ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಾನಗಲ್ಲ ಹಾಗೂ ಸಿಂದಗಿ ಕ್ಷೇತ್ರಗಳ ಉಪ ಚುನಾವಣೆಗೆ ಭರ್ಜರಿ ಪ್ರಚಾರ ನಡೆಸಿರುವುದರಿಂದ ಬಿಜೆಪಿಗೆ ಆನೆ ಬಲ ಬಂದಂತಾಗಿದೆ. ಸಿಂದಗಿ ಹಾಗೂ ಹಾನಗಲ್ಲ ಕ್ಷೇತ್ರಗಳಲ್ಲಿ ತಲಾ ಎರಡು ದಿನ ಪ್ರಚಾರ ನಡೆಸಿರುವ ಯಡಿಯೂರಪ್ಪ ಅವರು ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಯ ಗೆಲುವಿನ ಭರವಸೆ ಹೆಚ್ಚಾಗುವಂತೆ ಮಾಡಿದ್ದಾರೆ.
ಉಪ ಚುನಾವಣೆ ಘೋಷಣೆಯಾದ ಸಂದರ್ಭ ಯಡಿಯೂರಪ್ಪ ಅವರು ಪ್ರಚಾರ ನಡೆಸುವ ಬಗ್ಗೆ ಸಾರ್ವಜನಿಕವಾಗಿ ಸಾಕಷ್ಟು ಕುತೂಹಲ ಉಂಟಾಗಿತ್ತು. ಅಲ್ಲದೇ ಅವರು ಈ ಬಾರಿಯ ಚುನಾವಣೆಯಲ್ಲಿ ಸಕ್ರಿಯರಾಗಿ ಪ್ರಚಾರ ನಡೆಸುವುದಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಯಡಿಯೂರಪ್ಪ ಎರಡೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಬಿಜೆಪಿ ಅಭ್ಯರ್ಥಿಗಳಲ್ಲಿ ಗೆಲುವಿನ ವಿಶ್ವಾಸ ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗುವಂತೆ ಮಾಡಿದರು.
ಹಾನಗಲ್ಲ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸೇರಿಕೊಂಡು ಜಂಟಿ ಪ್ರಚಾರ ನಡೆಸಿದ್ದು, ಕ್ಷೇತ್ರದ ಚಿತ್ರಣ ಬದಲಾಗುವಂತೆ ಮಾಡಿದೆ. ಇಬ್ಬರೂ ನಾಯಕರು ಒಟ್ಟಿಗೆ ಪ್ರಚಾರ ಮಾಡುವುದು ಅನುಮಾನ ಎಂಬ ವದಂತಿಗಳನ್ನು ಸುಳ್ಳಾಗಿಸಿ ಯಡಿಯೂರಪ್ಪ ಅವರು ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಪಕ್ಷದ ಸೂಚನೆಯಂತೆ ಕೆಲಸ ಮಾಡುತ್ತೇನೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ.
ಇನ್ನು ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಜಂಟಿಯಾಗಿ ಹಾನಗಲ್ಲ ವಿಧಾನಸಭಾ ಕ್ಷೇತ್ರದ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ. ಕ್ಷೇತ್ರಕ್ಕೆ ಮುಂದಿನ ದಿನಗಳಲ್ಲಿ ಸರ್ಕಾರ ಮಾಡಲಿರುವ ಯೋಜನೆಗಳ ಪಟ್ಟಿಯನ್ನು ಬಿಚ್ಚಿಟ್ಟಿರುವುದು ಮತದಾರರ ಮನ ಸೆಳೆಯಲು ಅನುಕೂಲವಾಗುತ್ತದೆ ಎಂಬ ವಿಶ್ವಾಸದಲ್ಲಿ ಬಿಜೆಪಿ ನಾಯಕರಿದ್ದಾರೆ.
ಕಡಿಮೆಯಾಗದ ಜನಪ್ರಿಯತೆ: ಯಡಿಯೂರಪ್ಪ ಅಧಿಕಾರದಲ್ಲಿ ಇಲ್ಲದಿದ್ದರೂ, ಅವರ ಬಗ್ಗೆ ಜನರಿಗೆ ಅಭಿಮಾನ ಮತ್ತು ಪ್ರೀತಿ ಕಡಿಮೆಯಾಗಿಲ್ಲ. ಪ್ರಚಾರ ಸಂದರ್ಭ ಅವರು ಪಾಲ್ಗೊಂಡಿದ್ದ ಎಲ್ಲ ಸಭೆಗಳಲ್ಲಿಯೂ ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಅಲ್ಲದೇ ಅವರ ಹೆಸರು ಹೇಳಿದಾಗಲೂ ಜೈಕಾರ ಹಾಕಿ, ತಮ್ಮ ಬೆಂಬಲ ವ್ಯಕ್ತಪಡಿಸುವ ದೃಶ್ಯ ಸಾಮಾನ್ಯವಾಗಿತ್ತು.
ಯಡಿಯೂರಪ್ಪ ಪ್ರಚಾರದಿಂದಾಗಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ಮತ್ತಷ್ಟು ಹೆಚ್ಚಾಗಿರುವುದರಿಂದ ತಮ್ಮ ಕ್ಷೇತ್ರಗಳಲ್ಲಿ ಇನ್ನೆರಡು ದಿನ ಪ್ರಚಾರ ನಡೆಸುವಂತೆ ಅಭ್ಯರ್ಥಿಗಳು ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಗುಪ್ತಚರ ಇಲಾಖೆಯೂ ಯಡಿಯೂರಪ್ಪ ಅವರ ಪ್ರಚಾರದಿಂದ ಬಿಜೆಪಿಗೆ ಹೆಚ್ಚಿನ ಅನುಕೂಲವಾಗುತ್ತಿದೆ ಎಂಬ ವರದಿ ನೀಡಿದೆ ಎನ್ನಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೂ ಎರಡೂ ಕ್ಷೇತ್ರದಲ್ಲಿ ಬಿಡುವಿಲ್ಲದೆ ಪ್ರಚಾರ ನಡೆಸುತ್ತಿದ್ದಾರೆ. ತಮ್ಮೊಂದಿಗೆ ಮಾಜಿ ಸಿಎಂ ಯಡಿಯೂರಪ್ಪ ಅವರೂ ಸೇರಿಕೊಂಡಿದ್ದು ಅವರ ಉತ್ಸಾಹವೂ ಹೆಚ್ಚಾಗುವಂತೆ ಮಾಡಿದೆ.