ಚಾಮರಾಜನಗರ: ಅತಿ ಎತ್ತರದ ಬೆಟ್ಟಗಳಲ್ಲಿ 12 ವರ್ಷಕ್ಕೊಮ್ಮೆ ಕಂಡುಬರುವ ನೀಲ ಕುರಂಜಿ ಹೂವು ಜಿಲ್ಲೆಯ ಬಿಳಿಗಿರಿರಂಗನಾಥ ಅರಣ್ಯ (ಬಿಆರ್‌ಟಿ) ಪ್ರದೇಶದ, ಪುಣಜನೂರು ಬೈಲೂರು ವಲಯದ ಬೆಟ್ಟದಲ್ಲಿ ಅರಳಿ ಕಂಗೊಳಿಸುತ್ತಿದೆ.
ಕೆಲವು ದಿನಗಳ ಹಿಂದೆ ರಾಜ್ಯದ ಕೊಡಗು ಹಾಗೂ ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ನೀಲಕುರಂಜಿ ಅರಳಿ ನಿಂತಿತ್ತು. ಅನೇಕ ಪ್ರವಾಸಿಗರು ಈ ಸ್ಥಳಗಳಿಗೆ ಭೇಟಿ ನೀಡಿ ನೀಲ ಕುರಂಜಿಯ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದರು.
ಈಗ ಪುಣಜನೂರು ಹಾಗೂ ಬೈಲೂರು ವಲಯದ ಅರಣ್ಯದ ಬೆಟ್ಟಗಳಲ್ಲಿ ನೀಲ ಕುರಂಜಿ ಅರಳಿ ನಿಂತಿದೆ. ಮುಗಿಲನ್ನು ಚುಂಬಿಸುವ ಬೆಟ್ಟಗಳ ತುಂಬೆಲ್ಲಾ ಕುರಂಜಿ ಹೂವು ನೀಲ ಬಣ್ಣದಲ್ಲಿ ಅರಳಿ ನಿಂತು ಬೆಟ್ಟಗಳ ಚೆಲುವನ್ನು ಇಮ್ಮಡಿಗೊಳಿಸಿದೆ.
ನೀಲ ಕುರಂಜಿಯ ಈ ಸೌಂದರ್ಯ ರಾಶಿಯ ಫೋಟೋಗಳನ್ನು ಬಿಆರ್‌ಟಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂತೋಷ್‌ಕುಮಾರ್ ಹಂಚಿಕೊಂಡಿದ್ದಾರೆ.
ಪ್ರವಾಸಿಗರಿಗೆ ಈ ಸೌಂದರ್ಯ ನೋಡುವ ಅವಕಾಶ ಇಲ್ಲ. ಏಕೆಂದರೆ ಈ ಪ್ರದೇಶ ಹುಲಿ ಸಂರಕ್ಷಿತ ಅರಣ್ಯವಾಗಿದ್ದು, ಈ ಸ್ಥಳಕ್ಕೆ ಹೋಗಲು ನಿರ್ಬಂಧವಿದೆ.