Advertisement

ಉಕ ಭಾಗದಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಒತ್ತು

03:07 PM Jun 19, 2020 | Suhan S |

ಕೊಪ್ಪಳ: ಉ.ಕ. ಭಾಗಗಳಲ್ಲಿ ಉದ್ದಿಮೆಗಳು ಕಡಿಮೆ ಸಂಖ್ಯೆಯಲ್ಲಿದ್ದು, ಈ ಭಾಗದಲ್ಲಿ ಹೆಚ್ಚು-ಹೆಚ್ಚು ಉದ್ದಿಮೆ ಸ್ಥಾಪಿಸಲು ಹೊಸ ಕೈಗಾರಿಕಾ ನೀತಿಯಿಂದ ಅನುಕೂಲವಾಗಲಿದೆ ಎಂದು ಮಾಜಿ ಸಿಎಂ, ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ಹೇಳಿದರು.

Advertisement

ತಾಲೂಕಿನ ಬಸಾಪುರ ಬಳಿ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದಿಂದ ಹಮ್ಮಿಕೊಂಡಿದ್ದ ಕೈಗಾರಿಕಾ ವಸಾಹತು ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಉದ್ದಿಮೆಗಳ ಅಭಿವೃದ್ಧಿಗಾಗಿ ಹೊಸ ಕೈಗಾರಿಕಾ ನೀತಿಯಲ್ಲಿ ಅಂಶ ಒಳಗೊಂಡಿವೆ. ಉದ್ದಿಮೆಗಳು ಇಲ್ಲದ ಜಿಲ್ಲೆಗಳು ಮತ್ತು ಹಿಂದುಳಿದ ತಾಲ್ಲೂಕುಗಳಲ್ಲಿ ಉದ್ದಿಮೆ ಸ್ಥಾಪಿಸಿ ಕೈಗಾರಿಕೋದ್ಯಮಕ್ಕೆ ಒತ್ತು ನೀಡಲಾಗುವುದು. ಇದರಿಂದ ಉತ್ತರ ಕರ್ನಾಟಕ ಭಾಗಕ್ಕೆ ಅನುಕೂಲವಾಗಲಿದೆ ಎಂದರು.

ಕೊಪ್ಪಳದಲ್ಲಿ ಕೈಗಾರಿಕೆ ಬೆಳವಣಿಗೆಗೆ ಪೂರಕ ವಾತಾವರಣವಿದೆ. ಬೆಳಗಾವಿಯ ಎಸ್‌ಇಝಡ್‌ ನ ಎಕಸ್ಸ ಎನ್ನುವಲ್ಲಿ ಸಾವಿರಾರು ಜನರು ಉದ್ಯೋಗ ಮಾಡುತ್ತಿದ್ದು, ಅವರು ಕೊಪ್ಪಳದಲ್ಲಿ ಟಾಯ್ಸ ಕ್ಲಷ್ಟರ್‌ ಅನ್ನು ಈ ಭಾಗದಲ್ಲಿ ಮಾಡುತ್ತಿದ್ದಾರೆ. ಇದರಿಂದ ಹಲವು ಜನರಿಗೆ ಉದ್ಯೋಗ ದೊರೆಯಲಿದೆ ಎಂದರು.

