ವಾಷಿಂಗ್ಟನ್: ಅನ್ಯಗ್ರಹ ಜೀವಿಗಳ ಬಗ್ಗೆ ತೀವ್ರ ಸಂಶೋಧನೆಗಳು ನಡೆಯುತ್ತಿರುವಂತೆಯೇ, ನಮ್ಮದೇ ಸೌರಮಂಡಲದೊಳಗೆ ಅನ್ಯಗ್ರಹ ಜೀವಿಗಳಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಶನಿ ಗ್ರಹದ ಚಂದ್ರ “ಎನ್ಸಿಲ್ಡಸ್’ನಲ್ಲಿ ಮಂಜಿನ ಸಂರಚನೆಗಳಿದ್ದು,ಅದರಲ್ಲಿನ ರಾಸಾಯನಿಕ ಶಕ್ತಿ, ಅನ್ಯಗ್ರಹಗಳ ವಾಸಕ್ಕೆ ಉಪಯುಕ್ತವಾಗಿರಬಹುದು ಎಂದು ನಾಸಾದ ಇತ್ತೀಚಿನ ಸಂಶೋಧನಾ ವರದಿಯಲ್ಲಿ ಶಂಕೆ ವ್ಯಕ್ತಪಡಿಸಲಾಗಿದೆ.
ಶನಿಗೆ ಒಟ್ಟು 53 ಚಂದ್ರರಿದ್ದು, ಅವುಗಳಲ್ಲಿ 13ಕ್ಕೆ ವಿಜ್ಞಾನಿಗಳು ಹೆಸರಿಟ್ಟಿದ್ದಾರೆ. ಸದ್ಯ ಜೀವಿಗಳಿರಬಹುದು ಎಂದು ಶಂಕಿಸಿರುವ ಎನ್ಸಿಲ್ಡಸ್ ಬಗ್ಗೆ ನಾಸಾ ಬಿಟ್ಟಿರುವ ಬಾಹ್ಯಾಕಾಶ ದೂರದರ್ಶಕದಲ್ಲಿ ಕೆಲವು ವಿಶೇಷ ಸಂಗತಿಗಳು ಗೋಚರಿಸಿವೆ. ಎನ್ಸಿಲ್ಡಸ್ ಸನಿಹಕ್ಕೆ ಇದೇ ಮೊದಲ ಬಾರಿಗೆ ಬಂದಿದ್ದು, ಅಲ್ಲಿನ ಕೆಲವು ಸಂರಚನೆಗಳು ಜೀವಿಗೆ ಪೂರಕವಾಗಿದೆ ಎಂಬ ಬಗ್ಗೆ ಕುತೂಹಲ ಹುಟ್ಟಿಸಿವೆ.
ಎನ್ಸಿಲ್ಡಸ್‌ನಲ್ಲಿ ಜೀವಿಗಳು ಜೀವಿಸಲು ಅಗತ್ಯವಾದ ಅಣು ಜಲಜನಕ (ಮಾಲೆಕ್ಯು ಲರ್ ಹೈಡ್ರೋಜನ್) ಪತ್ತೆಯಾಗಿದೆ. ಇದು ಅಲ್ಲಿನ ನೀರ್ಗಲ್ಲ ಅಡಿ ಅನ್ಯಗ್ರಹ ಜೀವಿಗಳ ವಾಸಕ್ಕೆ ಪೂರಕವಾಗಿರಬಹುದು ಎನ್ನಲಾಗಿದೆ. ಜೊತೆಗೆ ಅಲ್ಲಿನ ಸಮುದ್ರದ ಮೇಲ್ಭಾಗದಲ್ಲಿ ಜಲೋಷ್ಣದ ಚಟುವಟಿಕೆ (ಹೈಡ್ರೋ ಥರ್ಮಲ್ ಆ್ಯಕ್ಟಿವಿಟಿ) ಜೀವಿಗಳಿಗೆ ಉಪಯು ಕ್ತ ಎನ್ನಲಾಗಿದೆ. ಅಲ್ಲಿರುವ ಜಲಜನಕ ಕೆಲವೊಂದು ರಾಸಾಯನಿಕ ಪ್ರಕ್ರಿಯೆಗಳಿಗೆ ಕಾರಣವಾಗಿ ಜೀವಿಗಳ ಹುಟ್ಟಿಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯಲಿದೆ ಎಂದೂ ವಿಜ್ಞಾನಿಗಳು ಹೇಳಿದ್ದಾರೆ.