Advertisement

ಮನೆಯ ಹಿರಿಯರಿಗೆ ಅಗತ್ಯವಿರುವುದು ಭಾವನಾತ್ಮಕ ಸಾಂತ್ವನವಲ್ಲವೇ?

06:00 AM Jul 26, 2018 | |

ಇತ್ತೀಚಿನ ದಿನಗಳಲ್ಲಿ ಕುಟುಂಬದ ಸದಸ್ಯರಿಂದ ವೃದ್ಧರು, ಅಲಕ್ಷಿತರಾಗಿ ಸಾಕಷ್ಟು ಮಾನಸಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಇದನ್ನು ಸಹಿಸಲಾರದೆ, ಇವರು ಕೆಲವೊಮ್ಮೆ ಆತ್ಮಹತ್ಯೆಯಂಥ ಯೋಚನೆಗಳನ್ನೂ ಮಾಡುವುದಿದೆ. ವೃದ್ಧರನ್ನು ಹೊರೆಯೆಂದು ಪರಿಗಣಿಸದೇ ಭಾವನಾತ್ಮಕ ಹಾಗೂ ಸಂವೇದನಾತ್ಮಕ ನೆಲೆಯಲ್ಲಿ ನೋಡಿದಾಗ ಅವರಿಗೆ ಸಾಂತ್ವನ ಸಿಗಲು ಸಾಧ್ಯವಿದೆ. ಇಂಥ ಭಾವನೆ ಕುಟುಂಬ ಸದಸ್ಯರಲ್ಲಿ ಅಂತರಾಳದಿಂದಲೇ ಮೂಡಿಬರಬೇಕು.

Advertisement

ಸುಮಾರು ಅರ್ಧ ಶತಮಾನದಷ್ಟು ಹಿಂದಿನ ದಿನಗಳು. ಆಗಿನ್ನೂ ಜಾಗತೀಕರಣದ ಗಾಳಿ ಬೀಸಿರದ ಕಾರಣ ನಮ್ಮ ಹಳ್ಳಿಗಳು ಮೂಲ ಚಹರೆ ಕಳೆದುಕೊಂಡಿರಲಿಲ್ಲ. ತರಕಾರಿ ಹಾಗೂ ಹೂ ಗಿಡಗಳು ಮಾವು ಹಲಸು ಮುಂತಾದ ಹಣ್ಣಿನ ಮರಗಳು ಇರುವ ಹಿತ್ತಿಲು. ಒಂದು ಮೂಲೆಯಲ್ಲಿ ಹಾಲು ಹಿಂಡುವ ಹಸುಗಳ ಕೊಟ್ಟಿಗೆ ಹಳ್ಳಿಗಳಲ್ಲಿ ಹೆಚ್ಚಿನವು ಕೂಡು ಕುಟುಂಬಗಳು. ಅವೆಲ್ಲ ಮನೆಯ ಹಿರಿಯ ಯಜಮಾನನ ನಿಯಂತ್ರಣಕ್ಕೆ ಒಳಪಟ್ಟಿದ್ದು, ಕೂಡು ಕುಟುಂಬಗಳಲ್ಲಿ ಆತನಿಗೆ ಪ್ರಮುಖ ಸ್ಥಾನವಿತ್ತು. ಮನೆಯ ವ್ಯಾಪಾರ ವಹಿವಾಟು ಮತ್ತು ಬೇಸಾಯದ ಕೆಲಸಗಳನ್ನು ಆತನ ವಯಸ್ಕ ಗಂಡು ಮಕ್ಕಳು ನೋಡಿಕೊಂಡರೆ ಮನೆವಾರ್ತೆಯ ಜವಾಬ್ದಾರಿ ಹೆಂಗಸರದ್ದು. ಮನೆಯಲ್ಲಿ ಶಾಲೆಗೆ ಹೋಗುವ ಮೊಮ್ಮಕ್ಕಳು ಆಗಾಗ ತವರಿಗೆ ಬರುವ ಮಗಳು ಅಳಿಯ ಅವರ ಮಕ್ಕಳು ಅದಲ್ಲದೇ ಬರುವ ನೆಂಟರು ಹೀಗೆ ಮನೆಯಲ್ಲಿ ಯಾವಾಗಲೂ ಕಲರವ.

