Advertisement

ರೈಲು ನಿಲ್ದಾಣದಲ್ಲೇ ತುರ್ತು ಆರೋಗ್ಯ ಸೇವೆ

06:00 AM Jun 24, 2018 | Team Udayavani |

ಮಂಗಳೂರು: ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ಅಗತ್ಯ ಆರೋಗ್ಯ ಸೇವೆಯನ್ನು ಉಚಿತವಾಗಿ ಒದಗಿಸಲು ಮೆಡಿಕಲ್‌ ಬೂತ್‌ನ್ನು ಮಂಗಳೂರು ಸೆಂಟ್ರಲ್‌ ರೈಲ್ವೆ ನಿಲ್ದಾಣದಲ್ಲಿ ತಿಂಗಳೊಳಗೆ ಅಸ್ತಿತ್ವಕ್ಕೆ ಬರಲಿದೆ. ಕರಾವಳಿ ಕರ್ನಾಟಕದಲ್ಲಿ ಮೆಡಿಕಲ್‌ ಕಿಯೋಸ್ಕ್ ಹೊಂದಿರುವ ಮೊದಲ ರೈಲ್ವೆ ನಿಲ್ದಾಣ ಎಂಬ ಹೆಗ್ಗಳಿಕೆಗೆ ಸೆಂಟ್ರಲ್‌ ರೈಲ್ವೆ ನಿಲ್ದಾಣ ಪಾತ್ರವಾಗಲಿದೆ.

Advertisement

ದಿನದ 24 ಗಂಟೆಯೂ ಪ್ರಯಾಣಿಕರಿಗೆ ಆರೋಗ್ಯ ಸಂಬಂಧ ಹಾಗೂ ಇನ್ನಿತರ ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆ ಈ ಬೂತ್‌ ನಲ್ಲಿ ಲಭ್ಯವಾಗಲಿದೆ ಬೂತ್‌ನ ನಿರ್ಮಾಣ, ನಿರ್ವಹಣೆ ಹಾಗೂ ಸಿಬಂದಿಗೆ ವೇತನ ನೀಡುವ ಹೊಣೆಯನ್ನು ಯುನಿಟಿ ಆಸ್ಪತ್ರೆ ಹೊರಲಿದೆ. ಪ್ರಯಾಣಿಕರಿಗೆ ಸೇವೆ ಸಂಪೂರ್ಣ ಉಚಿತ. ಆಸ್ಪತ್ರೆಯವರು ತಮ್ಮ ಸಂಸ್ಥೆಯ ಹೆಸರು ಹಾಗೂ ಲೋಗೋವನ್ನು ಮಾತ್ರ ಬೂತ್‌ನಲ್ಲಿ ಪ್ರದರ್ಶಿಸಬಹುದು. ಬೂತ್‌ ನಿರ್ಮಾಣಕ್ಕೆ ಸ್ಥಳಾವಕಾಶ, ನೀರು, ವಿದ್ಯುತ್ತನ್ನು ರೈಲ್ವೇ ಇಲಾಖೆ ಉಚಿತವಾಗಿ ನೀಡಲಿದೆ.  

