Advertisement

ರೈತರು, ಮಹಿಳೆಯರ ಸ್ವಾವಂಲಬನೆಗೆ ಒತ್ತು

09:06 PM Dec 17, 2019 | Lakshmi GovindaRaj |

ಮಾಲೂರು: ಕೋಚಿಮುಲ್‌ ಮತ್ತು ಡಿಸಿಸಿ ಬ್ಯಾಂಕು ಒಟ್ಟಿಗೆ ಕಾರ್ಯಕ್ರಮ ರೂಪಿಸಿದಲ್ಲಿ ಉಭಯ ಜಿಲ್ಲೆಯ ರೈತರು ಮತ್ತು ಮಹಿಳೆಯರನ್ನು ಸ್ವಾವಲಂಬಿ ಮಾಡಲು ಸಾಧ್ಯ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

Advertisement

ಪಟ್ಟಣದ ದ್ಯಾಪಸಂದ್ರ ರೇಷ್ಮೆ ಬೆಳೆಗಾರರ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ತಾಲೂಕಿನ ಹುಳದೇನಹಳ್ಳಿ, ಹಸಾಂಡಹಳ್ಳಿ ಗ್ರಾಮಗಳ ವ್ಯಾಪ್ತಿಯ 130 ಮಹಿಳಾ ಸ್ವಹಾಯ ಸಂಘಗಳ 1300 ಸದಸ್ಯರಿಗೆ ಸಾಲ ವಿತರಿಸಿ ಮಾತನಾಡಿದರು. ಹೈನುಗಾರಿಕೆಯಲ್ಲಿ ತೊಡಗಿರುವ ರೈತರ ಬದುಕು ಹಸನಾಗಿಸುವ ಜೊತೆಗೆ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿ ಮಾಡಲು ಕೋಚಿಮುಲ್‌ ಮತ್ತು ಡಿಸಿಸಿ ಬ್ಯಾಂಕ್‌ ಒಟ್ಟಿಗೆ ಕೆಲಸ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಠೇವಣಿ ಇಡಿ: ಶಾಸಕ ಕೆ.ವೈ.ನಂಜೇಗೌಡ ಕೋಚಿಮುಲ್‌ ಅಧ್ಯಕ್ಷರೂ ಆಗಿದ್ದು, ಹೈನುಗಾರಿಕೆ ಪ್ರಗತಿಗಾಗಿ ಡಿಸಿಸಿ ಬ್ಯಾಂಕ್‌ನೊಂದಿಗೆ ಕೈ ಜೋಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅವರೊಂದಿಗೆ ಚರ್ಚಿಸಿದ್ದು, ಸೂಕ್ತವಾಗಿ ಸ್ಪಂದಿಸಿದ್ದಾರೆ. ಎರಡೂ ಜಿಲ್ಲೆಗಳ ಹಾಲು ಉತ್ಪಾದಕರಿಂದ ಪ್ರತಿ ತಿಂಗಳು ಕನಿಷ್ಠ 100 ಕೋಟಿ ರೂ. ಆರ್ಥಿಕ ವಹಿವಾಟು ನಡೆಯುತ್ತಿದೆ. ಸಾಲ ಪಡೆದ ರೈತರು ಮತ್ತು ಮಹಿಳಾ ಸಂಘಗಳ ಸದಸ್ಯರು ತಮ್ಮ ಉಳಿತಾಯ ಹಣವನ್ನು ಡಿಸಿಸಿ ಬ್ಯಾಂಕ್‌ನಲ್ಲಿಯೇ ಠೇವಣಿ ಇಡುವಂತೆ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.

ಪ್ರಸ್ತುತ ಮಾಲೂರು ತಾಲೂಕಿನ ದ್ಯಾಪಸಂದ್ರ ರೇಷ್ಮೆ ಬೆಳೆಗಾರರ ಪತ್ತಿನ ಸಹಕಾರ ಸೇವಾ ಬ್ಯಾಂಕ್‌ನ 90 ಸಂಘಗಳು, ಹುಳದೇನಹಳ್ಳಿಯ 26, ಹಸಾಂಡಹಳ್ಳಿಯ 14 ಮಹಿಳಾ ಸಂಘಗಳು ಸೇರಿ 130 ಸಂಘಗಳ 1300 ಮಹಿಳೆಯರಿಗೆ ಒಟ್ಟು 6.15 ಕೋಟಿ ರೂ. ಸಾಲ ನೀಡುತ್ತಿದ್ದು, ಮಹಿಳೆಯರು ಸಕಾಲದಲ್ಲಿ ಪಾವತಿ ಮಾಡುವ ಜೊತೆಗೆ ಸಾಲದ ಹಣವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕಿವಿಮಾತು ಹೇಳಿದರು. 6 ಕೋಟಿ ರೂ. ಸಾಲ ನೀಡುತ್ತಿರುವುದು ತಮಗೆ ತೃಪ್ತಿ ಎನಿಸಿಲ್ಲವಾದರೂ ಮಾಲೂರು ತಾಲೂಕಿನಿಂದ ಪ್ರತಿ ತಿಂಗಳು 20 ರಿಂದ 25 ಕೋಟಿ ರೂ. ಸಾಲ ಬಿಡುಗಡೆಯಾದಾಗ ಮಾತ್ರ ತೃಪ್ತಿಯಾಗಲಿದೆ ಎಂದರು.

