Advertisement

ಪವಿತ್ರ ತೀರ್ಥಸ್ನಾನದಿಂದ ಸಕಲ ಪಾಪ ಮುಕ್ತಿ

11:17 PM Jan 01, 2022 | Team Udayavani |

ಹಿಂದೂ ಕ್ಯಾಲೆಂಡರಿನ ಪ್ರಕಾರ ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯನ್ನು ಎಳ್ಳು ಅಮಾವಾಸ್ಯೆಯೆಂದು ಆಚರಿಸುತ್ತಾರೆ. ಆ ದಿನ ಪುಣ್ಯಸ್ಥಳಗಳ ಪುಷ್ಕರಣಿ, ಸಮುದ್ರ ತೀರಗಳು, ಜೋಮ್ಲು ತೀರ್ಥ, ಗೋವಿಂದ ತೀರ್ಥದಂತಹ ನೈಸರ್ಗಿಕ ಜಲಧಾರೆಯಲ್ಲಿ ಪವಿತ್ರ ತೀರ್ಥಸ್ನಾನ ಮಾಡಿದರೆ ಭಕ್ತಾದಿಗಳ ಎಲ್ಲ ರೀತಿಯ ಪಾಪಗಳು, ಈ ಪಾಪಕರ್ಮಗಳಿಂದಾಗಿ ಅನುಭವಿಸುತ್ತಿರುವ ರೋಗಗಳು, ಅಶಾಂತಿ ನಿವಾರಣೆಯಾಗಿ, ನೆಮ್ಮದಿಯಾದ ಜೀವನವನ್ನು ನಡೆಸಿ, ಮೋಕ್ಷವನ್ನು ಹೊಂದಬಹುದು ಎನ್ನುವ ಪ್ರತೀತಿಯಿದೆ. ಇದಲ್ಲದೆ ಪರಮೇಶ್ವರನ ಸನ್ನಿಧಾನದಲ್ಲಿಯಾದರೆ ರುದ್ರಾಭಿಷೇಕ ಮೊದಲಾದ ಸೇವೆಗಳನ್ನು ಮಾಡಿ ಅಪೇಕ್ಷೆಗಳನ್ನು ಈಡೇರಿಸಿಕೊಳ್ಳಬಹುದು.

Advertisement

ಸನಾತನ ಭಾರತೀಯರ ಪರ್ವಕಾಲಗಳಲ್ಲಿ ಉತ್ತರಾಯಣ ಪರ್ವ ಕಾಲ ಅತ್ಯಂತ ಪುಣ್ಯ ಕಾಲವಾಗಿದ್ದು, ಮಕರ ಸಂಕ್ರಮಣದಿಂದ ಆರಂಭಗೊಂಡು, ಕರ್ಕಾಟಕ ಸಂಕ್ರಮಣದವರೆಗಿನ ಕಾಲವನ್ನು ಉತ್ತರಾಯಣ, ಕರ್ಕಾಟಕ ಸಂಕ್ರಮಣ ದಿಂದ ಮಕರ ಸಂಕ್ರಮಣದವರೆಗಿನ ಕಾಲವನ್ನು ದಕ್ಷಿಣಾಯಣ ಕಾಲ ಎನ್ನುತ್ತಾರೆ. ಮುಂಬರುವ ಮಕರ ಸಂಕ್ರಾಂತಿಯಿಂದ ದಕ್ಷಿಣಾಯಣ ಕಾಲ ಮುಗಿದು, ಉತ್ತರಾಯಣ ಕಾಲ ಆರಂಭ ವಾಗುವುದರಿಂದ ಎಳ್ಳಮಾವಾಸ್ಯೆ ದಿನ ಪುಣ್ಯ ಸ್ಥಳಗಳಲ್ಲಿ ತೀರ್ಥಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಈ ದಿನ ಪಿತೃ ದೇವತೆಗಳಿಗೆ ಪ್ರಿಯವಾದ ತರ್ಪಣ, ಶ್ರಾದ್ಧಾದಿಗಳಿಗೆ ವಿಶೇಷ ಪ್ರಾಶಸ್ತÂವಿದೆ. ಈ ದಿನ ಮಾಡುವ ತೀರ್ಥಸ್ನಾನ, ಧ್ಯಾನ, ದಾನ, ಹೋಮ, ಪೂಜೆ, ತರ್ಪಣ, ಶ್ರಾದ್ಧ ಇನ್ನಿತರ ಕಾರ್ಯಗಳಿಗೆ ಹೆಚ್ಚಿನ ಫಲ ಸಿಗುತ್ತದೆ ಎನ್ನುವುದಾಗಿ ಶಾಸ್ತ್ರಗಳು ತಿಳಿಸುತ್ತವೆ.