ಕಾರ್ಯ ನಿರ್ವಹಣೆ ಹೀಗೆ 
ಪರಿಣತಿ ಹೊಂದಿದ ಈರ್ವರು ಪ್ಯಾರಾ ಮೆಡಿಕಲ್‌ ಸಿಬಂದಿ ಈ ಬೂತ್‌ನಲ್ಲಿ ತುರ್ತು ಸಂದರ್ಭಗಳಲ್ಲಿ ಸೇವೆಗೆ ಲಭ್ಯವಿರುತ್ತಾರೆ. ಹೃದಯಾಘಾತ, ಫಿಟ್ಸ್‌, ಗಂಭೀರ ಗಾಯ ಹಾಗೂ ಇನ್ನಿತರ ಯಾವುದೇ ತುರ್ತು ಸಂದರ್ಭಗಳಲ್ಲಿ ಈ ಸಿಬಂದಿ ಪ್ರಯಾಣಿಕರಿಗೆ ಪ್ರಥಮ ಚಿಕಿತ್ಸೆ ನೀಡುವರು. ಬಳಿಕವೂ ಹೆಚ್ಚಿನ ಚಿಕಿತ್ಸೆ ಬೇಕಿದ್ದಲ್ಲಿ  ರೋಗಿ ತನ್ನ ಇಷ್ಟದ ಆಸ್ಪತ್ರೆಗೆ ತೆರಳಬಹುದು. ಸದ್ಯ ಈ ರೀತಿಯ ಬೂತ್‌ಗಳು ಕೇರಳದ ಶೋರ್ನೂರು, ಮೈಸೂರು, ಬೆಂಗಳೂರು, ಕಣ್ಣೂರು ಹಾಗೂ ಕ್ಯಾಲಿಕಟ್‌ನಲ್ಲಿ ಲಭ್ಯವಿವೆ.  

ಮಂಗಳೂರು ಸೆಂಟ್ರಲ್‌ ರೈಲ್ವೇ ಸ್ಟೇಷನ್‌ ಡೆಪ್ಯುಟಿ ಸ್ಟೇಷನ್‌ ಮ್ಯಾನೇಜರ್‌ ಕಿಶನ್‌ ಕುಮಾರ್‌, “ಸಣ್ಣಪುಟ್ಟ ಅವಘಡ ಸಂಭವಿಸಿದಾಗ ಪ್ರಥಮ ಚಿಕಿತ್ಸೆ ಅತ್ಯಗತ್ಯ.  ಕೆಲವು ಆಸ್ಪತ್ರೆಗಳ ಆಡಳಿತ ವರ್ಗವನ್ನು ಸಂಪರ್ಕಿಸಿ ಮೆಡಿಕಲ್‌ ಬೂತ್‌ ತೆರೆಯುವಂತೆ ಕೋರಲಾಗಿತ್ತು. ಇದೀಗ ಯೂನಿಟಿ ಆಸ್ಪತ್ರೆ ಮುಂದೆ ಬಂದಿದ್ದು, ತಿಂಗಳೊಳಗೆ ಇಲಾಖೆ ನಿಬಂಧನೆಗಳಡಿ ಬೂತ್‌ ಆರಂಭಿಸಲಿದೆ. ಮಂಗಳೂರು ಜಂಕ್ಷನ್‌ ರೈಲ್ವೇ ನಿಲ್ದಾಣದಲ್ಲೂ ಈ ಸೌಲಭ್ಯ ಒದಗಿಸುವ ಯೋಚನೆಯಿದ್ದು, ಖಾಸಗಿ ಆಸ್ಪತ್ರೆಗಳು ಮುಂದೆ ಬಂದರೆ ಇಲಾಖೆ ಅನುಕೂಲ ಕಲ್ಪಿಸಲಿದೆ. ಮೊದಲಿಗೆ ಪ್ರಾಯೋಗಿಕವಾಗಿ ಒಂದು ವರ್ಷದವರೆಗೆ ಅವಕಾಶ ನೀಡಲಾಗುತ್ತದೆ. ಯೋಜನೆ ಯಶಸ್ಸುಗೊಂಡರೆ, ಮುಂದುವರಿಸಲಾಗುವುದು’ ಎಂದರು.  

“ದಿನಪೂರ್ತಿ ಸೇವೆ ನೀಡುವುದು ಕಷ್ಟವಾದರೂ, ಸಮಾಜಸೇವೆಯ ದೃಷ್ಟಿಯಿಂದ ಜವಾಬ್ದಾರಿ ವಹಿಸಿ ಕೊಂಡಿದ್ದೇವೆ. ರೈಲ್ವೇ ಇಲಾಖೆ ಅನುಮತಿ ನೀಡಿದೆ. ಶೀಘ್ರವೇ ಬೂತ್‌ ಕಾರ್ಯಾರಂಭ ಮಾಡಲಿದೆ’ ಎಂದು ಯುನಿಟಿ ಆಸ್ಪತ್ರೆ ಕಾರ್ಯನಿರ್ವಾಹಕ ನಿರ್ದೇಶಕ ಅಶ#ಕ್‌ ಮೊಯೀªನ್‌ ಹೇಳಿದ್ದಾರೆ.

