ಮನುಷ್ಯರು ಹಾಗೂ ಕಾಡು ಪ್ರಾಣಿಗಳ ಸಂಘರ್ಷ ದಿನದಿಂದ ದಿನಕ್ಕೇ ಹೆಚ್ಚುತ್ತಿವೆ. ಆಹಾರ ಅರಸಿ ನಾಡಿಗೆ ದೌಡಾಯಿಸುವ ಮೂಕ ಪ್ರಾಣಿಗಳ ಮೇಲೆ ಮಾನವರ ಕ್ರೌರ್ಯ ಮಿತಿಮೀರುತ್ತಿದೆ. ಇದೀಗ ಅಂತಹದೆ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಜನವಸತಿ ಪ್ರದೇಶಕ್ಕೆ ಬಂದಿದ್ದ ಒಂಟಿ ಆನೆಯೊಂದನ್ನು ಜನರ ಗುಂಪು ಅಟ್ಟಾಡಿಸಿ ಹಿಮ್ಮೆಟಿಸಿದ ವಿಡಿಯೋ ಟ್ವಿಟರ್ ನಲ್ಲಿ ವೈರಲ್ ಆಗಿದೆ. ಐಎಫ್‍ಎಸ್ ಅಧಿಕಾರಿ ಸುಧಾ ರಮೆನ್ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಜನರ ವರ್ತನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಮನುಷ್ಯರು ಯಾರೋ ಪ್ರಾಣಿಗಳು ಯಾರೋ ಎಂದು ನೋವಿನಿಂದ ಪ್ರಶ್ನಿಸಿದ್ದಾರೆ.
ಕಾಡು ಪ್ರಾಣಿಗಳ ಜತೆ ಜನರು ವರ್ತಿಸುವ ರೀತಿ ಈಗ ಸೋಷಿಯಲ್ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗುತ್ತಿದೆ. ವಿಡಿಯೋದ ಬಗ್ಗೆ ಆತಂಕ ವ್ಯಕ್ತ ಪಡಿಸಿರುವ ಐಎಫ್‍ಎಸ್ ಅಧಿಕಾರಿ ಸುಧಾ, ಮನುಷ್ಯರಂತೆ ಪ್ರಾಣಿಗಳು ತಮ್ಮ ಗಡಿಗಳನ್ನು ಹಾಕಿಕೊಂಡಿರುವುದಿಲ್ಲ. ಇಲ್ಲವೆ ಅದರ ಬಗ್ಗೆ ಅವುಗಳಿಗೆ ತಿಳಿದಿರುವುದಿಲ್ಲ. ಆನೆಗಳ ವಿಚಾರಕ್ಕೆ ಬಂದಾಗ ಈ ಹಿಂದೆ ಸಾಕಷ್ಟು ಬಾರಿ ಮನುಷ್ಯರ ಹಾಗೂ ಆನೆಗಳ ನಡುವೆ ಸಂಘರ್ಷ ನಡೆದಿವೆ. ಅರಣ್ಯ ಪ್ರದೇಶಗಳ ಬಳಿ ಅಥವಾ ಆನೆಗಳ ಕಾರಿಡಾರ್ ಬಳಿ ವಾಸಿಸುವ ಜನರು ಭಯಭೀತರಾಗಬಾರದು, ಏಕೆಂದರೆ ಇದು ಪ್ರಾಣಿಗಳನ್ನು ಪ್ರಚೋದಿಸುತ್ತದೆ ಎಂದು ಅವರು ತಿಳಿ ಹೇಳಿದ್ದಾರೆ.
ಈ ಬಗ್ಗೆ ಜಾಗೃತಿ ಮುಖ್ಯ ಎಂದಿರುವ ಸುಧಾ, ಭಾರತಾದ್ಯಂತ ಅರಣ್ಯ ಇಲಾಖೆ ಈ ಕುರಿತು ಜಾಗೃತಿ ಮೂಡಿಸುತ್ತಿದೆ. ದೇಶದಲ್ಲಿ ನಡೆದಿರುವ ಪ್ರತಿಯೊಂದು ಪ್ರಕರಣವೂ ವಿಭಿನ್ನವಾಗಿದೆ ಹಾಗೂ ಈ ಸಮಸ್ಯೆಗೆ ‘ಒಂದೇ ಒಂದು ಪರಿಹಾರ’ ಇಲ್ಲ. ಅರಣ್ಯ ಮತ್ತು ಕಾಡು ಪ್ರಾಣಿಗಳ ಮೇಲೆ ಮಾನವನ ಒತ್ತಡ ಹೆಚ್ಚುತ್ತಿದೆ ಎಂದಿದ್ದಾರೆ.