ಎಚ್.ಡಿ.ಕೋಟೆ: ಹುಲಿ ಪತ್ತೆಗಾಗಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ಆನೆಗಳು ದಿಗಿಲುಗೊಂಡು ಮಾವುತರನ್ನು ಕೆಳಕ್ಕೆ ಬೀಳಿಸಿ ಕಾಡಿನತ್ತ ಓಡಿದ ಪ್ರಸಂಗ ಗುರುವಾರ ನಡೆಯಿತು.
ತಾಲೂಕಿನ ಅಂತರಸಂತೆ ಅರಣ್ಯ ವ್ಯಾಪ್ತಿಯ ಪೆಂಜಳ್ಳಿ ಗ್ರಾಮದ ಹೊರ ವಲಯದಲ್ಲಿ ಕಾಣಿಸಿಕೊಂಡಿದ್ದ ಹುಲಿ ಪತ್ತೆಗಾಗಿ ಆನೆಗಳ ಸಹಾಯದಿಂದ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಜನರ ಗದ್ದಲ ಹಾಗೂ ಪಟಾಕಿ ಸಿಡಿತದ ಶಬ್ದದಿಂದ ಗಾಬರಿಗೊಂಡ ದ್ರೋಣ ಮತ್ತು ಅಶೋಕ ಆನೆಗಳು ಮಾವುತರಾದ ಗುಂಡ ಮತ್ತು ನಂಜುಂಡ ಇಬ್ಬರನ್ನೂ ಸಹ ಕೆಳಕ್ಕೆ ಬೀಳಿಸಿ ಅವರ ನಿಯಂತ್ರಣ ತಪ್ಪಿಸಿಕೊಂಡು ಕಾಡಿನತ್ತ ಓಡಿದವು.
ಇದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಂಗಾಲಾದರು. ನಂತರ ಕೆಳಕ್ಕೆ ಬಿದ್ದು ಗಾಯಗೊಂಡಿದ್ದ ಇಬ್ಬರು ಮಾವುತರಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಆನೆಗಳ ಸೆರೆ ಹಿಡಿಯಲು ಅಧಿಕಾರಿಗಳು ಮುಂದಾದರು. ಬಳಿಕ ಹಿರೇಹಳ್ಳಿ ಸಮೀಪದ ಕಾಡಿನಲ್ಲಿ ಆನೆಗಳನ್ನು ಮಾವುತರ ಸಹಾಯದಿಂದ ಸೆರೆ ಹಿಡಿಯಲಾಯಿತು.
ಪಟಾಕಿ ಸಿಡಿಸಿ ಹುಲಿ ಕಾಡಿಗಟ್ಟಿವ ಪ್ರಯತ್ನಿಸುತ್ತಿರುವ ಸಿಬ್ಬಂದಿ, ಕೆಲ ದಿನಗಳಿಂದ ಜಾನುವಾರು ಬಲಿ ಪಡಿಯುತ್ತಿರುವ ಹುಲಿಯನ್ನು ಸೆರೆಹಿಡಿಯಲು ಗುರುವಾರ ಬೆಳಗ್ಗೆಯಿಂದ ಆನೆಗಳ ಸಹಾಯದಿಂದ ಕಾರ್ಯಾಚರಣೆ ಆರಂಭಿಸಿದ್ದರು.
ಹುಲಿಯ ಹೆಜ್ಜೆ ಗುರುತು ಅಲ್ಲಿಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹುಲಿ ಪತ್ತೆ ಕಾರ್ಯ ಆರಂಭ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರ ಗದ್ದಲದಿಂದ ಕಿರಿಕಿರಿಯಾಯಿತು. ಜತೆಗೆ ಪಟಾಕಿ ಸಿಡಿತದಿಂದ ಗಾಬರಿಗೊಂಡ ಆನೆಗಳು ತನ್ನ ಮಾವುತರನ್ನೇ ನೆಲಕ್ಕೆ ಬೀಳಿಸಿ ಕಾಡಿನತ್ತ ಓಡಿ ಹೋದವು.
ನಂತರ ಆನೆಗಳ ಹುಡುಕಾಟ ನಡೆಸಿದ ಅರಣ್ಯಾಧಿಕಾರಿಗಳ ತಂಡ ಸುಮಾರು 15 ಕಿ.ಮೀ. ದೂರದ ಹಿರೇಹಳ್ಳಿ ಸಮೀಪ ಕಾಣಿಸಿಕೊಂಡ ಸಾಕಾನೆಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು. ಹುಲಿ ಸೆರೆ ಕಾರ್ಯಾಚರಣೆಯಲ್ಲಿ ವಲಯಾರಣ್ಯಾಧಿಕಾರಿಗಳಾದ ಶರಣಬಸಪ್ಪ, ಮಧು, ವಿಶೇಷ ಹುಲಿ ಸಂರಕ್ಷಣ ದಳದ ಆರ್‌ಎಫ್‌ಒ ಸಂತೋಷ್, ಸಿಬ್ಬಂದಿ ಇದ್ದರು.