ಹುಬ್ಬಳ್ಳಿ: ಹೆಣ್ಣು ಮಕ್ಕಳು ಧೈರ್ಯ- ಶೌರ್ಯದಿಂದ ಸಾಗಿದರೆ ಅಸಮಾನತೆ ಹೋಗಲಾಡಿಸಬಹುದಾಗಿದೆ. ಇದಕ್ಕೆ ಶಿಕ್ಷಣ ಮಹತ್ವದ ಪ್ರಭಾವ ಬೀರಲಿದೆ ಎಂದು ಸಾಯಿ ಪಿಯು ಕಾಲೇಜಿನ ಸಂಸ್ಥಾಪಕ ಅಧ್ಯಕ್ಷೆ ಡಾ|ವೀಣಾ ಬಿರಾದಾರ ಹೇಳಿದರು.
ಜಗದ್ಗುರು ಮೂರುಸಾವಿರಮಠ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜು, ಮಹಿಳಾ ಅಧಯ್ಯನ ಹಾಗೂ ಸಮಾಜಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ಸಂಯುಕ್ತ ಆಶ್ರಯದಲ್ಲಿ ಲಿಂಗ ಸಮಾನತೆ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಲ ಬದಲಾದಂತೆ ಸ್ತ್ರೀ ಸಮಾನತೆಯಲ್ಲಿ ಬದಲಾವಣೆ ಆಗುತ್ತ ಬಂದಿದೆ. ಮುಖ್ಯವಾಗಿ 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪ ಮೂಲಕ ಜೀವನಾನುಭವ ಹಂಚಿಕೊಳ್ಳಲು ಪ್ರಭಾವ ಬೀರಿದ್ದರು. ಮಹಿಳೆಗೆ ಸಮಾನ ಅವಕಾಶ ಕಲ್ಪಿಸಿದ್ದರು ಎಂದರು.
ಪ್ರಾಂಶುಪಾಲ ಡಾ|ಲಿಂಗರಾಜ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ಸಮಾಜದ ಆಸ್ತಿ, ಅವರಿಗೆ ಮುಕ್ತ ಅವಕಾಶ ನೀಡುವ ಮೂಲಕ ಅವರನ್ನು ಇನ್ನಷ್ಟು ಮುಖ್ಯವಾಹಿನಿಗೆ ತರವಲ್ಲಿ ಮುಂದಾದರೆ ಲಿಂಗ ಅಸಮಾನತೆ ಹೋಗಲಾಡಿಸಬಹುದು ಎಂದರು.
ವಿದ್ಯಾರ್ಥಿಗಳಾದ ಮಿತಾ ಜಿತೂರಿ, ಹರ್ಷಾ ಪವಾರ ಮಾತನಾಡಿದರು. ವೀಣಾ ಬಿರಾದಾರ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥ ಅಣ್ಣಪ್ಪ ಕೊರವರ ಪ್ರಾಸ್ತಾವಿಕ ಮಾತನಾಡಿದರು. ಸಮಾಜಶಾಸ್ತ್ರ ಮುಖ್ಯಸ್ಥೆ ಡಿವಿನಾ ಫರ್ನಾಂಡೀಸ್, ಸಮಾಜಶಾಸ್ತ್ರ ಉಪನ್ಯಾಸಕಿ ಉಷಾ ಕೆಂಚರ್ಲಿ, ಡಾ|ಸಿಸಿಲಿಯಾ ಡಿಕ್ರೋಜ್ ಇನ್ನಿತರರಿದ್ದರು. ಅಂಬಿಕಾ ಬಂಕಾಪುರಮಠ ನಿರೂಪಿಸಿದರು. ಮಂಜುಳಾ ಗೌರಿ ವಂದಿಸಿದರು.