Advertisement

Goa ದಲ್ಲಿ ‘ನಗದು ರಹಿತ’ ವಹಿವಾಟಿಗೆ ಒತ್ತು: ಹಣಕಾಸು ಇಲಾಖೆ-ಪೇಟಿಎಂ ನಡುವೆ ಒಪ್ಪಂದ

05:55 PM Jul 14, 2023 | Team Udayavani |

ಪಣಜಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳ ಪ್ರಕಾರ, ರಾಜ್ಯದಲ್ಲಿ ಆರ್ಥಿಕ ವಹಿವಾಟುಗಳನ್ನು ‘ನಗದು ರಹಿತ’ ಮಾಡಲು ಒತ್ತು ನೀಡಲಾಗುತ್ತಿದೆ. ಇದರ ಭಾಗವಾಗಿ ಪಣಜಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಅವರ ಸಮ್ಮುಖದಲ್ಲಿ ಸರ್ಕಾರದ ಹಣಕಾಸು ಇಲಾಖೆಯು ಪೇಟಿಎಂ ಜತೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿತು.

Advertisement

ಈ ಒಪ್ಪಂದದಿಂದ ಜನಸಾಮಾನ್ಯರಿಗೆ ಅನುಕೂಲವಾಗಲಿದ್ದು, ರಾಜ್ಯದ ಎಲ್ಲ ಆರ್ಥಿಕ ವಹಿವಾಟು ನಗದು ರಹಿತವಾಗಲಿದೆ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ಪರವಾಗಿ ಪ್ರಣಬ್ ಭಟ್, ಪೇಟಿಎಂ ಮುಖ್ಯ ವ್ಯವಹಾರ ಅಧಿಕಾರಿ ಅಭಯ್ ಶರ್ಮಾ, ಉಪಾಧ್ಯಕ್ಷ ಅಂಕಿತ್ ಗೋಯಲ್, ಸೌರಭ್ ಅಗರ್ವಾಲ್, ವೇದಾಂತ ಕರ್ನಾನಿ ಮತ್ತು ಅಭಿನವ್ ದುಬೆ ಉಪಸ್ಥಿತರಿದ್ದರು.

ಈ ಕುರಿತಂತೆ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾತನಾಡಿ-  ಪೆಟಿಎಂ ಭಾರತೀಯ ಬಹುರಾಷ್ಟ್ರೀಯ ಹಣಕಾಸು ತಂತ್ರಜ್ಞಾನ ಕಂಪನಿಯಾಗಿದೆ. ಕಂಪನಿಯು ರಾಜ್ಯ ಸರ್ಕಾರಗಳೊಂದಿಗೆ ಹಣಕಾಸಿನ ವಹಿವಾಟು ನಡೆಸುತ್ತದೆ. ಒಪ್ಪಂದವು ಡಿಜಿಟಲ್ ಪಾವತಿಗಳು ಮತ್ತು ಹಣಕಾಸು ಸೇವೆಗಳನ್ನು ವರ್ಧಿಸುತ್ತದೆ ಮತ್ತು ಸುಗಮಗೊಳಿಸುತ್ತದೆ. ಬಜೆಟ್‍ನಲ್ಲಿ ಭರವಸೆ ನೀಡಿದಂತೆ ರಾಜ್ಯದಲ್ಲಿ ಆರ್ಥಿಕ ವಹಿವಾಟುಗಳನ್ನು ನಗದು ರಹಿತವಾಗಿ ಮಾಡಲು ಪ್ರಯತ್ನಿಸುತ್ತಿದ್ದೇವೆ. ಇದು ಬಜೆಟ್‍ನಲ್ಲಿ ನೀಡಿದ ಭರವಸೆಗಳ ಈಡೇರಿಕೆಯಾಗಿದೆ. ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ವ್ಯವಸ್ಥೆಯ ಸರ್ವತ್ರ ಲಭ್ಯತೆಯು ನಾಗರಿಕರು ತಮ್ಮ ವಿದ್ಯುತ್ ಮತ್ತು ನೀರಿನಂತಹ ಬಿಲ್‍ಗಳನ್ನು ಪೆಟಿಎಂ ಮೂಲಕ ಪಾವತಿಸಲು ಅನುವು ಮಾಡಿಕೊಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next