ಎಚ್.ಡಿ.ಕೋಟೆ: ಕಾಡಾನೆ ದಾಳಿ ನಡೆಸಿ ವ್ಯಕ್ತಿಗಳನ್ನು ಸಾಯಿಸುವುದು ಸಾಮಾನ್ಯವಾಗಿದೆ. ಕೆಲ ಸಂದರ್ಭಗಳಲ್ಲಿ ಆನೆಗಳು ಜನರನ್ನು ಅಟ್ಟಾಡಿಸಿ ಕೊಂದಿರುವ ನಿದರ್ಶನಗಳೂ ಇವೆ. ಇಲ್ಲೊಂದು ಕಾಡಾನೆ ಮನೆಯನ್ನು ಕೆಡವಿದ್ದಲ್ಲದೇ ಒಳಗೆ ಮಲಗಿದ್ದ ಮನೆ ಮಾಲೀಕನನ್ನು ತನ್ನ ಸೊಂಡಿಲಿನಿಂದ ಎಳೆದುಕೊಂಡು ಬಂದು ಬರ್ಬರವಾಗಿ ಹತ್ಯೆಗೈದಿದೆ.
ಇಂತಹ ಭೀಭತ್ಸ ಘಟನೆ ತಾಲೂಕಿನ ನೆಟ್ಟಕಲ್ಲು ಹುಂಡಿ ಗ್ರಾಮದಲ್ಲಿ ಗುರುವಾರ ನಸುಕಿನ ವೇಳೆ ಸಂಭವಿಸಿದೆ. ನೆಟ್ಟಕಲ್ಲು ಹುಂಡಿಯ ನಿವಾಸಿ ಚಿನ್ನಪ್ಪ (58) ಕಾಡಾನೆ ದಾಳಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ದುರ್ದೈವಿ. ಘಟನೆ ವೇಳೆ ಪತಿಯನ್ನು ರಕ್ಷಿಸಲು ಮುಂದಾದ ಆತನ ಪತ್ನಿ ಕೊಟ್ಟೂರಮ್ಮ ಅವರ ಎಡ ಭಾಗದ ಕೈಮೂಳೆ ಮುರಿದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಆಗಿದ್ದೇನು?: ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಿರುವ ನೆಟ್ಟಕಲ್ಲು ಹುಂಡಿ ಗ್ರಾಮದಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಒಂಟಿ ಆನೆಯೊಂದು ಪ್ರತ್ಯಕ್ಷಗೊಂಡು ದಾಂದಲೆ ನಡೆಸಿತು. ನೋಡು ನೋಡುತ್ತಿದ್ದಂತೆ ಒಂದರ ಮೇಲೆ ಒಂದರಂತೆ ಮೂರು ಮನೆಗಳನ್ನು ಜಖಂಗೊಳಿಸಿದೆ. ಆನೆಯ ರೌದ್ರಾವತಾರವನ್ನು ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು ಕೂಡಲೇ ಅದನ್ನು ಓಡಿಸಲು ಯತ್ನಿಸಿದ್ದಾರೆ. ಈ ವೇಳೆ ಮತ್ತಷ್ಟು ರೊಚ್ಚಿಗೆದ್ದಿದ್ದ ಕಾಡಾನೆ ಚಿನ್ನಪ್ಪನ ಮನೆಯನ್ನು ತನ್ನ ಸೊಂಡಲಿನಿಂದ ರಭಸದಿಂದ ಗುದ್ದಿದೆ. ಮಣ್ಣಿನಿಂದ ನಿರ್ಮಿಸಿದ್ದ ಮನೆಯಾಗಿದ್ದರಿಂದ ಗೋಡೆ ಕುಸಿದು ಬಿದ್ದು, ಮೇಲ್ಛಾವಣಿ ಕೂಡ ಕುಸಿದು ಬಿದ್ದಿದೆ. ಆಗ ಮನೆಯ ಕೋಣೆಯೊಂದಲ್ಲಿ ಮಂಚದಲ್ಲಿ ಚಿನ್ನಪ್ಪ ಮಲಗಿದ್ದರು. ಈ ವೇಳೆ ಏನಾಗುತ್ತಿದೆ ಎಂಬುದು ತಿಳಿಯದೇ ದಿಕ್ಕು ತೋಚದಂತಾಗಿದ್ದ ಚಿನ್ನಪ್ಪನನ್ನು ಕಾಡಾನೆ ತನ್ನ ಸೊಂಡಿಲಿನಿಂದ ಹೊರಕ್ಕೆ ಎಳೆದು ತಂದು ತುಳಿದು ಕೊಂದುಹಾಕಿದೆ. ಮನೆಯ ಗೋಡೆ, ಮೇಲ್ಛಾವಣಿ ಕುಸಿದಿದ್ದರಿಂದ ಕಲ್ಲು ಮಣ್ಣು ಆತನ ಮೇಲೆ ಬಿದ್ದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದರು. ಆ ವೇಳೆಯಲ್ಲೇ ಆನೆ ಆತನನ್ನು ಕೊಂದುಹಾಕಿದೆ.