ಎಳ್ಳಮಾವಾಸ್ಯೆ ದಿನ ತೀರ್ಥಸ್ನಾನವೇ ಪ್ರಮುಖ ವಾದುದು. ಅದರಲ್ಲೂ ಕೊಡಚಾದ್ರಿ ಯಿಂದ ಬರುವಂತಹ 64 ಪುಣ್ಯ ತೀರ್ಥಗಳ ಪೈಕಿ ಬೆಳ್ಕಲ್‌ತೀರ್ಥವು ಒಂದು. ಸಂಸ್ಕೃತದಲ್ಲಿ ರಜತ ಶಿಲಾ ತೀರ್ಥ ಎನ್ನುತ್ತಾರೆ. ಮೇಲಿನಿಂದ ನೀರು ಬೀಳುವ ಸ್ಥಳದಲ್ಲಿ ನಿಂತು ಗೋವಿಂದ, ಗೋವಿಂದ ಎಂದು ಕೂಗಿದರೆ ನೀರು ಬೀಳುತ್ತದೆ ಎನ್ನುವ ಪ್ರತೀತಿ ಇರುವುದರಿಂದ ಗೋವಿಂದ ತೀರ್ಥ ಎಂದೂ ಕರೆಯುತ್ತಾರೆ. ಇಲ್ಲಿ ಎಳ್ಳಮಾವಾಸ್ಯೆ ದಿನ ಪವಿತ್ರ ತೀರ್ಥಸ್ನಾನಕ್ಕೆ ವಿಶೇಷವಾದ ಮಹತ್ವವಿದೆ. ಪ್ರತೀ ಅಮಾವಾಸ್ಯೆಯ ದಿನದಂದು ಎಳ್ಳಿನ ದಾನವನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಎಳ್ಳಿಗೆ ಪಾಪವನ್ನು ನಾಶ ಮಾಡುವ ಶಕ್ತಿಯಿದೆ ಎನ್ನುವ ನಂಬಿಕೆಯಿದೆ.

ಇದನ್ನೂ ಓದಿ:ಕೋವಿಡ್ ಹಿನ್ನೆಲೆ : ಸಾಮೂಹಿಕ ಕೇಶ ಮುಂಡನೆ ಮಾಡಿ ಹರಕೆ ತೀರಿಸಿದ ಗ್ರಾಮಸ್ಥರು

ಐತಿಹ್ಯ: ಪಾಂಡವರು ಕುರುಕ್ಷೇತ್ರ ಯುದ್ಧದಲ್ಲಿ ಮಡಿದ ತಮ್ಮ ಬಂಧುಗಳ ಮೋಕ್ಷಕ್ಕಾಗಿ, ಶಾಂತಿ ಗೋಸ್ಕರ ಪಿಂಡ ಪ್ರದಾನ ಮಾಡುವ ದಿನವೇ ಎಳ್ಳಮಾವಾಸ್ಯೆ ಎನ್ನುವುದು ಪುರಾಣ ಐತಿಹ್ಯ.

Advertisement

ಉ.ಕರ್ನಾಟಕದಲ್ಲಿ ರೈತರ ಹಬ್ಬ ಕರಾವಳಿ ಕರ್ನಾಟಕ ಭಾಗದಲ್ಲಿ ಪುಣ್ಯ ಸ್ಥಳ ಗಳಲ್ಲಿ ಪವಿತ್ರ ತೀರ್ಥಸ್ನಾನ, ಧ್ಯಾನ, ದಾನ, ಹೋಮ, ಪೂಜೆಗಳಿಗೆ ಎಳ್ಳಮಾವಾಸ್ಯೆ ದಿನ ವಿಶೇಷ ಪ್ರಾಶಸ್ತ್ಯವಿದ್ದರೆ, ಉತ್ತರ ಕರ್ನಾಟಕ ಭಾಗದಲ್ಲಿ ರೈತರ ಹಬ್ಬವೆಂದೇ ಪ್ರಸಿದ್ಧಿ ಪಡೆದಿದೆ. ಆ ಪ್ರದೇಶದಲ್ಲಿ ಎಳ್ಳಮಾವಾಸ್ಯೆ ದಿನದಂದು ಗ್ರಾಮೀಣ ಭಾಗದಲ್ಲಿ ರೈತ ಕುಟುಂಬದವರೆಲ್ಲ ಸೇರಿ, ತಮ್ಮ ಹೊಲಗಳಿಗೆ ತೆರಳಿ, ಭೂದೇವಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಸಾಮೂಹಿಕ ಭೋಜನ ಸವಿಯುತ್ತಾರೆ. ಕೆಲವೆಡೆ ಗಳಲ್ಲಿ ಹೊಲ ಗದ್ದೆಗಳಲ್ಲಿ ಪಾಂಡವರನ್ನು ಪ್ರತಿ ಷ್ಠಾಪಿಸಿ, ಭಕ್ತಿಭಾವದಿಂದ ಪೂಜೆ ಸಲ್ಲಿಸುತ್ತಾರೆ. ಭೂಮಿತಾಯಿಗೆ ನೈವೇದ್ಯ ಸಮರ್ಪಿಸುವ ಮೂಲಕ ಹಿಂಗಾರು ಹಂಗಾಮಿನ ಬೆಳೆಯನ್ನು ಪೋಷಿಸು ವಂತೆ ಪ್ರಾರ್ಥಿಸುತ್ತಾರೆ.

– ಡಾ| ಕೆ.ಎನ್‌. ನರಸಿಂಹ ಅಡಿಗ, ಕೊಲ್ಲೂರು

Advertisement

Udayavani is now on Telegram. Click here to join our channel and stay updated with the latest news.

Next