ಬರಬರುತ್ತಾ ಎಲ್ಲವೂ ಬದಲಾಯಿತು. ಜಾಗತೀಕರಣದ ಗಾಳಿ ಬೀಸಿ ಹಳ್ಳಿಗಳು ಮೂಲ ಚಹರೆ ಕಳೆದುಕೊಂಡು ಆಧುನಿಕತೆ ಯತ್ತ ವಾಲಿದವು. ಕೂಡು ಕುಟುಂಬಗಳು ಛಿದ್ರಗೊಂಡು ಪುಟ್ಟಪುಟ್ಟ ಘಟಕಗಳಾಗಿ ಅಂಥ ಘಟಕಗಳು ನಾವಿಬ್ಬರು (ಗಂಡ ಹೆಂಡತಿ) ನಮಗಿಬ್ಬರು ಮಕ್ಕಳು ಎನ್ನುವ ಪರಿಸ್ಥಿತಿ ಬಂತು. ಜನಸಾಮಾನ್ಯರ ಜೀವನ ಶೈಲಿ ಬದಲಾಗುವುದರೊಡನೆ ಮಕ್ಕಳ ಶಿಕ್ಷಣ ವೆಚ್ಚ, ಬೆಲೆಯೇರಿಕೆ ಮುಂತಾದುವುಗಳಿಂದ ಗಂಡ ಹೆಂಡತಿ ಇಬ್ಬರೂ ಉದ್ಯೋಗಕ್ಕೆ ಹೋಗುವುದು ಅನಿವಾರ್ಯ ವಾಯಿತು. ಮಕ್ಕಳನ್ನು ಶಾಲೆಗೆ ಕಳುಹಿಸಿ ಗಂಡ ಹೆಂಡತಿ ಇಬ್ಬರೂ ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗುವುದು ಸುಲಭವಾದರೂ ಮನೆಯಲ್ಲಿ ಹಿರಿಯರೊಬ್ಬರು ಇದ್ದಾಗ ಇಕ್ಕಟ್ಟಿನ ಪರಿಸ್ಥಿತಿಯೂ ಉಂಟಾಯಿತು. ಅಂಥ ಹಿರಿಯರು ತಮ್ಮ ಕೆಲಸವನ್ನು ತಾವೇ ಮಾಡಿಕೊಂಡರೆ ಅಡ್ಡಿಯಿಲ್ಲ. ಆದರೆ ತಮ್ಮ ಕೆಲಸ ತಾವೇ ಮಾಡಿಕೊಳ್ಳಲಾಗದ ಪರಿಸ್ಥಿತಿಯಲ್ಲಿದ್ದರೆ ಆಗ ಸಮಸ್ಯೆ ಎದುರಾ ಗುತ್ತದೆ. ಹಿಂದಿನ ದಿನಗಳಲ್ಲಿ ಬೇರೆ ಬೇರೆ ಕಾರಣಗಳಿಂದ ವೃದ್ಧರ ಸರಾಸರಿ ಆಯುಷ್ಯ 60ಕ್ಕಿಂತ ಕಡಿಮೆ ಇದ್ದದ್ದು ನಂತರದ ವರ್ಷಗಳಲ್ಲಿ ಉತ್ತಮ ಆಹಾರ ಹಾಗೂ ಆರೋಗ್ಯ ಸೇವೆ ಇವುಗಳಿಂದ ಜೀವಿತಾವಧಿಯಲ್ಲಿ ಏರಿಕೆ ಕಂಡು ಅದೀಗ 70-80ರ ಆಸುಪಾಸಿನಲ್ಲಿದೆ. ಇದು ನಂತರದ ಪೀಳಿಗೆಯವರಿಗೆ ಸಮಸ್ಯೆ ಯನ್ನೇ ಸೃಷ್ಟಿಸಿ ಇದೊಂದು ಸಾಮಾಜಿಕ ಪಿಡುಗು ಎನ್ನುವ ಹಂತಕ್ಕೆ ಬಂದು ತಲುಪಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಹಿಂದೆ ದಿಲ್ಲಿಯ ಸಮಾಜ ಕಲ್ಯಾಣ ಇಲಾಖೆ ಸಚಿವೆ ಕಿರಣ್‌ ವಾಲಿಯಾ ಹಿರಿಯರನ್ನು ಸುರಕ್ಷಿತವಾಗಿ ಬಿಟ್ಟು ತೆರಳಲು ಅನುಕೂಲವಾಗು ವಂತೆ ವಸಂತ ಕುಂಜದಲ್ಲಿ ಒಂದು ಸರಕಾರಿ ವಸತಿಗೃಹ ತೆರೆಯುವ ಯೋಜನೆ ಹಾಕಿದ್ದರು. ಇಲ್ಲಿ 60 ವರ್ಷ ದಾಟಿದ ಹಿರಿಯರಿಗೆ ವಸತಿ ಸೌಕರ್ಯವಿದ್ದು ಅವರ ಊಟ ಉಪಹಾರ, ಮನರಂಜನೆಗಾಗಿ ಸಾಂಸ್ಕೃತಿಕ ಚಟುವಟಿಕೆಗಳ ಏರ್ಪಾಟು ಎಲ್ಲ ಸರಕಾರಿ ವೆಚ್ಚದಲ್ಲೇ ನಡೆಯತಕ್ಕದ್ದು ಎಂಬುದರ ಜತೆ ಪ್ರತೀ ನಗರಗಳಲ್ಲೂ ಇಂಥದೊಂದು ವಸತಿ ಗೃಹ ಹಿರಿಯ ಜೀವಿಗಳಿಗೆ ಸಾಂತ್ವನದ ನೆಲೆಯಾಗಲು ಸಾಧ್ಯವಿದೆ ಎಂಬುದು ಅವರ ಯೋಚನೆಯಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡೇ ನಮ್ಮ ಸಂವಿಧಾನಕ್ಕೆ 41ನೆಯ ಕಲಮಿನ ಸೇರ್ಪಡೆಯಾಗಿ ಈ ನಿರ್ದೇಶಕ ತತ್ವದನುಸಾರ ಪ್ರತೀ ರಾಜ್ಯ ತನ್ನಲ್ಲಿ ಲಭ್ಯವಿರುವ ಸಂಪನ್ಮೂಲದ ಆಧಾರದ ಮೇಲೆ ಹಿರಿಯರ ಕಾಳಜಿಗೆ ಆದ್ಯತೆ ನೀಡತಕ್ಕದ್ದು ಎಂಬ ಅಂಶ ಶಾಸನ ಬದ್ಧವಾಗಿ ಜಾರಿಗೆ ಬಂದಿರುವುದಿಲ್ಲ ಎಂಬುದನ್ನು ಮನಗಾಣಬೇಕು.