ಈ ಭೀಭತ್ಸ ಘಟನೆಯನ್ನು ಕಂಡ ಚಿನ್ನಪ್ಪನ ಪತ್ನಿ ಕೊಟ್ಟೂರಮ್ಮಪತಿಯ ರಕ್ಷಣೆಗೆ ಧಾವಿಸುತ್ತಿದ್ದಂತೆಯೇ ಆಕೆಯ ಮೇಲೂ ಆನೆ ದಾಳಿ ನಡೆಸಿದೆ.ಕೊಟ್ಟೂರಮ್ಮ ಪ್ರಾಣಾಪಾಯದಿಂದ ಪಾರಾದರೂ ಕೈ ಮೂಳೆ ಮುರಿದು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಕೆಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಅಧಿಕಾರಿಗಳ ಭೇಟಿ: ಈ ವಿಷಯವನ್ನು ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಚಿನ್ನಪ್ಪ ಮೃತದೇಹ ಮತ್ತು ಕೊಟ್ಟೂರಮ್ಮ ಇಬ್ಬರನ್ನೂ ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರಿಸಿದರು. ವೈದ್ಯರು ಚಿನ್ನಪ್ಪನ ಮೃತದೇಹದ ಮರಣೋತ್ತರ ಪರೀಕ್ಷೆ ನೆರವೇರಿಸಿದ ಬಳಿಕ ವಾರಸುದಾರರಿಗೆ ಹಸ್ತಾಂತರಿಸಿದರು. ಘಟನೆ ಸಂಬಂಧ ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕ ಭೇಟಿ: ವಿಷಯ ತಿಳಿಯುತ್ತಿದ್ದಂತೆಯೇ ಆಸ್ಪತ್ರೆ ಶವಾಗಾರಕ್ಕೆ ಭೇಟಿ ನೀಡಿದ ಶಾಸಕ ಸಿ.ಅನಿಲ್ ಚಿಕ್ಕಮಾದು ಘಟನೆ ಕುರಿತು ಮಾಹಿತಿ ಪಡೆದರು. ಚಿನ್ನಪ್ಪನಕುಟುಂಬಕ್ಕೆ ಸಾಂತ್ವನ ಹೇಳಿ, ಸರ್ಕಾರದಿಂದ ಸೂಕ್ತ ಪರಿಹಾರಕೊಡಿಸುವ ಭರವಸೆ ನೀಡಿದರು.
ಕಾಡಾನೆ ಉಪಟಳ ತಡೆಗೆ ಗ್ರಾಮಸ್ಥರ ಆಗ್ರಹ : ನೆಟ್ಟಕಲ್ಲು ಹುಂಡಿ ಗ್ರಾಮದಲ್ಲಿ ನಿರಂತರವಾಗಿ ಕಾಡಾನೆಗಳ ದಾಳಿ ನಡೆಯುತ್ತಿದ್ದರೂ ಅರಣ್ಯ ಇಲಾಖೆಕಾಡಾನೆಗಳ ತಡೆಗೆಕ್ರಮಕೈಗೊಂಡಿಲ್ಲ. ಮನೆಯ ಒಳಗೆ ಮಲಗಿದ್ದ ವ್ಯಕ್ತಿಯನ್ನು ಹೊರಗೆಳೆದು ಸಾಯಿಸಿ ಮನೆಗಳನ್ನು ಜಖಂಗೊಳಿಸಿದೆ. ಕಾಡಾನೆಗಳು ಗ್ರಾಮಕ್ಕೆ ಬಾರದಂತೆ ರಾತ್ರಿಕಾವಲು, ಸೋಲಾರ್ ಅಳವಡಿಕೆ, ಜೊತೆಗೆ ರೈಲ್ವೆಕಂಬಿ ಅಳವಡಿಸಿ ಕಾಡಾನೆ ಉಪಟಳ ತಪ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪರಿಹಾರ ವಿತರಣೆ : ಕಾಡಾನೆ ದಾಳಿಯಿಂದ ಮೃತಪಟ್ಟ ಚಿನ್ನಪ್ಪನ ಕುಟುಂಬಕ್ಕೆ ಸರ್ಕಾರದಿಂದ 7.50 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಹಾನಿಗೊಳಗಾದ ಮೂರು ಮನೆಗಳಿಗೆ ತಲಾ 10 ಸಾವಿರ ರೂ. ಪರಿಹಾರ ನೀಡಲಾಗಿದೆ. ಚಿನ್ನಪ್ಪನ ಪತ್ನಿ ಕೊಟ್ಟೂರಮ್ಮ ಅವರಿಗೆ 2 ಸಾವಿರ ರೂ. ಮಾಸಾಶನವನ್ನು ಐದು ವರ್ಷಗಳಕಾಲ ವಿತರಿಸಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದ್ದಾರೆ.