ಬೆಂಗಳೂರಿಗೆ ಐಟಿ ಸಿಟಿ ಎಂದು ಹೆಸರು ಬರಲು “ಎಲೆಕ್ಟ್ರಾನಿಕ್ ಸಿಟಿ’ ಏರಿಯಾ ಕೂಡ ಪ್ರಮುಖ ಕಾರಣ. ಬೆಂಗಳೂರಿನ ಬಹುತೇಕ ಐಟಿ ಕಂಪನಿಗಳು ಕಾರ್ಯನಿರ್ವಹಿಸುವುದು ಇದೇ “ಎಲೆಕ್ಟ್ರಾನಿಕ್ ಸಿಟಿ’ಯಿಂದ. ಈಗ ಇದೇ “ಎಲೆಕ್ಟ್ರಾನಿಕ್ ಸಿಟಿ’ ಎಂಬ ಹೆಸರಿನಲ್ಲಿ ಸಿನಿಮಾವೊಂದು ಈ ವಾರ ತೆರೆಗೆ ಬಂದಿದೆ. ಸಿನಿಮಾದ ಹೆಸರೇ
ಹೇಳುವಂತೆ “ಎಲೆಕ್ಟ್ರಾನಿಕ್ ಸಿಟಿ’ ಬೆಂಗಳೂರಿನ ಇಂದಿನ ಐಟಿ ಉದ್ಯೋಗಿಗಳ ಜೀವನವನ್ನು ತೆರೆದಿಡುವ ಚಿತ್ರ. ಕೆಲವೊಂದು ಐಟಿ ಕಂಪೆನಿಗಳಲ್ಲಿ ಟೆಕ್ಕಿಗಳು ಯಾವ ರೀತಿ ಮಾನಸಿಕ ಹಿಂದೆ ಅನುಭವಿಸುತ್ತಾರೆ, ಅವರ ಕೆಲಸದ ಒತ್ತಡ ಹೇಗಿರುತ್ತದೆ, ಐಟಿ ಕಂಪೆನಿಗಳಲ್ಲಿ ಕೆಲಸ ಮಾಡುವವರ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನ ಹೇಗಿರುತ್ತದೆ ಎಂಬುದನ್ನು “ಎಲೆಕ್ಟ್ರಾನಿಕ್ ಸಿಟಿ’ ಸಿನಿಮಾದಲ್ಲಿ ಬಿಟ್ಟಿಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಆರ್. ಚಿಕ್ಕಣ್ಣ.
ನಾಯಕ ಆರ್ಯನ್ ಶೆಟ್ಟಿ, ನಾಯಕಿ ದಿಯಾ ಆಶ್ಲೇಶ ಚಿತ್ರದಲ್ಲಿ ತಮ್ಮ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಉಳಿದಂತೆ ರಕ್ಷಿತಾ ಕೆರೆಮನೆ, ರಶ್ಮಿ ಮತ್ತಿತರ ಕಲಾವಿದರು ತಮ್ಮಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಸೆಂಟಿಮೆಂಟ್, ಲವ್, ಅಲ್ಲಲ್ಲಿ ಕಾಮಿಡಿ ಹೀಗೆ ಒಂದಷ್ಟು ಎಂಟರ್‌ಟೈನ್ಮೆಂಟ್ ಅಂಶಗಳನ್ನು ಇಟ್ಟುಕೊಂಡು ಕಮರ್ಷಿಯಲ್ ಆಗಿ “ಎಲೆಕ್ಟ್ರಾನಿಕ್ ಸಿಟಿ’ ಸಿನಿಮಾವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದೆ ಚಿತ್ರತಂಡ.
ಬಿಡುಗಡೆಗೂ ಮೊದಲೇ ನಲವತ್ತೆರಡಕ್ಕೂ ಅಧಿಕ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿರುವ “ಎಲೆಕ್ಟ್ರಾನಿಕ್ ಸಿಟಿ’ ಸಿನಿಮಾ ವಿವಿಧ ವಿಭಾಗಗಳಲ್ಲಿ ಸುಮಾರು ಮೂವತ್ತಕ್ಕೂ ಅಧಿಕ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಐಟಿ ಮಂದಿಯ ಲೈಫ್ಸ್ಟೈಲ್ ಹೇಗಿರುತ್ತದೆ, ಅವರ ಬದುಕು-ಬವಣೆಗಳನ್ನು ನೋಡಬೇಕು ಎನ್ನುವವರು ವೀಕೆಂಡ್‌ನಲ್ಲಿ ಒಮ್ಮೆ “ಎಲೆಕ್ಟ್ರಾನಿಕ್ ಸಿಟಿ’ ನೋಡಿ ಬರಬಹುದು.