ಹುಬ್ಬಳ್ಳಿ: ಮಹಿಳೆಯರು ಹೆಚ್ಚು ಹೆಚ್ಚು ಉದ್ಯಮಿಗಳಾಗಬೇಕು. ಸ್ಥಳೀಯ ಸಂಪನ್ಮೂಲಗಳ ಬಳಕೆಗೆ ಹೆಚ್ಚು ಒತ್ತು ನೀಡುವ ಕಾರ್ಯ ಆಗಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು. ನಬಾರ್ಡ್ ಬೆಂಬಲದೊಂದಿಗೆ ದೇಶಪಾಂಡೆ ಫೌಂಡೇಶನ್ ಇಲ್ಲಿನ ವಾಯವ್ಯ ಸಾರಿಗೆ ಸಂಸ್ಥೆಯ ಸಾಮ್ರಾಟ ಹಾಲ್‌ನಲ್ಲಿ ಆಯೋಜಿಸಿದ್ದ ಉದ್ಯಮಿ ಮೆಗಾ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಉದ್ಯಮದ ಮಾಲೀಕರಾಗಬೇಕು. ಕೋವಿಡ್ ಸಾಂಕ್ರಾಮಿಕ ನಂತರದಲ್ಲಿ ಸಣ್ಣ ಕೈಗಾರಿಕೆಗಳು ಸಮಸ್ಯೆ ಎದುರಿಸುವಂತಾಗಿದ್ದು, ಉದ್ಯಮಕ್ಕೆ ಸ್ಥಳೀಯವಾಗಿ ಲಭ್ಯವಾಗುವ ಸಂಪನ್ಮೂಲಗಳನ್ನು ಹೆಚ್ಚು ಬಳಕೆ ಮಾಡಿಕೊಳ್ಳಬೇಕೆಂದರು.
ನವಲಗುಂದದಲ್ಲಿ ಸಿರಿಧಾನ್ಯಗಳ ಸಂಸ್ಕರಣೆ ಘಟಕ ಸ್ಥಾಪನೆಗೆ ನಬಾರ್ಡ್ 1 ಕೋಟಿ ರೂ. ನೀಡಿದೆ. ಇದರಿಂದ ಸಿರಿಧಾನ್ಯಗಳ ಸಂಸ್ಕರಣೆ ಹಾಗೂ ರೈತರು ಹೆಚ್ಚು ಸಿರಿಧಾನ್ಯ ಬೆಳೆಯಲು ಸಹಕಾರಿ ಆಗಲಿದೆ. ಸ್ಥಳೀಯ ಸಣ್ಣ ಉದ್ಯಮ-ವಹಿವಾಟು ಬೆಳೆಸಲು, ವಿಶೇಷವಾಗಿ ಮಹಿಳೆಯರನ್ನು ಉದ್ಯಮಿಗಳನ್ನಾಗಿಸುವ ನಿಟ್ಟಿನಲ್ಲಿ ನಬಾರ್ಡ್ ಹಾಗೂ ದೇಶಪಾಂಡೆ ಫೌಂಡೇಶನ್ ಉತ್ತಮ ಕಾರ್ಯನಿರ್ವಹಿಸಿದ್ದು, ಈ ಸೌಲಭ್ಯಗಳನ್ನು ಬಳಸಿಕೊಳ್ಳಬೇಕೆಂದರು.
ನಬಾರ್ಡ್ ಡಿಡಿಎಂ ಮಯೂರ ಕಾಂಬಳೆ ಮಾತನಾಡಿ, ಮನೆ ಕೆಲಸದ ಜತೆಯಲ್ಲಿಯೇ ಅನೇಕ ಮಹಿಳೆಯರು ಸ್ವಯಂ ಉದ್ಯೋಗ ಇಲ್ಲವೆ ಉದ್ಯಮದ ತರಬೇತಿ ಪಡೆದಿರುವುದು, ಅವರಲ್ಲಿನ ಉದ್ಯಮ ಆಸಕ್ತಿ ಹಾಗೂ ಸಕ್ರಿಯತೆ ಸಂತಸದ ವಿಚಾರ. ಈ ಬಾರಿಯ ತರಬೇತಿಯಲ್ಲಿ ಸುಮಾರು 65 ಜನ ಮಹಿಳೆಯರು ತರಬೇತಿ ಪೂರ್ಣಗೊಳಿಸಿದ್ದಾರೆ. ಮಹಿಳೆಯರ ಉದ್ಯಮ ಯತ್ನ ಅತ್ಯತ್ತಮ ಸಾಧನೆಯಾಗಿದ್ದು, ಇದು ಪ್ರೇರಣಾದಾಯಕ ಹಾಗೂ ಮಾದರಿಯಾಗಲಿದೆ ಎಂದರು.
ಕೆನರಾ ಬ್ಯಾಂಕ್‌ನ ಗೊನು ತಿವಾರಿ ಮಾತನಾಡಿ, ಮಹಿಳೆಯರ ಸಶಕ್ತೀಕರಣ ಹುಬ್ಬಳ್ಳಿಯಲ್ಲಿ ಮಹತ್ವದ ರೀತಿಯಲ್ಲಾಗಿದೆ. ಈ ನಿಟ್ಟಿನಲ್ಲಿ ದೇಶಪಾಂಡೆ ಫೌಂಡೇಶನ್ ಕಾರ್ಯ ಶ್ಲಾಘನೀಯ. ಮುದ್ರಾ ಯೋಜನೆ ಮೂಲಕ ಹೊಸದಾಗಿ ಉದ್ಯಮ ಆರಂಭಿಸುವವರಿಗೆ 50 ಸಾವಿರದಿಂದ 10 ಲಕ್ಷ ರೂ.ವರೆಗೆ 3 ಹಂತದಲ್ಲಿ ಸಾಲ ನೀಡಲಾಗುತ್ತದೆ. ಇದರ ಪ್ರಯೋಜನ ಪಡೆದು ಉದ್ಯಮಿಗಳು ಅಭಿವೃದ್ಧಿ ಹೊಂದಬೇಕೆಂದರು.
ಏಕಲಕ್ಷ್ಯ ಇನ್ನೋವೇಶನ್ ಲ್ಯಾಬ್ಸ್ ನ ಒಟ್ಟಲ್ಲೆ ಅನ್ಬನ್ ಕುಮಾರ ಮಾತನಾಡಿ, ವಿಶ್ವದ ಅತ್ಯುತ್ತಮ ಎನ್‌ಜಿಒ ಎಂದರೆ ದೇಶಪಾಂಡೆ ಫೌಂಡೇಶನ್. ಮಹಿಳೆಯರಿಗೆ ಉದ್ಯಮ-ವಹಿವಾಟು ತರಬೇತಿ, ಉದ್ಯಮ-ಮಾರುಕಟ್ಟೆ ಸಂಪರ್ಕದ ಕಾರ್ಯ ಮಾಡುತ್ತಿದೆ. ಮಹಿಳೆಯರು ಹೊಸ ತಂತ್ರಜ್ಞಾನವನ್ನು ಉದ್ಯಮದಲ್ಲಿ ಬಳಸಿಕೊಳ್ಳುವ ಮೂಲಕ ಉನ್ನತಿ ಕಾಣಬೇಕೆಂದರು. ವರ್ಷಾ ಗುರ್ಲಾಹೊಸೂರು ಮಾತನಾಡಿದರು. ದೇಶಪಾಂಡೆ ಫೌಂಡೇಶನ್ ಸಿಇಒ ವಿವೇಕ ಪವಾರ, ಕಾರ್ಯನಿರ್ವಹಣೆ ವಿಭಾಗದ ನಿರ್ದೇಶಕ ವಿಜಯ ಪುರೋಹಿತ, ಫೌಂಡೇಶನ್ ಉಪ ವ್ಯವಸ್ಥಾಪಕಿ ರಾಜೇಶ್ವರಿ ಲದ್ದಿ ಇದ್ದರು. ತರಬೇತಿ ಪೂರ್ಣಗೊಳಿಸಿದ 65 ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಉದ್ಯಮ-ವ್ಯಾಪಾರ ಉನ್ನತೀಕರಣಕ್ಕೆ ಸಾಲ ಅವಶ್ಯ. ಇದಕ್ಕಾಗಿಯೇ ವಿವಿಧ ವಾಣಿಜ್ಯ ಬ್ಯಾಂಕ್‌ಗಳು ಸಾಲ ಸೌಲಭ್ಯ ನೀಡುತ್ತಿವೆ. ಹುಬ್ಬಳ್ಳಿ-ಧಾರವಾಡ ಆರ್‌ಇ ಎಂಬ್ರಾಯಿಡರ್ ಕ್ಲಸ್ಟರ್ ಆಗಿ ಗುರುತಿಸಿಕೊಂಡಿದೆ. ಮಹಿಳೆಯರಿಗೆ ಉದ್ಯಮ-ವಹಿವಾಟು ತರಬೇತಿ ನಿಟ್ಟಿನಲ್ಲಿ ದೇಶಪಾಂಡೆ ಫೌಂಡೇಶನ್ ಅತ್ಯುತ್ತಮ ಕಾರ್ಯಕ್ಕೆ ಮುಂದಾಗಿದ್ದು, ನಬಾರ್ಡ್ ಎಲ್ಲ ರೀತಿಯ ಬೆಂಬಲ ನೀಡುತ್ತಿದೆ.
ಮಯೂರ ಕಾಂಬಳೆ,
ನಬಾರ್ಡ್ ಡಿಡಿಎಂ