ದಾವಣಗೆರೆ: ರಾಜ್ಯ ಸರ್ಕಾರ ಶಿಕ್ಷಣದಲ್ಲಿ ಭಗವದ್ಗೀತೆ ಅಧ್ಯಯನ ಅಳವಡಿಸಲು ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಆಗ್ರಹಿಸಿದರು.
ಭಾನುವಾರ ದಾವಣಗೆರೆಯ ರಾಷ್ಟ್ರೋತ್ಥಾನ ಶಾಲಾ ಆವರಣದಲ್ಲಿ ನಡೆದ ಭಗವದ್ಗೀತೆ ಅಭಿಯಾನದ ರಾಜ್ಯ ಮಟ್ಟದ ಮಹಾಸಮರ್ಪಣಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಮತ್ತು ಯುವ ಸಮುದಾಯದಲ್ಲಿ ಸಂಸ್ಕಾರದ ಕೊರತೆ ಕಂಡು ಬರುತ್ತಿದೆ. ಅತೀ ಚಿಕ್ಕ ವಯೋಮಾನದಲ್ಲೇ ಆತ್ಮಹತ್ಯೆಯಂತಹ ಘೋರ ಹಾದಿ ತುಳಿಯುತ್ತಿರುವುದು ಆತಂಕಕಾರಿ. ಬಾಲ್ಯದಲ್ಲೇ ಭಗವದ್ಗೀತೆ ಅಧ್ಯಯನ ಕಲಿಸುವುದರಿಂದ ಅನೇಕ ಸಮಸ್ಯೆ ದೂರವಾಗಲಿವೆ. ಶಿಕ್ಷಣದಲ್ಲೂ ಭಗವದ್ಗೀತೆ ಅಧ್ಯಾಯ ಅಳವಡಿಸುವತ್ತ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಗವದ್ಗೀತೆಯ ಪ್ರಮುಖ ಅಂಶ ನಿಷ್ಕಾಮ ಕರ್ಮದ ಬೋಧನೆ ಆಗಿದೆ. ಈಚೆಗೆ ಭಾರತೀಯರಲ್ಲಿ ನಿಷ್ಕ್ರಿಯತೆ ಬಗ್ಗೆ ಪ್ರೀತಿ ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ. ಕಳೆದ ಕೆಲ ವರ್ಷಗಳ ಹಿಂದೆ ಮೈಸೂರು ಮಹಾರಾಜ ಶ್ರೀಕಂಠದತ್ತ ಒಡೆಯರು ನಿಧನರಾದ ಹಿನ್ನೆಲೆಯಲ್ಲಿ ಸರ್ಕಾರ ಮೂರು ದಿನಗಳ ಶೋಕಾಚರಣೆ ಘೋಷಣೆ ಮಾಡಿತ್ತು. ಅನೇಕರು ಶೋಕಾಚರಣೆಯ ಬದಲಾಗಿ ಖುಷಿ ಪಟ್ಟಿದ್ದು ಸಹ ಕಂಡು ಬಂದಿತು. ಕ್ರಿಯಾಶೀಲತೆಯ ಬಗ್ಗೆ ಪ್ರೀತಿ ಬೆಳೆಸಬೇಕಾದ ಅಗತ್ಯತೆ ಇದೆ. ಭಗವದ್ಗೀತೆ ಕ್ರಿಯಾಶೀಲತೆಯೆಡೆ ಪ್ರೀತಿ ಬೆಳೆಸುವ ಹಿನ್ನೆಲೆಯಲ್ಲೂ ಶಿಕ್ಷಣದಲ್ಲಿ ಭಗವದ್ಗೀತೆ ಅಳವಡಿಸಬೇಕು ಎಂದು ಪ್ರತಿಪಾದಿಸಿದರು.
ಇದನ್ನೂ ಓದಿ:ಏಕದಿನ ಸರಣಿಯಿಂದಲೇ ಹೊರಬಿದ್ದ ಪಂತ್: ಸ್ಪಷ್ಟ ಕಾರಣ ತಿಳಿಸದ ಬಿಸಿಸಿಐ
ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಹರಿಹರದ ಎರೇಹೊಸಹಳ್ಳಿಯ ವೇಮನ ಸಂಸ್ಥಾನ ಮಠದ ಶ್ರೀ ವೇಮನಾನಂದ ಸ್ವಾಮೀಜಿ, ದಾವಣಗೆರೆ ರಾಮಕೃಷ್ಣ ಆಶ್ರಯದ ಶ್ರೀ ತ್ಯಾಗೀಶ್ವರಾ ನಂದಜೀ ಮಹಾರಾಜ್, ವಿಧಾನ ಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಡಾ. ಜಿ.ಎಂ. ಸಿದ್ದೇಶ್ವರ, ಮೇಯರ್ ಜಯಮ್ಮ ಗೋಪಿನಾಯ್ಕ ಇತರರು ಭಾಗವಹಿಸಿದ್ದರು.