ಯಾದಗಿರಿ: ರಾಜ್ಯದಲ್ಲಿ ಚರ್ಚೆಯಾಗುತ್ತಿರುವ ಮುಡಾ ಹಗರಣವನ್ನು ಡೈವರ್ಟ್ ಮಾಡಲು ಜಾತಿ ಜನಗಣತಿ ವರದಿ ಜಾರಿಗೆ ತರುವ ರಾಜಕೀಯ ಗಿಮಿಕ್ ನಡೆಯುತ್ತಿದೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಆರೋಪಿಸಿದರು.
ಯಾದಗಿರಿ ನಗರದಲ್ಲಿ ಜಾತಿಗಣತಿ ವಿಚಾರದ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಜಾತಿಗಣತಿ ವರದಿಯು ಅವೈಜ್ಞಾನಿಕವಾಗಿದ್ದು, ಕೆಲವು ಮನೆಗೆ ಹೋಗಿ ಸರ್ವೆ ಮಾಡಿದರೆ ಇನ್ನೂ ಕೆಲ ಮನೆಗಳಿಗೆ ಹೋಗಿ ಸರ್ವೇ ಮಾಡಿಲ್ಲ, ರಾಜ್ಯದಲ್ಲಿ ಜಾತಿಗಣತಿ ಬಗ್ಗೆ ಸ್ಪಷ್ಟತೆ ಇರಬೇಕು ಎಂದರು.
ನನ್ನ ಮನೆಗೆ ಬಂದು ಸಮೀಕ್ಷೆ ಮಾಡಿಲ್ಲವೆಂದು ಶಾಸಕ ಶರಣಗೌಡ ಕಂದಕೂರು ಆರೋಪ ಮಾಡಿದರು.
ಸಚಿವ ಸಂಪುಟದಲ್ಲಿ ಚರ್ಚೆ ಮಾಡಬೇಡ ಎಂದು ಬಿಜೆಪಿ ಹಾಗೂ ಜೆಡಿಎಸ್ ನವರು ಎಲ್ಲೂ ಹೇಳಿಲ್ಲ, ಈ ಬಗ್ಗೆ ಸಾಧಕ ಬಾಧಕ ಚರ್ಚೆ ಮಾಡಬೇಕು. ಸಮೀಕ್ಷೆ ಮಾಡಿಲ್ಲವೆಂಬ ಅಭಿಪ್ರಾಯದ ಬಗ್ಗೆ ಸರಕಾರ ಮನ್ನಣೆಗೆ ತೆಗೆದುಕೊಳ್ಳಬೇಕು, ಸಮೀಕ್ಷೆ ಮಾಡಿ ಈಗ 10 ವರ್ಷವಾಯಿತು.10 ವರ್ಷದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಸರಕಾರದ ಇದರ ಬಗ್ಗೆ ಗಮನ ಹರಿಸಬೇಕು, ಜಾತಿ ಜನಗಣತಿ ವರದಿಯು ಅವೈಜ್ಞಾನಿಕ ವರದಿ ಎಂದು ಈಗಾಗಲೇ ಕಾಂಗ್ರೆಸ್ ನವರೇ ಹೇಳುತ್ತಿದ್ದಾರೆ ಎಂದು ಹೇಳಿದರು.
ಸರ್ವ ಪಕ್ಷಗಳ ಅಭಿಪ್ರಾಯ ಗಣನೆಗೆ ತೆಗೆದುಕೊಂಡು ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕು. ಜಾತಿಗಣತಿ ಪಾರದರ್ಶಕವಾಗಿರಬೇಕು ಎಂದರು.
ಮುಡಾ ಹಗರಣದ ಬಗ್ಗೆ ಸಿದ್ದರಾಮಯ್ಯನವರ ರಾಜೀನಾಮೆ ಪ್ರಸ್ತಾಪ ಆಗಿದ್ದು, ಒಂದು ವೇಳೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆ ನೀಡಿದರೆ ರಾಜ್ಯದಲ್ಲಿ ಕಾಂಗ್ರೆಸ್ ಗತಿ ಏನಾಗುತ್ತದೆ ಎಂಬುದು ಸ್ವತಃ ಕಾಂಗ್ರೆಸ್ ನಾಯಕರಿಗೂ ತಿಳಿದಿದೆ ಎಂದು ಟೀಕಿಸಿದರು.
ನಮ್ಮ ಪಕ್ಷದ ರಾಜಾಧ್ಯಕ್ಷರಾಗಲಿ ಅಥವಾ ನಾವಾಗಲಿ ಎಲ್ಲೂ ಸಹ ಜೆಡಿಎಸ್ ನವರು ಸಿದ್ದರಾಮಯ್ಯನವರ ರಾಜೀನಾಮೆ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.