ಯಾದಗಿರಿ ಜಿಲ್ಲೆಯ ಕಡೆಚೂರು ಇಂಡಸ್ಟ್ರಿಯಲ್‌ ಏರಿಯಾದಲ್ಲಿ 2000 ಎಕರೆ ಜಮೀನು ಇದ್ದು, ಇಲ್ಲಿ ಹೈದರಾಬಾದ್‌ನ ಫಾರ್ಮಾಸಿಟಿಕಲ್‌ನ 14 ಕಂಪನಿಗಳು ಒಂದು ಸಾವಿರ ಕೋಟಿ  ಹಣವನ್ನು ಹೂಡಿಕೆ ಮಾಡಲು ಮುಂದೆ ಬಂದಿವೆ. ಮತ್ತು ಯಾವುದೇ ಉದ್ದಿಮೆದಾರರು ನನಗೆ ಸಂಪರ್ಕಿಸಿದಾಗ ಅವರಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಉದ್ದಿಮೆಗಳನ್ನು ಸ್ಥಾಪಿಸಲು ಸಲಹೆ ನೀಡಿದ್ದೇನೆ. ಜೊತೆಗೆ ಸ್ಥಳೀಯರಿಗೆ ಆದ್ಯತೆ ನೀಡುವಂತೆಯೂ ಹೇಳಿದ್ದೇನೆ ಎಂದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ಕೃಷಿ ಚಟುವಟಿಕೆಗಳ ಜೊತೆ-ಜೊತೆಗೆ ಉದ್ದಿಮೆಗಳನ್ನು ಬೆಳಸುವುದರಿಂದ ದೇಶಿಯ ಉತ್ಪನ್ನಗಳನ್ನು ರಫ್ತು ಮಾಡಲು ಸಹಕಾರಿಯಾಗುತ್ತದೆ. ಪ್ರಧಾನಿ ಮೋದಿ ಅವರು 20 ಲಕ್ಷ ಕೋಟಿ ಮೊತ್ತದ ಆತ್ಮ ನಿರ್ಭರ ಯೋಜನೆ ಜಾರಿಗೆ ತಂದಿದ್ದು, ಇದರಿಂದ ದೇಶಿ ಉತ್ಪನ್ನಗಳನ್ನು ರಫ್ತು ಮಾಡಲು ಅನುಕೂಲವಾಗುತ್ತದೆ. ಬಸಾಪುರ ಕೈಗಾರಿಕಾ ಪ್ರದೇಶದಲ್ಲಿ 104 ಎಕರೆ ಜಾಗವಿದ್ದು, ಇದು ಈ ಭಾಗದ ಕೈಗಾರಿಕೆಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ. ಇಲ್ಲಿ ಯಾವುದೇ ಕಚೇರಿ ಇಲ್ಲದ ಕಾರಣ ಈ ಭಾಗದ ಉದ್ದಿಮೆದಾರರು ಬಳ್ಳಾರಿ ಕಡೆಗೆ ಹೋಗುವಂತಾಗಿದೆ. ಆದ್ದರಿಂದ ಸ್ಥಳೀಯವಾಗಿ ಕೊಪ್ಪಳದಲ್ಲಿ ಒಂದು ಕಚೇರಿ ಸ್ಥಾಪಿಸುವಂತೆ ಸಚಿವರಿಗೆ ಮನವಿ ಮಾಡಿದರು.

Advertisement

ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ಈ ಭಾಗದಲ್ಲಿ ಕಬ್ಬಿಣ ಹೆಚ್ಚಾಗಿ ಉತ್ಪಾದನೆಯಾಗುತ್ತಿದ್ದು ಈ ಜಿಲ್ಲೆಯನ್ನು ಸ್ಟೀಲ್‌ ಪಾರ್ಕ್‌ ಎಂದು ಘೋಷಣೆ ಮಾಡಬೇಕು. ಹಲವಾರು ಕೈಗಾರಿಕೆಗಳಿಗಾಗಿ ರೈತರು ತಮ್ಮ ಭೂಯಿಯನ್ನು ನೀಡಿದ್ದಾರೆ. ಆದರೆ ಅವರಿಗೆ ಸರಿಯಾದ ಕೆಲಸಗಳನ್ನು ನೀಡಿಲ್ಲ. ಈ ಭಾಗಕ್ಕೆ ಯಾವುದೇ ಜಿಲ್ಲೆಯಿಂದ ಬಂದವರಾಗಿದ್ದರೂ ಮೊದಲು ನಮ್ಮ ಭಾಗದ ಯುವಕರಿಗೆ ಉದ್ಯೋಗದಲ್ಲಿ ಹೆಚ್ಚು ಒತ್ತು ನೀಡಬೇಕು ಎಂದರು.

ಡಿಸಿ ಪಿ.ಸುನೀಲ್‌ ಕುಮಾರ್‌, ಮುಖಂಡರಾದ ಸಿ.ವಿ.ಚಂದ್ರಶೇಖರ, ಅಮರೇಶ ಕರಡಿ, ನವೀನ ಗುಳಗಣ್ಣವರ್‌, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ, ಕೆ.ಎಸ್‌.ಎಸ್‌ಐಡಿಸಿ ಮುಖ್ಯ ಇಂಜಿನಿಯರ್‌ ಜಗದೀಶ ಸೇರಿ ಜಿಲ್ಲೆಯ ಉದ್ದಿಮೆದಾರರು ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next