ಡಾ.ಸುಧಾಕರ್ ಸ್ವಾತಂತ್ರ್ಯ ದಿನಾಚರಣೆಯಂದು ಉದ್ಘಾಟಿಸುತ್ತಿದ್ದು, ಜಿಪಂ ಅಧ್ಯಕ್ಷ ಎಂ.ಬಿ.ಚಕ್ಕನರ ಸಿಂಹಯ್ಯ, ಜಿಪಂ ಸಿಇಒ ಫೌಝೀಯಾ ತರುನ್ನುಮ್ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿ ನಗರ ಮಾದರಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡಲು ಸ್ವಚ್ಛ ಭಾರತ ಯೋಜನೆಯಡಿ 97 ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಅನುಮೋದನೆ ಸಿಕ್ಕಿದೆ. ಪ್ರಥಮ ಹಂತದಲ್ಲಿ 24 ಗ್ರಾಪಂನ 9 ಗ್ರಾಮಗಳಲ್ಲಿ ಘಟಕ ನಿರ್ಮಿಸಲಾಗುತ್ತಿದೆ. ಆ.15ರೊಳಗೆ ಒಂದು ಘಟಕವನ್ನು ಸಚಿವರು ಉದ್ಘಾಟಿಸಲಿದ್ದಾರೆ.
–ಬಿ.ಫೌಝೀಯಾ ತರುನ್ನುಮ್, ಜಿಪಂ ಸಿಇಒ.
– ಎಂ.ಎ.ತಮೀಮ್ ಪಾಷ