Advertisement

ಯಕ್ಷ ಸೌರಭ ಪ್ರಶಸ್ತಿಗೆ ಎಳ್ಳಂಪಳ್ಳಿ ಜಗನ್ನಾಥ ಆಚಾರ್‌

06:00 AM Mar 16, 2018 | |

ಕೋಟದ ಹಿರೇಮಹಾಲಿಂಗೇಶ್ವರ ಕಲಾರಂಗದ ಯಕ್ಷ ಸೌರಭ ಪ್ರಶಸ್ತಿಯನ್ನು ಈ ಬಾರಿ ಹಿರಿಯ ಬಣ್ಣದ ವೇಷದಾರಿ ಮಂದಾರ್ತಿ ಮೇಳದ ಕಲಾವಿದ ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯರಿಗೆ ಮಾ.17ರಂದು ಪ್ರದಾನಿಸಲಾಗುವುದು. 

Advertisement

ತೆಂಕು ತಿಟ್ಟಿಗೆ ಹೋಲಿಸಿದಾಗ ಬಡಗಿನಲ್ಲಿ ಬಣ್ಣದ ವೇಷದಾರಿಗಳು ಬೆರಳೆಣಿಕೆಯಷ್ಟು ಮಾತ್ರ.ಇಂತಹ ಕಾಲಘಟ್ಟದಲ್ಲಿ ಯಕ್ಷಲೋಕದಲ್ಲಿ ನಲವತ್ತೆಂಟು ವರ್ಷ ಕಾಲ ಬಣ್ಣದ ವೇಷಧಾರಿಯಾಗಿ ಮೆರೆದ ಆಚಾರ್ಯರು ಗಮನ ಸೆಳೆಯುತ್ತಾರೆ. ನೀಲಾವರ ಸಮೀಪದ ಎಳ್ಳಂಪಳ್ಳಿ ಗ್ರಾಮದ ಶೀನ ಆಚಾರ್‌ ಮತ್ತು ಅಕ್ಕಯ್ಯ ದಂಪತಿಗಳ ಮಗನಾದ ಜಗನ್ನಾಥ ಆಚಾರ್ಯರು ಕಡುಬಡತನದಲ್ಲಿ ಬೆಳೆದ ಕಾರಣ 5ನೇ ತರಗತಿ ವಿದ್ಯೆಗೆ ತಿಲಾಂಜಲಿ ನೀಡಿ ಬಾಲಗೋಪಾಲರಾಗಿ ಮಂದಾರ್ತಿ ಮೇಳದಲ್ಲಿ ಗೆಜ್ಜೆ ಕಟ್ಟಿದರು.ಆಗ ಮೇಳದಲ್ಲಿದ್ದ ಉಡುಪಿ ಬಸವ, ವಂಡ್ಸೆ ನಾರಾಯಣ ಗಾಣಿಗ,ಪೇತ್ರಿ ಮಾದು ನಾಯಕ ಹಾಗೂ  ರಾಮ ನಾಯರಿ,ವೀರಭದ್ರ ನಾಯಕ್‌ ,ನೀಲಾರ ರಾಮಕೃಷ್ಣಯ್ಯ , ಹಿರಿಯಡಕ ಗೋಪಾಲ ರಾಯರಿಂದ ಯಕ್ಷಗಾನ ಅಭ್ಯಾಸ ಮಾಡಿದರು. 1980ರಲ್ಲಿ ಸಾಲಿಗ್ರಾಮ ಮೇಳ ಸೇರಿದ ಅಚಾರ್ಯರು ಅಧಿಕೃತ ಬಣ್ಣದ ವೇಷಧಾರಿಯಾದರು. ಕಾಳಿಂಗ ನಾವಡರು  ಇವರನ್ನು ಆಗಿನ ಬಣ್ಣದ ವೇಷದಾರಿ ಸಕ್ಕಟ್ಟುವಿನವರ ಉತ್ತರಾಧಿಕಾರಿಯೆಂದು ಘೋಷಿಸಿದ್ದರು. ಅಲ್ಲಿನ ಮೂರು ವರ್ಷದ ತಿರುಗಾಟದ ನಂತರ ಮಂದಾರ್ತಿ ಮೇಳದಲ್ಲಿ ಕೆಂಪು ಮುಂಡಾಸಿನ ವೇಷದೊಂದಿಗೆ ಬಣ್ಣದ ವೇಷಗಳನ್ನು ಮಾಡುತ್ತಾ ಜನಪ್ರಿಯರಾದರು. 

ಶಿವರಾಮ ಕಾರಂತರ ಯಕ್ಷರಂಗ ಸೇರಿಕೊಂಡ ಆಚಾರ್ಯರು ಸಾಂಪ್ರದಾಯಿಕ ಶೈಲಿಯ ಬಣ್ಣದ ಮುಖವರ್ಣಿಕೆ, ಒಡ್ಡೋಲಗ ಕ್ರಮ, ವೇಷಭೂಷಣ, ನಡೆಗಳ ಕುರಿತಾದ ಅಧ್ಯಯನ ಮಾಡಿದರು. ಶೂರ್ಪನಖಾ, ಹಿಡಿಂಬೆ ಮತ್ತು ಹಿಡಿಂಬಾಸುರ, ದುರ್ಜಯಾಸುರ, ಕಾಲಜಂಗ , ವ್ರತ್ತಜ್ವಾಲೆ, ಘೋರಭೀಷಣ, ಮೇಘಸ್ಥನಿ, ಘಟೋತ್ಕಜ, ವೀರಭದ್ರ ತಮಾಲಕೇತ ಮುಂತಾದ ಬಣ್ಣ ಹಾಗು ಒತ್ತು ಬಣ್ಣದ ವೇಷಗಳು ಆಚಾರ್ಯರಿಗೆ ಕೀರ್ತಿ ತಂದಿವೆ.  

ಇವರು ಮುಖವರ್ಣಿಕೆ ಬಗ್ಗೆ ಬಹು ಎಚ್ಚರವಹಿಸುವ ಕಲಾವಿದ.ದಿನವೂ ಹುಳಿ ಅಕ್ಕಿಹಿಟ್ಟಿನ ಚಿಟ್ಟೆ ಇಡುವ ಕ್ರಮ ಇವರದ್ದು. ಸುಮಾರು ಐದು ಗಂಟೆಗಳ ಕಾಲ ಚೌಕಿಯಲ್ಲಿ ಕುಳಿತು ಮುಖವರ್ಣಿಕೆಯಲ್ಲಿ ತೊಡಗುವ ಇವರ ಶ್ರದ್ಧೆ, ತಾಳ್ಮೆ ಅನುಕರಣೀಯ.

ಪ್ರೊ| ಎಸ್‌.ವಿ.ಉದಯ ಕುಮಾರ ಶೆಟ್ಟಿ 

Advertisement
Advertisement

Udayavani is now on Telegram. Click here to join our channel and stay updated with the latest news.

Next