ಮಹಿಳಾ ವಿಮಾ ಯೋಜನೆ ಅನುಷ್ಠಾನ: ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಅಕಾಲಿಕವಾಗಿ ಮೃತರಾದರೆ, ಸಾಲದ ಹಣ ಪಾವತಿಯ ಉದ್ದೇಶದಿಂದ ಪ್ರತಿ ಸದಸ್ಯರಿಂದಲೂ 500 ರೂ. ವಿಮಾಕಂತು ಪಡೆದು, ಗುಂಪು ವಿಮೆ ಮಾಡಿಸಲಾಗುತ್ತಿದೆ. ಇದರಿಂದ ಅಕಾಲಿಕವಾಗಿ ಸಂಘದ ಸದಸ್ಯರು ಮೃತರಾದಲ್ಲಿ ಅವರ ಪಾಲಿನ ಸಾಲದ ಕಂತು ವಿಮಾ ಕಂಪನಿಯು ನೀಡಲಿದೆ. ಇದರಿಂದ ಯಾವುದೇ ಸದಸ್ಯರಿಗೆ ಹೊರೆಯಾಗುವುದಿಲ್ಲ ಎಂದು ಹೇಳಿದರು.

Advertisement

ಗೃಹಪಯೋಗಿ ವಸ್ತುಗಳ ನೇರ ಮಾರಾಟ: ಮಹಿಳೆಯರ ಅನುಕೂಲಕ್ಕಾಗಿ ಗೃಪಯೋಗಿ ವಸ್ತುಗಳನ್ನು ಡಿಸಿಸಿ ಬ್ಯಾಂಕಿನ ಸಹಯೋಗದಲ್ಲಿಯೇ ಮಾರಾಟ ಮಾಡುವ ಯೋಜನೆ ರೂಪಿಸಲಾಗಿದೆ. ತಮಗೆ ಬೇಕಾಗಿರುವ ಯಾವುದೇ ವಸ್ತುವನ್ನು ಖರೀದಿ ಮಾಡಿದರೂ ಮಾರುಕಟ್ಟೆಯ ಬೆಲೆಗಿಂತ ಕಡಿಮೆ ದರದಲ್ಲಿ ನೀಡುವ ಜೊತೆಗೆ ಖರೀದಿ ಮಾಡಿರುವ ವಸ್ತುವನ್ನು ತಮ್ಮ ಮನೆ ಬಾಗಿಲಿಗೆ ತಲುಪಿಸುವ ಕೆಲಸವಾಗಲಿದೆ. ಖರೀದಿ ಮಾಡಿದ ವಸ್ತುವಿನ ಹಣವನ್ನು ಒಂದೇ ಬಾರಿ ಕಟ್ಟಬೇಕಾಗಿಲ್ಲ. ಸುಲಭ ಕಂತುಗಳಲ್ಲಿ ಬಡ್ಡಿರಹಿತವಾಗಿ ಪಾವತಿಸುವ ಯೋಜನೆಯ ರೂಪಿಸಲಾಗಿದೆ. 10 ಗ್ರಾಂನವರೆಗೂ ಚಿನ್ನಾಭರಣವನ್ನು ಶೂನ್ಯ ಬಡ್ಡಿ ದರದಲ್ಲಿ ಸುಲಭ ಕಂತುಗಳಲ್ಲಿ ನೀಡಲಾಗುವುದು ಎಂದು ವಿವರಿಸಿದರು.