Advertisement

ತುರ್ತು ಸೇವೆ ಪ್ರಾರಂಭಕ್ಕೇನು ಕಾರಣ
ಕೆಲವು ತಿಂಗಳ ಹಿಂದೆ ನಗರದ ಕಾಲೇಜೊಂದರಲ್ಲಿ  ಫಿಸಿಯೋಥೆರಪಿ ಕಲಿಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ದೂರದ ಪ್ರಯಾಣದಿಂದ ಸುಸ್ತಾಗಿ ರೈಲ್ವೇ ನಿಲ್ದಾಣದಲ್ಲೇ ಕುಸಿದು ಬಿದ್ದಳು. ಕೂಡಲೇ ಅಲ್ಲಿದ್ದ ಕೆಲವರು ಫಿಟ್ಸ್‌ ಇರಬಹುದೆಂದು ಭಾವಿಸಿ ಕಬ್ಬಿಣ ಕೈಯಲ್ಲಿಟ್ಟು ಉಪಚರಿಸಲು ಪ್ರಯತ್ನಿಸಿದರು. ತಕ್ಷಣ ಆ್ಯಂಬುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿದಾಗ ಆಕೆಯು ನರ ಸಂಬಂಧಿಸಿದ ಖಾಯಿಲೆಯಿಂದ ಬಳಲುತ್ತಿದ್ದದ್ದು ಖಾತ್ರಿಯಾಯಿತು. ಮತ್ತೂಂದು ಪ್ರಕರಣದಲ್ಲಿ ಪ್ರಯಾಣಿಕರೋರ್ವರು ರೈಲಿನಿಂದ ಜಾರಿ ಬಿದ್ದು ತೀವ್ರವಾಗಿ ಗಾಯಗೊಂಡಾಗ ಆ್ಯಂಬುಲೆನ್ಸ್‌ಗೆ ಕರೆ ಮಾಡಿದರೆ, ಅರ್ಧ ಗಂಟೆ ತಡವಾಗಿ ಬಂದಿತು. ಇಂಥ ಪ್ರಕರಣಗಳ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣದ ಡೆಪ್ಯುಟಿ ಸ್ಟೇಷನ್‌ ಮ್ಯಾನೇಜರ್‌ ಕಿಶನ್‌ ಕುಮಾರ್‌ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿ, ಬೂತ್‌ ಸ್ಥಾಪನೆ ಕುರಿತು ಮನವಿ ಮಾಡಿದರು. ಇದರನ್ವಯ ತುರ್ತು ಸೇವಾ ಘಟಕ ಸ್ಥಾಪನೆಗೆ ದಕ್ಷಿಣ ರೈಲ್ವೇ ವಲಯ ಒಪ್ಪಿಗೆ ನೀಡಿದೆ.  

ಅಂಕಿ ಲೋಕ
ಮಂಗಳೂರು ಸೆಂಟ್ರಲ್‌ ರೈಲ್ವೆ ನಿಲ್ದಾಣಕ್ಕೆ ಪ್ರತಿದಿನ ಬಂದು ಹೋಗುವ ಪ್ರಯಾಣಿಕರು 30,000 
50ಕ್ಕೂ ಹೆಚ್ಚು ರೈಲುಗಳು ನಿತ್ಯವೂ ಓಡಾಟ    
ಸದ್ಯ ನಿಲ್ದಾಣದೊಳಗೆ ತುರ್ತು ಸೇವೆಗೆ  ಆ್ಯಂಬ್ಯುಲೆನ್ಸ್‌  ಇಲ್ಲ   

ಗಣೇಶ್‌ ಮಾವಂಜಿ 

Advertisement

Udayavani is now on Telegram. Click here to join our channel and stay updated with the latest news.

Next