ಹುಬ್ಬಳ್ಳಿ: ಭವಿಷ್ಯದಲ್ಲಿ ಹುಬ್ಬಳ್ಳಿ ಕರ್ನಾಟಕದ ವಿದ್ಯುನ್ಮಾನ ಕೇಂದ್ರವಾಗಿ ರೂಪುಗೊಳ್ಳಲಿದೆ. ಬೆಂಗಳೂರು ಐಟಿ ರಾಜ್ಯಧಾನಿಯಾದರೆ, ಧಾರವಾಡ ಜ್ಞಾನದ ರಾಜ್ಯಧಾನಿಯಾಗಿದ್ದು, ಉತ್ತರ ಕರ್ನಾಟಕ ಅಭಿವೃದ್ಧಿಗೆ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದು ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಹಾಯಕ ಸಚಿವ ಅನಂತಕುಮಾರ ಹೆಗಡೆ ಹೇಳಿದರು. ಶನಿವಾರ ಇಲ್ಲಿನ ದೇಶಪಾಂಡೆ ಪ್ರತಿಷ್ಠಾನದ ಸ್ಯಾಂಡ್ ಬಾಕ್ಸ್ ಸ್ಟಾರ್ಟ್‌ಅಪ್ಸ್‌ನಲ್ಲಿ ಎಲೆಕ್ಟ್ರಾನಿಕ್ ಸಿಸ್ಟಮ್ ವಿನ್ಯಾಸ ಮತ್ತು ಉತ್ಪಾದನೆ ಸೌಕರ್ಯವನ್ನು ನವೋದ್ಯಮಿಗಳಿಗೆ ಒದಗಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನವೋದ್ಯಮಿಗಳಿಗೆ ಇಂತಹ ಸೌಲಭ್ಯ ಒದಗಿಸುವಲ್ಲಿ ಮೈಸೂರು ನಂತರದ ನಗರ ಹುಬ್ಬಳ್ಳಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಕ್ಷಯಪಾತ್ರಾ ಸವಾಲಿನ ಮಾದರಿಯಾಗಿ ನಮ್ಮ ಕಣ್ಣ ಮುಂದಿದೆ. ದೇಶಪಾಂಡೆ ಪ್ರತಿಷ್ಠಾನ ಕೌಶಲ ಅಭಿವೃದ್ಧಿ ಮೂಲಕ ಮೌಲ್ಯಯುತ ಹಾಗೂ ಗುಣಮಟ್ಟದ ಮಾನವ ಸಂಪನ್ಮೂಲವನ್ನು ಸಿದ್ಧಪಡಿಸುತ್ತಿದೆ. ಕೃತಕ ಬುದ್ಧಿಮತ್ತೆ, ಎಲೆಕ್ಟ್ರಾನಿಕ್ ಇನ್ನಿತರ ಕ್ಷೇತ್ರಗಳಲ್ಲಿ ಉದ್ಯಮ ಹುಡುಕುತ್ತಿರುವ ಅನೇಕರಿಗೆ ಕೌಶಲದ ವಿಧಾನ ನೀಡಬೇಕಿದೆ ಎಂದರು.
ಉದ್ಯಮ ಆರಂಭಕ್ಕೆ ಕರೆ: ನಂತರ ದೇಶಪಾಂಡೆ ಎಜುಕೇಶನ್ ಟ್ರಸ್ಟ್(ಡಿಇಟಿ)ಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು ಅಲ್ಲಿನ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳು ಯಶಸ್ವಿಯಾಗಲು ಉತ್ಸಾಹ ಹಾಗೂ ವಿಶ್ವಾಸ ಹೊಂದಬೇಕು. ನಿಮಗೆ ಬೇಕಾದ ಕೌಶಲ ನೀಡಿಕೆ ಕಾರ್ಯವನ್ನು ಡಿಇಟಿ ಮಾಡುತ್ತಿದ್ದು, ನಿಮ್ಮಲ್ಲಿನ ಭಯ ತೊರೆದು ಉದ್ಯಮಿಗಳಾಗಲು ಮುಂದಾಗಬೇಕೆಂದು ಕರೆ ನೀಡಿದರು. ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆ ಕಾರ್ಯದರ್ಶಿ ಡಾ| ಕೆ.ಪಿ. ಕೃಷ್ಣನ್ ಮಾತನಾಡಿ, ದೇಶದಲ್ಲಿ 15,000 ಐಟಿಐಗಳು ಇದ್ದು, ಅವುಗಳನ್ನು ಡಿಇಟಿ ಮಾದರಿಯಲ್ಲಿ ಪರಿವರ್ತಿಸಬೇಕಾಗಿದೆ. ಪ್ರಾಯೋಗಿಕ ಕಲಿಕೆ ಮತ್ತು ಉತ್ತಮ ಕೈಗಾರಿಕಾ ಪ್ರವಾಸದ ಮೂಲಕ ಅಗತ್ಯವಿರುವ ಕೌಶಲವನ್ನು ಪ್ರತಿ ವಿದ್ಯಾರ್ಥಿ ಪಡೆಯಬೇಕಾಗಿದೆ ಎಂದರು. ನಂತರ ಉದ್ಯಮದಾರರೊಂದಿಗೆ ಸಂವಾದ ನಡೆಸಿದರು.
ದೇಶಪಾಂಡೆ ಪ್ರತಿಷ್ಠಾನದ ಸಂಸ್ಥಾಪಕ ಡಾ| ಗುರುರಾಜ ದೇಶಪಾಂಡೆ ಮಾತನಾಡಿ, ಉತ್ತಮ ಅವಕಾಶಗಳನ್ನು ಬಳಸಿಕೊಳ್ಳುವ ಮತ್ತು ಪ್ರವೃತ್ತಿಯಲ್ಲಿ ವಿಭಿನ್ನ ಕೌಶಲಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಯಶಸ್ಸಿನ ನೆಗೆತ ಕಾಣಬೇಕೆಂದು ಡಿಇಟಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಡಾ| ಕಟ್ಟೇಶ ವಿ. ಕಟ್ಟಿ, ಡಾ| ಸುಶಿಲ್ ವಚಾನಿ, ವಿವೇಕ ಪವಾರ, ಜಯಶ್ರೀ ಗುರುರಾಜ ದೇಶಪಾಂಡೆ ಇನ್ನಿತರರಿದ್ದರು.