Advertisement

ಎಳೆಪಿಳ್ಳಾರಿ ಉದ್ಯಾನಕ್ಕೆ ಬೇಕಿದೆ ಕಾಯಕಲ್ಪ

09:44 AM Apr 23, 2019 | Lakshmi GovindaRaju |

ಸಂತೆಮರಹಳ್ಳಿ: ರಾಷ್ಟ್ರೀಯ ಹೆದ್ದಾರಿ 209 ರಸ್ತೆ ಹಾದು ಹೋಗುವ ತಾಲೂಕಿನ ಮದ್ದೂರು ಅಗರ ಗ್ರಾಮಗಳ ನಡುವೆ ಇರುವ ಐತಿಹಾಸಿಕ ಎಳೆಪಿಳ್ಳಾರಿ ದೇಗುಲದ ಪಕ್ಕದಲ್ಲಿರುವ ಉದ್ಯಾನ ಸೊರಗಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

Advertisement

ಎಳೆಪಿಳ್ಳಾರಿ ಗಣೇಶ ದೇವಸ್ಥಾನ ಜಿಲ್ಲೆ ಹಾಗೂ ತಾಲೂಕಿನಲ್ಲಿ ಪ್ರಸಿದ್ಧಿ ಪಡೆದಿದೆ. ರಾಜಕಾರಣಿಗಳು, ಹೊಸ ವಾಹನ ಖರೀದಿ ಮಾಡಿದವರು ಯಾರೇ ಆಗಲಿ ಮೊದಲು ಪೂಜೆ ಸಲ್ಲಿಸುವುದೇ ಈ ದೇವಸ್ಥಾನಕ್ಕೆ. ಇದರ ಬಳಿಯಲ್ಲೇ ಜಿಲ್ಲಾ ಪಂಚಾಯಿತಿ ವತಿಯಿಂದ ಸಮುದಾಯ ಭವನವನ್ನೂ ನಿರ್ಮಾಣ ಮಾಡಲಾಗಿದ್ದು ಇದರ ಉದ್ಘಾಟನೆಯೂ ಆಗಿದೆ. ಆದರೆ ಇದರ ಬಳಕೆ ಇನ್ನೂ ಆಗುತ್ತಿಲ್ಲ.

ಅನೈರ್ಮಲ್ಯ ತಾಂಡವ: ದೇಗುಲದ ಬಳಿ ಇರುವ ಕೊಳದಲ್ಲಿ ಈ ಹಿಂದೆ ನೀರು ಸಂಗ್ರಹವಾಗುತ್ತಿತ್ತು. ಗೌರಿ-ಗಣೇಶ ಹಬ್ಬದಲ್ಲಿ ಇಲ್ಲಿ ಗಣೇಶ ಮೂರ್ತಿ ವಿಸರ್ಜನೆಯೂ ನಡೆಯುತ್ತಿತ್ತು. ಆದರೆ ಇದೂ ಕೂಡ ಇತ್ತೀಚೆಗೆ ನೀರಿಲ್ಲದೆ ಸೊರಗಿದೆ. ಈ ಹಿಂದೆ ಶಾಸಕರಾಗಿದ್ದ ಎಸ್‌. ಬಾಲರಾಜು ತಮ್ಮ ಅವಧಿಯಲ್ಲಿ ಕೊಳದ ಬಳಿಯಲ್ಲಿ ಸಣ್ಣದೊಂದು ಉದ್ಯಾನ ನಿರ್ಮಿಸಲು ನೀಲನಕ್ಷೆ ಮಾಡಿದ್ದರು.

ಇಲ್ಲಿಗೆ ಬರುವ ಭಕ್ತರು ಸುತ್ತಲೂ ಕೂರಲು ಕಾಂಕ್ರಿಟ್‌ ಬೆಂಚ್‌ಗಳನ್ನೂ ಹಾಕಿಸಿದ್ದರು. ಆದರೆ ಇವರು ಅಧಿಕಾರದಿಂದ ಇಳಿದ ಬಳಿಕ ಈ ಕೆಲಸ ಇಷ್ಟಕ್ಕೇ ನಿಂತಿದೆ. ಇದರ ಸುತ್ತಲೂ ತಂತಿ ಬೇಲಿ ಹಾಕಿಸಿದ್ದರೂ ಅದೂ ಕೂಡ ಕಿತ್ತು ಹೋಗಿದ್ದು, ಇತ್ತೀಚೆಗೆ ಈ ಸ್ಥಳ ಕುಡುಕರ ನೆಚ್ಚಿನ ತಾಣವಾಗಿದ್ದು, ಇದರ ಸುತ್ತಲೂ ಅನೈರ್ಮಲ್ಯ ತಾಂಡವವಾಡುತ್ತಿದೆ.

