ಬೆಂಗಳೂರು: ರಾಜ್ಯದ ಹಲವೆಡೆ ಸೋಮವಾರ ಸಂಜೆ 7.30ರ ಸುಮಾರಿಗೆ ಆಗಸದಲ್ಲಿ ಬೆಳಕಿನ ಸರಮಾಲೆಯೊಂದು ಗೋಚರಿಸಿದೆ. ಆಕಾಶದಲ್ಲಿ ಬೆಳಕಿನ ಉದ್ದನೆಯ ಮಾಲೆಯೊಂದು ಹಾದುಹೋಗುವುದನ್ನು ಕಂಡ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ಬೆಳಕಿನ ಸರಮಾಲೆಯ ಚಿತ್ರಗಳನ್ನು, ವಿಡಿಯೋಗಳನ್ನು ಹಲವರು ಸಾಮಾಜಿಕ ಜಾಲತಾಣಗಲ್ಲಿ ಹಂಚಿಕೊಂಡು, ಅದೇನೆಂದು ಪ್ರಶ್ನಿಸಿದ್ದಾರೆ. ರಾಕೆಟ್ ಗಳು ಹೋಗುತ್ತಿರಬಹುದೇ? ಉಲ್ಕೆಗಳು ಇರಬಹುದೇ ಎಂಬಿತ್ಯಾದಿ ಅನುಮಾನಗಳನ್ನು ಜನರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಅಸಲಿಗೆ ಇದು ಸ್ಟಾರ್ ಲಿಂಗ್ ಸ್ಯಾಟಲೈಟ್. ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಕ್ಯಾಲಿಫೋರ್ನಿಯಾ ಹತ್ತಿರದ ಉಡಾವಣೆ ಕೇಂದ್ರದಿಂದ 52 ಸ್ಟಾರ್ ಲಿಂಕ್ ಸ್ಯಾಟ್‌ಲೈಟ್‌ಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಸ್ಟಾರ್ಲಿಂಕ್ನ ರಾಕೆಟ್ಗಳು ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿವೆ. ಇದು ಸ್ಟಾರ್‌ಲಿಂಕ್ ಕಂಪನಿಯ 34ನೇ ಉಡಾವಣೆಯಾಗಿದ್ದು, ಭೂಮಿಯ ಕೆಳಹಂತದ ಕಕ್ಷೆಗೆ 2000 ಉಪಗ್ರಹಗಳನ್ನು ಸೇರಿಸುವ ಗುರಿಯನ್ನು ಸ್ಟಾರ್‌ಲಿಂಕ್ ಇಟ್ಟುಕೊಂಡಿದೆ.
ಸ್ಟಾರ್ ಲಿಂಕ್ ಸ್ಯಾಟ್‌ಲೈಟ್ ಆಧರಿತ ಜಾಗತಿ ಇಂಟರ್ನೆಟ್ ಸಿಸ್ಟಮ್ ಆಗಿದೆ. ಹಲವು ವರ್ಷಗಳಿಂದ ಈ ದಿಶೆಯಲ್ಲಿ ಕೆಲಸ ಮಾಡುತ್ತಿರುವ ಸ್ಪೇಸ್ ಎಕ್ಸ್ ಜಗತ್ತಿನ ಇಂಟರ್ನೆಟ್ ರಹಿತ ಪ್ರದೇಶಗಳಿಗೂ ಇಂಟರ್ನೆಟ್ ಸೌಲಭ್ಯ ಕಲ್ಪಿಸಲು ಮುಂದಾಗುತ್ತಿದೆ.
ಎಲಾನ್ ಮಸ್ಕ್ ಒಡೆತನತದ ಸ್ಟಾರ್‌ಲಿಂಕ್ ಭಾರತದಲ್ಲೂ ಸ್ಯಾಟಲೈಟ್ ಇಂಟರ್ನೆಟ್ ಸೇವೆಯನ್ನು ಒದಗಿಸಲು ಸರ್ಕಾರದ ಅನುಮತಿಗಾಗಿ ಮುಂದಿನ ಜನವರಿಯಲ್ಲಿ ಅರ್ಜಿ ಸಲ್ಲಿಸಲಿದ್ದು, ಜನವರಿ ಅಂತ್ಯಕ್ಕೆ ಒಪ್ಪಿಗೆ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ವಿಷಯವನ್ನು ಸ್ಟಾರ್‌ಲಿಂಕ್ ನ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಇದರೊಂದಗೆ ಭಾರತದಲ್ಲಿ ಶೀಘ್ರವೇ ಉಪಗ್ರಹ ಆಧರಿತ ಇಂಟರ್ನೆಟ್ ಸೇವೆಯನ್ನು ನಿರೀಕ್ಷಿಸಬಹುದಾಗಿದೆ.