ಇತ್ತೀಚಿನ ದಿನಗಳಲ್ಲಿ ಕುಟುಂಬದ ಸದಸ್ಯರಿಂದ ವೃದ್ಧರು, ಅಲಕ್ಷಿತರಾಗಿ ಸಾಕಷ್ಟು ಮಾನಸಿಕ ಕಿರುಕುಳಕ್ಕೆ ಒಳಗಾಗುತ್ತಿರುವುದು ಕಂಡು ಬರುತ್ತಿದೆ. ಇದನ್ನು ಸಹಿಸಲಾರದೆ, ಇವರು ಕೆಲವೊಮ್ಮೆ ಆತ್ಮಹತ್ಯೆಯಂಥ ಯೋಚನೆಗಳನ್ನೂ ಮಾಡುವುದಿದೆ. ಇತ್ತೀಚೆಗೆ “ಹೆಲ್ಪ್ ಏಜ್‌ ಇಂಡಿಯಾ’ ಭಾರತದ 23 ನಗರಗಳಲ್ಲಿ ಹಿರಿಯರ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಲು ಒಂದು ಸರ್ವೇ ಕಾರ್ಯ ನಡೆಸಿದೆ. ಈ ಅಧ್ಯಯನದಲ್ಲಿ ಹಿರಿಯರನ್ನು ನಿರ್ಲಕ್ಷಿಸುವಲ್ಲಿ ಮಂಗಳೂರು ಭಾರತದಲ್ಲೇ ಅಗ್ರಸ್ಥಾನ ಪಡೆದಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಸಾಕ್ಷರರನ್ನು ಹೊಂದಿದ ವಿದ್ಯಾಕೇಂದ್ರ, ಸುಸಂಸ್ಕೃತ ನಗರವೆಂಬ ಹೆಗ್ಗಳಿಕೆ ಗಳಿಸಿರುವ ಮಂಗಳೂರಿನ ಮಟ್ಟಿಗೆ ಇದೊಂದು ಕಪ್ಪು ಚುಕ್ಕೆ. ನಂತರದ ಸ್ಥಾನಗಳು ಅಹ್ಮದಾಬಾದ್‌, ಭೋಪಾಲ್‌, ಅಮೃತಸರ್‌ ಹಾಗೂ ದಿಲ್ಲಿಗೆ ಲಭ್ಯವಾಗಿವೆ. ಹಿರಿಯರ ನಿರ್ಲಕ್ಷ್ಯದ ಕುರಿತಾಗಿ ಈ ಎಲ್ಲ ಒಟ್ಟು ಬೆಳವಣಿಗೆಯ ಪರಿಣಾಮವಾಗಿ ಈಗೀಗ ಖಾಸಗಿ ವೃದ್ಧಾಶ್ರಮಗಳು ಅಲ್ಲಲ್ಲಿ ತಲೆಯೆತ್ತಿವೆ. ಇವು ಇತ್ತೀಚಿನ ದಿನಗಳಲ್ಲಿ ಉದ್ಯಮದ ರೂಪ ಪಡೆಯುತ್ತಿದ್ದು ಇಲ್ಲಿ ಹಣ ಗಳಿಕೆಯೇ ಪ್ರಧಾನವಾಗಿ ಹಿರಿಯ ಜೀವಗಳಿಗೆ ಸಾಂತ್ವನದ ನೆಲೆ ಒದಗಿಸುವುದರ ಸಹಿತ ಎಲ್ಲ ಸಕಾರಾತ್ಮಕ ಅಂಶಗಳು ಗೌಣವಾಗಿವೆ. ಹಾಗಾಗಿ ವೃದ್ಧಾಪ್ಯವೆನ್ನುವುದು ಎಲ್ಲರಿಗೂ ಶಾಪವಾಗಿದೆ ಎಂದು ಭಾವಿಸುವಂತಾಗಿದೆ. ವೃದ್ಧರನ್ನು ಹೊರೆಯೆಂದು ಪರಿಗಣಿಸದೇ ಅವರನ್ನು ಭಾವನಾತ್ಮಕ ಹಾಗೂ ಸಂವೇದನಾತ್ಮಕ ನೆಲೆಯಲ್ಲಿ ನೋಡಿದಾಗ ಅವರಿಗೆ ಸಾಂತ್ವನ ಸಿಗಲು ಸಾಧ್ಯವಿದೆ. ಇಂಥ ಭಾವನೆ ಕುಟುಂಬ ಸದಸ್ಯರಲ್ಲಿ ಅಂತರಾಳದಿಂದಲೇ ಮೂಡಿಬರಬೇಕು.

ಕೆ. ಶಾರದಾ ಭಟ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next