ವಾಡಿ: ಭೂಮಿಗೆ ಬೀಜ ಹಾಕಿ ನಾಡಿಗೆ ದವಸದಾನ್ಯ ಹಂಚುವ ರೈತರ ಪಾಲಿನ ಸುಗ್ಗಿ ಸಮೃದ್ಧಿಯ ಕಾಲವೇ ಎಳ್ಳ ಅಮವಾಸ್ಯೆ ಎಂದು ನಾಲವಾರ ಶ್ರೀ ಕೋರಿಸಿದ್ಧೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಡಾ| ಸಿದ್ಧ ತೋಟೇಂದ್ರ ಸ್ವಾಮೀಜಿ ನುಡಿದರು.
ಎಳ್ಳ ಅಮಾವಾಸ್ಯೆ ನಿಮಿತ್ತ ನಾಲವಾರ ಶ್ರೀಮಠದಲ್ಲಿ ಏರ್ಪಡಿಸಲಾಗಿದ್ದ ಮಾಸಿಕ ಶಿವಾನುಭವ ಚಿಂತನ ಗೋಷ್ಠಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಭೂಮಿ ತಾಯಿಗೆ ಉಡಿ ತುಂಬಿ ಪೂಜೆ ಸಲ್ಲಿಸುವ ಹಾಗೂ ಚರಗ ರೂಪದಲ್ಲಿ ನೈವೇದ್ಯ ಅರ್ಪಿಸುವ ಸಂಪ್ರದಾಯ ರೈತರ ಸುಗ್ಗಿಯ ಹಬ್ಬವಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಉತ್ತಿ ಬಿತ್ತಿ ಬೆಳೆದ ರೈತರು ಬೆಳೆ ನಷ್ಟ, ಪ್ರವಾವಿಕೋಪ, ಬರಗಾಲ, ಕೀಟಗಳ ಕಾಟ, ಮಳೆಯ ಕೊರತೆ ಹೀಗೆ ಹಲವು ಸಂಕಷ್ಟಗಳಿಂದ ನರಳುವುದನ್ನು ನೋಡುತ್ತಿದ್ದೇವೆ. ದೇಶಕ್ಕೆ ಅನ್ನದಾಸೋಹ ಮಾಡುವ ರೈತರು ಸಂಕಷ್ಟಗಳಿಂದ ಮುಕ್ತರಾಗಬೇಕು. ಆದಾಯ ಮೂಲ ಹೆಚ್ಚಾಗಿ ರೈತರ ಬದುಕಿನಲ್ಲಿ ಸಂತದ ಹೊನಲು ಹಿರಿದರೆ ಮಾತ್ರ ಕೃಷಿ ಕಾಯಕ ಉಳಿಯುತ್ತದೆ. ರೈತರನ್ನು ಸತ್ಕರಿಸುವ ಮತ್ತು ಸಂಕಷ್ಟದಲ್ಲಿ ನೆರವಾಗಲು ಸರಕಾರ ಮತ್ತು ಸಂಘ-ಸಂಸ್ಥೆಗಳು ಮುಂದೆ ಬರಬೇಕು ಎಂದರು.
ಮಹಾಗಾಂವ್ ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ| ಸತೀಶ ಕಾಳೆ ಮಾತನಾಡಿ, ಪರಿಸರ ಸಂರಕ್ಷಣೆಯ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ. ಮನೆಗೊಂದು ಮರ ನೆಡುವ ಸಂಕಲ್ಪ ತೊಡಬೇಕು. ಹೊಲದ ಒಂದು ಭಾಗದ ಜಾಗದಲ್ಲಿ ತರಕಾರಿ ಬೆಳೆಯಲು ಮುಂದಾಗಬೇಕು. ಇದರಿಂದ ಪ್ರತಿದಿನವೂ ಆದಾಯ ಕೈಸೇರುತ್ತದೆ. ಜತೆಗೆ ಬಡತನದ ಬದುಕಿನ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದು ಕಿವಿಮಾತು ಹೇಳಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದು ಅಣಬಿ, ಪಶು ವಿಜ್ಞಾನಿ ಡಾ|ಮಲ್ಲಿನಾಥ ಮರಡಿ, ಜೇವರ್ಗಿ ಭೂ ದಾಖಲೆಯ ಸಹಾಯಕ ನಿರ್ದೇಶಕ ಸಿದ್ದು ರಾಜಾಪುರ, ಸಾಹಿತಿ ಜಗನ್ನಾಥ ತರನಳ್ಳಿ, ಹಿರಿಯ ಚಿತ್ರ ಕಲಾವಿದ ಸಂಗಣ್ಣ ದೋರನಳ್ಳಿ, ಮುಖಂಡರಾದ ಶಂಕ್ರಯ್ಯಸ್ವಾಮಿ ಹಿರೇಮಠ, ಚಂದ್ರಶೇಖರ ಗೋಗಿ, ಸಾಯಬಣ್ಣ, ನಾರಾಯಣ ಹೊಸೂರ, ಲಕ್ಷ್ಮೀಕಾಂತ ಹೂಗಾರ, ಕಾಶೀನಾಥ ಮಳಗ, ನೀಲಕಂಠ ಗಂವಾರ, ವಿರುಪಾಕ್ಷಯ್ಯಸ್ವಾಮಿ, ಮಹಾದೇವ ಗಂವಾರ, ಮಲ್ಲಯ್ಯಸ್ವಾಮಿ ಇಟಗಿ ಸೇರಿದಂತೆ ಸಾವಿರಾರು ಜನ ಭಕ್ತರು ಪಾಲ್ಗೊಂಡಿದ್ದರು. ಇದೇ ವೇಳೆ ಕೋರಿಸಿದ್ಧನ ಮಠದ ರಸ್ತೆಯ ಅಗಲೀಕರಣಕ್ಕೆ ಭೂದಾನ ನೀಡಿದ ಸಿದ್ದನಗೌಡ ಇಟಗಿ ದಂಪತಿಯನ್ನು ಪೂಜ್ಯರು ಸನ್ಮಾನಿಸಿ ಆಶೀರ್ವದಿಸಿದರು.