ಉದ್ಯಾನ ವನದಲ್ಲೆಲ್ಲ ಮದ್ಯದ ಬಾಟಲಿಗಳು: ಹೆಂಗಸರು, ಮಕ್ಕಳು ಈ ಉದ್ಯಾವನದ ಬಳಿ ತೆರಳಲೂ ಸಾಧ್ಯವಿಲ್ಲದ ಹಾಗೇ ಮುಳ್ಳಿನ ಪೊದೆಗಳು, ಕಳೆಸಸ್ಯಗಳು ಬೆಳೆದಿವೆ. ಕುಡಿದು ಒಡೆದು ಬೀಸಾಡಿರುವ ಮದ್ಯದ ಬಾಟಲಿಗಳು, ಪೌಚ್‌ಗಳು ಎಲ್ಲೆಂದರಲ್ಲಿ ಬಿದ್ದು ಪವಿತ್ರ ಸ್ಥಳವನ್ನು ಮಲಿನಗೊಳಿಸಿದೆ.

Advertisement

ಕುಡುಕರ ವಿರುದ್ಧ ಕ್ರಮ ಕೈಗೊಳ್ಳಿ: ಈ ಉದ್ಯಾನವನವನ್ನು ಅಧಿಕಾರಿಗಳು ಅಭಿವೃದ್ಧಿ ಪಡಿಸಬೇಕು. ಕೊಳದ ಸುತ್ತಲೂ ಇರುವ ಸ್ಥಳವನ್ನು ಶುಚಿಯಾಗಿಟ್ಟು ಸಣ್ಣ ಉದ್ಯಾನ ನಿರ್ಮಿಸಿ ಭಕ್ತರಿಗೆ ಅನುಕೂಲ ಮಾಡಿಕೊಡಬೇಕು. ಕುಡುಕರಿಂದ ಸ್ಥಳದ ಪಾವಿತ್ರತೆ ಹಾಳಾಗವುದರಿಂದ ಇಂತಹವರ ವಿರುದ್ಧ ಕ್ರಮ ವಹಿಸಬೇಕು.

ಪಕ್ಕ‌ದಲ್ಲಿರುವ ಸಮುದಾಯ ಭವನಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಜನರ ಬಳಕೆಗೆ ಮುಕ್ತ ಮಾಡಬೇಕು. ಈ ಬಗ್ಗೆ ಜನಪ್ರತಿನಿಧಿಗಳು ಹೆಚ್ಚಿನ ಕಾಳಜಿ ವಸಿ ದೇವಸ್ಥಾನ ಅಭಿವೃದ್ಧಿ ಮಾಡಬೇಕು ಎಂದು ಭಕ್ತರಾದ ರಾಜಶೇಖರ, ಸುರೇಶ, ಮೋಹನ ಒತ್ತಾಯಿಸಿದ್ದಾರೆ.

ಎಳೆಪಿಳ್ಳಾರಿ ಗಣೇಶ ಅತ್ಯಂತ ಶಕ್ತಿಶಾಲಿ ದೇವರು ಎಂಬುದು ಭಕ್ತರ ನಂಬಿಕೆಯಾಗಿದೆ. ನಮ್ಮ ಸುತ್ತಮುತ್ತಲ ಗ್ರಾಮದಲ್ಲಿ ಹೊಸ ವಾಹನ ಖರೀದಿ ಮಾಡಿದರೆ ನಾವು ಇಲ್ಲಿಗೆ ಪ್ರಥಮ ಪೂಜೆ ಸಲ್ಲಿಸುತ್ತೇವೆ. ಮೊದಲು ಪಕ್ಕದ ಕೊಳದಲ್ಲಿ ನೀರಿರುತ್ತಿತ್ತು. ನಾವು ಕೈಕಾಲು ತೊಳೆದು ದೇಗುಲಕ್ಕೆ ಬರುತ್ತಿದ್ದೆವು ಆದರೆ ಈಗ ಕೊಳದಲ್ಲಿ ನೀರಿಲ್ಲ. ಅಲ್ಲದೆ ಇದರ ನಿರ್ವಹಣೆ ಇಲ್ಲದೆ ಅಲ್ಲಲ್ಲಿ ಮಣ್ಣು ಕುಸಿದಿದೆ.
-ಸೋಮಣ್ಣ, ಭಕ್ತ

* ಫೈರೋಜ್‌ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next