ಯಲಬುರ್ಗಾ: ಅತಿ ಕಡಿಮೆ ನೀರಿನ ಬಳಕೆ ಮಾಡುವ ಮೂಲಕ ತೋಟಗಾರಿಕೆ ಬೆಳೆ ಬೆಳೆದು ಹೆಚ್ಚಿನ ಲಾಭ ಗಳಿಸಬಹುದಾಗಿದ್ದರಿಂದ ತೋಟಗಾರಿಕೆ ಬೆಳೆ ಬೆಳೆಯಲು ರೈತರು ಹೆಚ್ಚು ಒತ್ತು ನೀಡಬೇಕು ಎಂದು ತೋಟಗಾರಿಕೆ ನಿರ್ದೇಶಕ ಲಿಂಗನಗೌಡ ಪಾಟೀಲ ಹೇಳಿದರು.
ತಾಲೂಕಿನ ನರಸಾಪೂರ ಗ್ರಾಮದ ಡಾ| ಅವಿನಾಶ ಕೋರಾ ಅವರ ಹೊಲದಲ್ಲಿ ಜಿಪಂ ಹಾಗೂ ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ದಿ. ಡಾ|ಎಂ.ಎಚ್. ಮರಿಗೌಡರ ಜನ್ಮದಿನಾಚರಣೆ ನಿಮಿತ್ತ ನಡೆದ ಜೇನು ಸಾಕಾಣಿಕೆ ಮತ್ತು ಅಣಬೆ ಕೃಷಿ ಕುರಿತು ರೈತರಿಗೆ ತರಬೇತಿ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೈತರು ರಾಗಿ, ಭತ್ತ, ಕಡಲೆ, ಜೋಳ ಇನ್ನಿತರ ಬೆಳೆಗಳಿಗೆ ಜೋತು ಬೀಳದೇ ಅಧಿಕ ಆದಾಯ ತರುವ ತೋಟಗಾರಿಕೆ ಬೆಳೆ ಬೆಳೆಯಲು ಮುಂದಾಗಿ ಎಂದರು.
ಕೋವಿಡ್-19 ಸಂಕಷ್ಟ ಸಮಯದಲ್ಲಿ ತೋಟಗಾರಿಕೆ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗವಕಾಶಗಳು ಇರುವುದರಿಂದ ವಿದ್ಯಾವಂತ ನಿರುದ್ಯೋಗ ಯುವಕ, ಯುವತಿಯರು ಉದ್ಯೋಗ ಅರಸಿ ಹೋಗದೆ ತಮ್ಮ ಸ್ವಂತು ಜಮೀನಿನಲ್ಲಿ ಅಣಬೆ ಬೆಳೆದು ಕೇವಲ ತಿಂಗಳ ಅವಧಿಯಲ್ಲಿ ಅತ್ಯ ಧಿಕ ಲಾಭದಾಯಕ ಆದಾಯ ಪಡೆಯಬಹುದಾಗಿದೆ ಎಂದರು.
ದಿ. ಡಾ| ಎಂ.ಎಚ್. ಮರಿಗೌಡರ ಅವರು 1965ರಲ್ಲಿ ಕೃಷಿ ಇಲಾಖೆಯಿಂದ ತೋಟಗಾರಿಕೆ ಇಲಾಖೆ ಬೇರ್ಪಡಿಸಿ ಪ್ರತ್ಯೇಕ ಇಲಾಖೆಯನ್ನಾಗಿ ರೂಪಿಸುವಲ್ಲಿ ಇವರ ಪಾತ್ರ ಅಮೋಘವಾಗಿದೆ. ಅಷ್ಟೇ ಅಲ್ಲದೇ ಇವರನ್ನು ತೋಟಗಾರಿಕೆ ಪಿತಾಮಹ ಎಂದು ಕರೆಯಲಾಗುತ್ತದೆ. ತೋಟಗಾರಿಕೆ ಎಂದರೆ ಕೇವಲ ಶ್ರೀಮಂತರಿಗೆ ಮಾತ್ರ ಸಿಮೀತ ಎಂಬ ಭಾವನೆ ಇತ್ತು. ಆದರೆ ಸಾಮಾನ್ಯ ರೈತರಿಂದಲೂ ತೋಟಗಾರಿಕೆ ಮಾಡಬಹುದೆಂದು ಎಂದು ತೋರಿಸಿಕೊಡುವ ಮೂಲಕ ದಿ. ಡಾ| ಮರಿಗೌಡರ ದಾರಿದೀಪವಾಗಿದ್ದಾರೆ ಎಂದು ಹೇಳಿದರು.
ತೋಟಗಾರಿಕೆ ವಿಶೇಷ ತಜ್ಞ ವಾಮನಮೂರ್ತಿ ಮಾತನಾಡಿ, ಆ. 30ರವರೆಗೆ ವಿವಿಧ ತೋಟಗಾರಿಕೆ ವಿಷಯಗಳ ಬಗ್ಗೆ ತಾಲೂಕಿನಲ್ಲಿ ಎರಡು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು. ಟಿ. ಸತ್ಯನಾರಾಯಣ ಹುಲಿಗಿ ಹಣಬೆ ಬೇಸಾಯದ ಕುರಿತು ಮಾತನಾಡಿದರು. ನಿಂಗಪ್ಪ ಇಂದರಗಿ ಅವರು ಜೇನು ಕೃಷಿ ವಿಷಯ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ತೋಟಗಾರಿಕೆ ಉಪನಿರ್ದೇಶಕ ಕೃಷ್ಣಾ ಉಕ್ಕುಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರೈತರಾದ ಡಾ| ಅವಿನಾಶ ಕೋರಾ, ಅಖೀಲ್ ರಾಠೊಡ, ನಾಗರಾಜ ಪೊಲೀಸ್‌ಪಾಟೀಲ, ಲಕ್ವೀರ್ ಸಿಂಗ್, ವೆಂಕಟೇಶ ನಾಯಕ, ಮಂಜುನಾಥ, ಹನುಮಂತಗೌಡ, ನಾಗಪ್ಪ, ಪ್ರವೀಣ, ಹನುಮಂತಪ್ಪ ಹಿರೇಮನಿ, ಪ್ರಭುರಾಜ ತಾಳಕೇರಿ, ಶ್ರೀನಿವಾಸ ದೇಸಾಯಿ, ಬಸವರಾಜ ಭಂಡಾರಿ, ಬಸವರಾಜ ಕೊಡದಾಳ, ಶಿವಪ್ಪ ಇದ್ದರು.