ಚಿಂತಾಮಣಿ: ನಗರದಲ್ಲಿ ಮೂವರಿಗೆ ಕೋವಿಡ್ 19 ಸೊಂಕು ಪತ್ತೆಯಾಗಿದ್ದು, ಈಗಾಗಲೇ 230ಕ್ಕೂ ಹೆಚ್ಚು ಜನರನ್ನು ಪರೀಕ್ಷೆಗೊಳಪಡಿಸಿ 59 ಮಂದಿಯನ್ನು ಕ್ವಾರಂಟೈನ್ ಮಾಡ ಲಾಗಿದ್ದು, ಜನತೆ ಅನವಶ್ಯಕವಾಗಿ ಮನೆಗಳಿಂದ ಆಚೆ ಬಾರದೇ ಪೊಲೀಸರಿಗೆ, ಅಧಿಕಾರಿಗಳಿಗೆ ಸಹಕಾರ ನೀಡಬೇಕೆಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಮನವಿ ಮಾಡಿದರು.
ಕೋವಿಡ್ 19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ 19 ತಡೆಗಾಗಿ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 3 ದಿನಗಳ ಹಿಂದೆ ನಗರದ ವಾರ್ಡ್ ನಂ 9ರಲ್ಲಿ ಒಂದೇ ಮನೆಯ ಮೂವರಿಗೆ ಕೋವಿಡ್ 19 ಪತ್ತೆಯಾಗಿದೆ. ಹೀಗಾಗಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಮತ್ತಷ್ಟು ಬಿಗಿ ಮ ಕೈಗೊಳ್ಳಲು ಆರೋಗ್ಯ ಇಲಾಖೆ, ನಗರಸಭೆ, ತಾಲೂಕು ಆಡಳಿತಕ್ಕೆ ಹಲವು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
1200 ಹಾಸಿಗೆ ಸಿದ್ಧಪಡಿಸಿ: ಇನ್ನೂ ನಗರದಲ್ಲಿ ಕಂಡು ಬಂದಿರುವ ಮೂವರ ಸೋಂಕಿತರ ಸಂಪರ್ಕದಲ್ಲಿರುವರನ್ನು ಕ್ವಾರಂಟೈನ್ ಮಾಡಲು ಮುನ್ನೆಚ್ಚರಿಕೆಯಾಗಿ 1200ಕ್ಕೂ ಹೆಚ್ಚಿನ ಹಾಸಿಗೆ ಸಿದಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸೀಲ್ ಡೌನ್ ಪ್ರದೇಶದಲ್ಲಿ ಅನವಶ್ಯಕವಾಗಿ ಓಡಾಡುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದೆಂದರು.
ಇನ್ನೂ ಇದೇ ವೇಳೆ ಸಿಲ್‌ಡೌನ್ ಆಗಿರುವ ವಾರ್ಡ್ ನಂ 9 ರಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆಯಿಂದ ಡ್ರೋನ್ ಕ್ಯಾಮರಾ ಬಳಕೆ ಮಾಡಲಾಗುತ್ತಿದೆ ಎಂದು ಹೇಳಿದರು.
ತಹಶೀಲ್ದಾರ್ ಹನುಮಂತರಾಯಪ್ಪ, ತಾಲೂಕು ಆರೋಗ್ಯಾಧಿಕಾರಿ ರಾಮಚಂದ್ರಾರೆಡ್ಡಿ, ಇಒ ಮಂಜುನಾಥ್, ಡಿವೈಎಸ್ಪಿ ಶ್ರೀನಿವಾಸ್, ಪೌರಾಯುಕ್ತ ಹರೀಶ್, ಬಿಇಒ ಸುರೇಶ್, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನಾಗೇಂದ್ರಬಾಬು, ನಗರ ಠಾಣೆ ಆರಕ್ಷಕ ವೃತ್ತ ನಿರೀಕ್ಷಕ ಆನಂದ್‌ಕುಮಾರ್, ಗ್ರಾಮಾಂತರ ಠಾಣೆ ಆರಕ್ಷಕ ವೃತ್ತ ನಿರೀಕ್ಷಕ ಶ್ರೀನಿವಾಸಪ್ಪ, ಎಲ್ಲಾ ಇಲಾಖೆಗಳ ಅಧಿಕಾರಿಗಳು, ಖಾಸಗಿ ಆಸ್ಪತ್ರೆ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.