Advertisement

ಆಧುನಿಕ ಯುಗದಲ್ಲಿ ಭಾವನೆಗಳು ನಶಿಸುತ್ತಿವೆ

12:29 PM Aug 03, 2017 | Team Udayavani |

ಮೈಸೂರು: ಆಧುನಿಕ ಯುಗದಲ್ಲಿ ಭಾವನೆಗಳು ನಶಿಸುತ್ತಿದ್ದು, ಹೆಚ್ಚುತ್ತಿರುವ ಮೊಬೈಲ್‌ ಬಳಕೆಯಿಂದಾಗಿ ಸಮಾಜದಲ್ಲಿ ತಲೆಎತ್ತಿ ಮಾತನಾಡುವ ಧೈರ್ಯ ಮತ್ತು ಛಲ ಕಳೆದುಕೊಂಡಿದ್ದೇವೆ ಎಂದು ರಂಗಾಯಣ ನಿರ್ದೇಶಕಿ ಭಾಗೀರಥಿ ಬಾಯಿ ಕದಂ ಹೇಳಿದರು.

Advertisement

ನಗರದ ಮಹಾರಾಜ ಕಾಲೇಜು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪರಿಚಯಾತ್ಮಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಭಾವನೆಗಳು ಮರೆಯಾಗುತ್ತಿದ್ದು, ಇದರಿಂದ ಸಮಾಜದಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಗೌರವಿಸುವ ಪ್ರವೃತ್ತಿ ಕ್ಷೀಣಿಸುತ್ತಿದೆ.

ಅದೇ ರೀತಿ ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರು ಮೊಬೈಲ್‌ ಬಳಕೆಯಲ್ಲಿ ತಲ್ಲೀನರಾಗುವ ಮೂಲಕ ತಲೆ ತಗ್ಗಿಸಿಕೊಂಡು ಪೋನ್‌ ನೋಡುವುದನ್ನೇ ಹವ್ಯಾಸ ಮಾಡಿಕೊಂಡಿದ್ದಾರೆ. ಇದರಿಂದಾಗಿ ತಲೆ ಎತ್ತಿ ಮಾತನಾಡುವ ಧೈರ್ಯ, ಛಲ ಕಳೆದುಕೊಂಡಿದ್ದೇವೆ ಎಂದರು.

ಇತ್ತೀಚಿನ ದಿನಗಳಲ್ಲಿ ನಮ್ಮ ಪ್ರತಿಭೆ ಮರೆಯಾಗುತ್ತಿದ್ದು, ಕಥೆ, ಕಾದಂಬರಿಗಳನ್ನು ಓದುವ ಹಾಗೂ ಬರೆಯುವ ಹವ್ಯಾಸಗಳು ಸಹ ಮರೆಯಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜತೆಗೆ ಕಥೆ, ಕಾದಂಬರಿ, ಜೀವನ ಚರಿತ್ರೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವ ಬಗ್ಗೆ ಅರಿವು ಮೂಡಿಸಬೇಕಿದೆ.

ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಭಕ್ತಿಯಿಂದ ವಿದ್ಯೆ ಕಲಿತಾಗ ಮಾತ್ರ ಗುರುಗಳು ಕಲಿಸಿದ ಪಾಠಕ್ಕೆ ಹೆಚ್ಚಿನ ಮನ್ನಣೆ ದೊರೆಯಲಿದೆ. ವಿದ್ಯಾರ್ಥಿಗಳು ತಮಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಆ ಕ್ಷೇತ್ರದಲ್ಲಿ ಮುನ್ನಡೆಯುವ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಬೇಕಿದೆ ಎಂದು ಹೇಳಿದರು.

Advertisement

ಮಕ್ಕಳಿಗೆ ಜನ್ಮ ನೀಡುವ ಪೋಷಕರು ಒಳ್ಳೆಯ ಹಾದಿಯಲ್ಲಿ ನಡೆಯುವಂತೆ ಮಾರ್ಗದರ್ಶನ ನೀಡುತ್ತಾರೆ. ಆದರೆ ಗುರುಗಳು ನಿಮ್ಮ ಬೆನ್ನಹಿಂದೆ ನಿಂತು ಇನ್ನಷ್ಟು ಮಾರ್ಗದರ್ಶನ ನೀಡುತ್ತಾರೆ. ಆದರೆ ಅವರು ತೋರುವ ಮಾರ್ಗದಲ್ಲಿ ಕಷ್ಟ-ಸುಖದ ಹಾದಿ ಇರಲಿದ್ದು, ಈ ಹಿನ್ನೆಲೆ ವಿದ್ಯಾರ್ಥಿಗಳು ಯಶಸ್ಸಿನ ಹಾದಿಯಲ್ಲಿ ಎದುರಾಗುವ ಕಷ್ಟ-ಸುಖಗಳನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಬೇಕಿದೆ ಎಂದರು.

ಮಹಾರಾಜ ಕಾಲೇಜಿನ ಹಿರಿಯ ವಿದ್ಯಾರ್ಥಿ, ಯುಪಿಎಸ್‌ಸಿ ಪರೀಕ್ಷೆಯಲ್ಲಿ 340ನೇ ರ್‍ಯಾಂಕ್‌ ಪಡೆದ ಕೆಂಪಹೊನ್ನಯ್ಯ, ಮಹಾರಾಜ ಕಾಲೇಜು ಪ್ರಾಂಶುಪಾಲ ಪೊ›.ಬಿ.ನಾಗರಾಜಮೂರ್ತಿ, ಮಹಾರಾಜ ಕಾಲೇಜು ಸ್ವಾಗತ ಮತ್ತು ಬೀಳ್ಕೊಡುಗೆ ಸಮಿತಿ ಸಂಯೋಜಕಿ ಡಾ.ಪಿ.ಟಿ.ಭಾರತಿ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next