ನಾಟಿಂಗಂ: ಪ್ರವಾಸಿ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ವನಿತೆಯರ ನಡುವೆ ಏಕೈಕ ಆ್ಯಶಸ್ ಟೆಸ್ಟ್ ನಾಟಿಂಗಂನಲ್ಲಿ ನಡೆಯುತ್ತಿದೆ. ಮೊದಲ ದಿನದ ಆಟ ಸಾಗುತ್ತಿದ್ದು ಆಸ್ಟ್ರೇಲಿಯ 6 ವಿಕೆಟಿಗೆ 243 ರನ್ ಗಳಿಸಿ ಆಡುತ್ತಿದೆ. ಉತ್ತಮವಾಗಿ ಆಡುತ್ತಿದ್ದ ಎಲಿಸ್ ಪೆರ್ರಿ 99 ರನ್ ಗಳಿಸಿ ಔಟಾಗಿ ನಿರಾಶೆ ಅನುಭವಿಸಿದ್ದಾರೆ.
ಶತಕ ದಾಖಲಿಸುವ ತವಕದಲ್ಲಿದ್ದ ಪೆರ್ರಿ 99 ರನ್ ಪೇರಿಸಿದ ವೇಳೆ ಎಡವಿ ಫಿಲರ್ ಅವರಿಗೆ ವಿಕೆಟ್ ಒಪ್ಪಿಸಿದರು. ಅವರು 153 ಎಸೆತ ಎದುರಿಸಿದ್ದು 15 ಬೌಂಡರಿ ಬಾರಿಸಿದ್ದರು. ಅವರು ತಹ್ಲಿಯಾ ಮೆಕ್‌ಗ್ರಾಥ್ ಜತೆ ಮೂರನೇ ವಿಕೆಟಿಗೆ 119 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡಿದ್ದರು.
ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯ ಉತ್ತಮ ಆರಂಭ ಪಡೆಯಿತು. ಆರಂಭಗಾರ್ತಿಯ ರಾಗಿದ್ದ ಬೆತ್ ಮೂನಿ ಮತ್ತು ಫೋಬ್ ಲಿಚ್‌ಫೀಲ್ಡ್ ಮೊದಲ ವಿಕೆಟಿಗೆ 35 ರನ್ ಪೇರಿಸಿದರು. ಮೂನಿ 33 ಮತ್ತು ಲಿಚ್‌ಫೀಲ್ಡ್ 23 ರನ್ ಹೊಡೆದರು. ಆಬಳಿಕ ಬಂದ ತಹ್ಲಿಯಾ ಮೆಕ್‌ಗ್ರಾಥ್ 83 ಎಸೆತ ಎದುರಿಸಿದ್ದು 61 ರನ್ ಗಳಿಸಿದ್ದರು.
ಬಿಗು ದಾಳಿ ಸಂಘಟಿಸಿದ ಸೋಫಿ ಎಕ್ಲೆಸ್ಟೋನ್ 49 ರನ್ನಿಗೆ 3 ವಿಕೆಟ್ ಪಡೆದರೆ ಲಾರೆನ್ ಫಿಲರ್ 54 ರನ್ನಿಗೆ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರು
ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್: ಆರು ವಿಕೆಟಿಗೆ 243 (ಬೆತ್ ಮೂನಿ 33, ಲಿಚ್‌ಫೀಲ್ಡ್ 23, ಎಲಿಸ್ ಪೆರ್ರಿ 99, ತಹ್ಲಿಯಾ ಮೆಕ್‌ಗ್ರಾಥ್ 61, ಎಕ್ಲೆಸೋನ್ 49ಕ್ಕೆ 3, ಲಾರೆನ್ ಫಿಲರ್ 54ಕ್ಕೆ 2).