ದ್ಯಾಪಸಂದ್ರ ರೇಷ್ಮೆ ಬೆಳೆಗಾರರ ಸಹಕಾರ ಪತ್ತಿನ ಬ್ಯಾಂಕ್‌ನ ಅಧ್ಯಕ್ಷ ಆರ್‌.ಪ್ರಭಾಕರ್‌, ಸಂಘದ ನಿರ್ದೇಶಕರಾದ ಎಂ.ವಿ.ನಾರಾಯಣಸ್ವಾಮಿ, ಮಲ್ಲಿಕಾರ್ಜುನಪ್ಪ, ಮುನಿರಂಗಪ್ಪ, ವೆಂಕಟೇಶಪ್ಪ, ಎಸ್‌.ಟಿ.ನಾರಾಯಣಪ್ಪ, ಗೋವರ್ಧನ ರೆಡ್ಡಿ, ಡಿ.ಕೆ.ನಾಗರಾಜು, ನಾರಾಯಣಗೌಡ, ಹಸಾಂಡಹಳ್ಳಿ ಬ್ಯಾಂಕಿನ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕೆ.ಎಚ್‌.ಚನ್ನರಾಯಪ್ಪ, ಹುಳದೇನಹಳ್ಳಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್‌.ವಿ.ಚಂದ್ರಶೇಖರಗೌಡ, ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ದೊಡ್ಡಮನಿ, ಸಿಇಒಗಳಾದ ಸುಧಾಕರ್‌, ನಾರಾಯಣಸ್ವಾಮಿ ಮತ್ತಿತರರು ಇದ್ದರು.

ಡಿಸಿಸಿ ಬ್ಯಾಂಕ್‌, ಕೋಚಿಮುಲ್‌ ಒಂದೇ ಮಾರ್ಗದಲ್ಲಿ ನಡೆಸಲು ಚಿಂತನೆ: ಶಾಸಕ
ಸರ್ಕಾರ ರೂಪಿಸಿರುವ ಮಹಿಳಾ ಸಂಘಗಳಿಗೆ 5 ಲಕ್ಷ ರೂ. ವರೆಗೂ ಬಡ್ಡಿ ರಹಿತ ಸಾಲ ನೀಡುವ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೂಪಿಸಿದ್ದರು. ಇದರಿಂದ ರಾಜ್ಯದ ಅನೇಕ ಮಹಿಳೆಯರಿಗೆ ಅನುಕೂಲವಾಗುತ್ತಿದೆ. ಮೀಟರ್‌ ಬಡ್ಡಿಕೋರನ್ನು ತೊಲಗಿಸಲು ಸಾಧ್ಯವಾಗುತ್ತಿದೆ ಎಂದು ಶಾಸಕ ಹಾಗೂ ಕೋಚಿಮುಲ್‌ ಅಧ್ಯಕ್ಷ ಕೆ.ವೈ.ನಂಜೇಗೌಡ ಹೇಳಿದರು.

ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್‌ ಉತ್ತಮ ಸಾಧನೆ ಮಾಡಿ, ರಾಜ್ಯದಲ್ಲಿ ಎರಡನೇ ಸ್ಥಾನಗಳಿಸಲು ಬ್ಯಾಂಕ್‌ನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅವರ ಶ್ರಮ ಇದೆ. ಜಿಲ್ಲೆಯ ರೈತರ ಹಿತ ಕಾಪಾಡುವ ಉದ್ದೇಶದಿಂದ ಡಿಸಿಸಿ ಬ್ಯಾಂಕ್‌ ಮತ್ತು ಕೋಚಿಮುಲ್‌ ಸಂಸ್ಥೆ ರಾಜ್ಯ ಮಟ್ಟದಲ್ಲಿ ಎರಡನೇ ಸ್ಥಾನದಲ್ಲಿದ್ದು, ಇದು ಇನ್ನೂ ಹೆಚ್ಚಿಸಬೇಕಾದಲ್ಲಿ ಡಿಸಿಸಿ ಬ್ಯಾಂಕ್‌ ಮತ್ತು ಕೋಚಿಮುಲ್‌ ಎರಡೂ ಒಂದೇ ಮಾರ್ಗದಲ್ಲಿ ನಡೆಸುವ ಚಿಂತನೆಗಳು ನಡೆಯುತ್ತಿವೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಕೋಚಿಮುಲ್‌ ವ್ಯಾಪ್ತಿಯ ಎಲ್ಲಾ ಹಾಲು ಉತ್ಪಾದಕ ಸಹಕಾರ ಸಂಘಗಳು ಮತ್ತು ಮಹಿಳಾ ಸ್ವಸಹಾಯ ಸಂಘಗಳು ಡಿಸಿಸಿ ಬ್ಯಾಂಕಿನಲ್ಲಿ ಠೇವಣಿ ಇಡಬೇಕು. ಉಳಿತಾಯ ಖಾತೆ ತೆರೆಯಬೇಕು. ತಾಲೂಕಿನ 160 ಡೇರಿ ಸದಸ್ಯರ ಖಾತೆಗಳು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿದ್ದು, ಡಿಸಿಸಿ ಬ್ಯಾಂಕಿನಲ್ಲಿ ಆರಂಭಿಸುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next