ಪ್ಯಾರಿಸ್: 17ನೇ ಶತಮಾನದಲ್ಲಿ ಫ್ರಾನ್ಸ್‌ನಲ್ಲಿ ರಾಜಪ್ರಭುತ್ವವನ್ನು ಕಿತ್ತೂಗೆದು ಜನತಂತ್ರ ವ್ಯವಸ್ಥೆಗೆ ದಾರಿ ಮಾಡಿಕೊಟ್ಟ “ಫ್ರೆಂಚ್ ಕ್ರಾಂತಿ’ ಈಗ ಆ ದೇಶದಲ್ಲಿ ಬೇರೊಂದು ಕಾರಣಕ್ಕಾಗಿ ಮತ್ತೂಮ್ಮೆ ಮರುಕಳಿಸಿದೆ. ತೈಲಗಳ ಮೇಲೆ ತೆರಿಗೆ ಹೆಚ್ಚಳ, ಗಣನೀಯವಾಗಿ ಏರುತ್ತಿರುವ ಜೀವನ ನಿರ್ವಹಣಾ ವೆಚ್ಚಗಳ ವಿರುದ್ಧ ಫ್ರಾನ್ಸ್ ಜನತೆ ಸಿಡಿದೆದ್ದಿದ್ದು ಅವರ ಚಳವಳಿ ಗಳು ಹಿಂಸಾ ಸ್ವರೂಪ ಪಡೆಯುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಫ್ರಾನ್ಸ್ ಸರಕಾರ, ತುರ್ತು ಪರಿಸ್ಥಿತಿ ಜಾರಿಗೊಳಿಸುವ ಮೂಲಕ ಹಿಂಸಾತ್ಮಕ ಪ್ರತಿಭಟನೆಗಳನ್ನು ಹತ್ತಿಕ್ಕಲು ಆಲೋಚಿಸಿದೆ.
“ಯೆಲ್ಲೋ ವೆಸ್ಟ್’ ಕಿಚ್ಚು: ನ.17ರಂದು ಆರಂಭ ವಾಗಿರುವ “ಯೆಲ್ಲೋ ವೆಸ್ಟ್’ ಹೆಸರಿ ನಲ್ಲಿ ನಡೆಯುತ್ತಿರುವ ರ್ಯಾಲಿಗಳಲ್ಲಿ ಲಕ್ಷಾಂತರ ಯುವಜನರು ತಿಳಿ ಹಳದಿ ಬಣ್ಣದ ವೆಸ್ಟ್ ಕೋಟ್‌ಗಳನ್ನು ಧರಿಸಿ ಪ್ರತಿಭಟನೆಗಿಳಿ ಯುತ್ತಿದ್ದಾರೆ. ಹಾಗಾಗಿ, “ಯೆಲ್ಲೋ ವೆಸ್ಟ್’ ಎಂಬುದು ಚಳವಳಿಯ ರೂಪ ತಳೆದಿದೆ. ಆದರೆ, ಈ ಚಳವಳಿ ಕೆಲವು ಕಿಡಿಗೇಡಿಗಳಿಂದ ಆಗಾಗ ಹಿಂಸಾಚಾರಕ್ಕೂ ತಿರುಗುತ್ತಿರುವುದು ಸರಕಾರದ ನಿದ್ದೆಗೆಡಿಸಿದೆ. ಹಿಂಸಾಚಾರದ ವೇಳೆ ದರೋಡೆಕೋರರು, ಶಾಪಿಂಗ್ ಮಾಲ್ ಸೇರಿದಂತೆ ಹಲವಾರು ವಾಣಿಜ್ಯ ಕೇಂದ್ರ ಗಳನ್ನು ಲೂಟಿ ಮಾಡುತ್ತಿದ್ದಾರೆ.
ಶನಿವಾರದ ಹಿಂಸೆ: ಪ್ಯಾರಿಸ್ ನಗರದ ಕೇಂದ್ರ ಭಾಗದಲ್ಲಿ ಶನಿವಾರ ನಡೆದ ಇಂಥದ್ದೇ ಹಿಂಸಾಚಾರದಲ್ಲಿ ದುಷ್ಕರ್ಮಿಗಳು ಹಲ ವಾರು ವಾಹನಗಳಿಗೆ, ಕಟ್ಟಡಗಳಿಗೂ ಅಗ್ನಿ ಸ್ಪರ್ಶ ಮಾಡಿ ಅಪಾರ ಪ್ರಮಾಣದ ಸಾರ್ವ ಜನಿಕ ಆಸ್ತಿಪಾಸ್ತಿ ನಷ್ಟಕ್ಕೆ ಕಾರಣವಾಗಿದ್ದಾರೆ. ಈ ಘಟನೆಯಲ್ಲಿ 20 ಪೊಲೀಸ್ ಸಿಬಂದಿ ಸೇರಿ ದಂತೆ 110 ಜನರು ಗಾಯಗೊಂಡಿದ್ದಾರೆ. 224 ಜನರನ್ನು ಬಂಧಿಸಲಾಗಿದೆ.
ಒತ್ತಡದಲ್ಲಿ ಸರಕಾರ: ಇಂಥ ಹಲವಾರು ಘಟನೆಗಳಿಂದ ಬೇಸತ್ತಿರುವ ಸರಕಾರ ತುರ್ತು ಪರಿಸ್ಥಿತಿ ಬಗ್ಗೆ ಚಿಂತನೆ ನಡೆಸಿದೆ ಎಂದು ಸರಕಾರದ ವಕ್ತಾರ ಬೆಂಜಮಿನ್ ಗ್ರೀವಾಕ್ಸ್ ತಿಳಿಸಿದ್ದಾರೆ. ಆದರೂ, ಶಾಂತಿ ಯುತ ವಾಗಿ ಪ್ರತಿಭಟನೆ ಮಾಡುವವರ ಜತೆಗೆ ಮಾತುಕತೆ ನಡೆಸಲು ಸರಕಾರ ಸಿದ್ಧ ವಿದೆ ಎಂದೂ ಅವರು ಹೇಳಿದ್ದಾರೆ. ಇದರ ಬೆನ್ನಲ್ಲೇ ರವಿವಾರ, ಫ್ರಾನ್ಸ್ ಅಧ್ಯಕ್ಷ ಎಮಾ ನ್ಯುಯೆಲ್ ಮಕ್ರೊನ್ ಅವರು ಪ್ರಧಾನಿ ಎಡೆಲ್ಡ್ ಫಿಲಿಪ್ಪೆ ಹಾಗೂ ಕ್ರಿಸ್ಟೊಫೆ ಕ್ಯಾಸ್ಟನರ್ ಅವರೊಂದಿಗೆ ತುರ್ತು ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ.