Advertisement

ವಿದ್ಯುತ್‌ ಕಣ್ಣಾಮುಚ್ಚಾಲೆ; ಒಣಗುತ್ತಿವೆ ಗದ್ದೆ

04:49 PM Sep 05, 2020 | Suhan S |

ಗಂಗಾವತಿ: ಈಗಾಗಲೇ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ನಾಟಿಯಾಗಿ ಎರಡು ತಿಂಗಳು ಗತಿಸಿದ್ದು, ಪಂಪ್‌ಸೆಟ್‌ ಮೂಲಕ ನೀರಾವರಿ ಮಾಡಿದ ಪ್ರದೇಶದಲ್ಲಿ ವಿದ್ಯುತ್‌ ಕಣ್ಣುಮುಚ್ಚಾಲೆಯಿಂದಾಗಿ ಭತ್ತದ ಗದ್ದೆ ಒಣಗುತ್ತಿವೆ.

Advertisement

ತುಂಗಭದ್ರಾ ಎಡದಂಡೆ ಕಾಲುವೆಯ ಕೊನೆ ಭಾಗದಲ್ಲಿರುವ ಭೂಮಿಗೆ ಕಾಲುವೆ ನೀರು ಹೋಗುವುದಿಲ್ಲ. ಸರಕಾರ ಸಾಮೂಹಿಕವಾಗಿ ಸಬ್ಸಿಡಿ ಯೋಜನೆಯಂತೆ ತುಂಗಭದ್ರಾ ನದಿ ಮೂಲಕ ಪಂಪ್‌ಸೆಟ್‌ ಅಳವಡಿಸಿ ರೈತರ ಭೂಮಿಗೆ ನೀರು ಒದಗಿಸಿದೆ. ಗಂಗಾವತಿ, ಕಾರಟಗಿ ತಾಲೂಕಿನ ಬಹುತೇಕ ನದಿ ಪಕ್ಕದ ಭೂಮಿಗೆ ನದಿ ನೀರು ಆಶ್ರಯವಾಗಿದೆ. ಒಂದು ವಾರದಿಂದ ವಿದ್ಯುತ್‌ ಕಣ್ಣುಮುಚ್ಚಾಲೆಯಿಂದಾಗಿ ನೂರಾರು ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ್ದ ಭತ್ತ ಒಣಗುವ ಸ್ಥಿತಿಗೆ ಬಂದಿದೆ. ಶಾಸಕರು, ಸಂಸದರು ಸೇರಿ ಚುನಾಯಿತರಿಗೆ ಆಡಳಿತ ಮತ್ತು ವಿಪಕ್ಷದ ಕಾರ್ಯಕರ್ತರು, ರೈತರು ಹಲವು ಭಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈ ಹಿಂದೆ ರಾಜ್ಯದಲ್ಲಿ ಸಮಿಶ್ರ ಸರಕಾರದ ಸಂದರ್ಭದಲ್ಲಿ ಶಾಸಕ ಬಸವರಾಜ ದಢೇಸುಗೂರು ಹಾಗೂ ಜಿಲ್ಲೆಯ ಜನಪ್ರತಿನಿಧಿ ಗಳು ಅಂದಿನ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ನದಿ ಪಾತ್ರ ಗ್ರಾಮಗಳಿಗೆ ಕನಿಷ್ಟ 10 ಗಂಟೆ ತ್ರಿಪೇಸ್‌ ವಿದ್ಯುತ್‌ ಪೂರೈಸುವಂತೆ ಜೆಸ್ಕಾಂ ಹಾಗೂ ಕೆಪಿಟಿಸಿಎಲ್‌ಗೆ ಆದೇಶ ಮಾಡಿಸಿದ್ದರು. ಇದುವರೆಗೂ 7 ತಾಸು ವಿದ್ಯುತ್‌ ಪೂರೈಕೆಯಾಗುತ್ತಿತ್ತು. ಕಳೆದ ವಾರದಿಂದ ವಿದ್ಯುತ್‌ ಕಣ್ಣುಮುಚ್ಚಾಲೆ ಶುರುವಾಗಿದ್ದು ನೂರಾರು ರೈತರ ಪಂಪ್‌ಸೆಟ್‌ ಸುಟ್ಟು ಹೋಗಿವೆ. ಇದರಿಂದ ಭತ್ತದ ಗದ್ದೆಗೆ ಸರಿಯಾಗಿ ನದಿ ನೀರನ್ನು ಪೂರೈಸಲು ಆಗುತ್ತಿಲ್ಲ. ನೂರಾರು ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ ಭತ್ತದ ಗದ್ದೆ ಬಿರುಕು ಬಿಟ್ಟಿದ್ದು, ಬೆಳೆ ಒಣಗುವ ಹಂತ ತಲುಪಿದೆ.

ಈ ಭಾರಿ ಉತ್ತಮ ಮಳೆಯಾಗಿದ್ದರಿಂದ ತುಂಗಭದ್ರಾ ಡ್ಯಾಂ ಭರ್ತಿಯಾಗಿ ಕಾಲುವೆ ಮತ್ತು ನದಿಗೆ ನೀರು ಹರಿಸಿದ್ದರಿಂದ ರೈತರು ಬೇಗನೆ ಭತ್ತ ನಾಟಿ ಮಾಡಿದ್ದು, ಎರಡನೇ ಸತುವು ಹಾಕುವ ವೇಳೆಗೆ ವಿದ್ಯುತ್‌ ಅಸಮರ್ಪಕ ಪೂರೈಕೆಯಿಂದ ರೈತರು ಸರಕಾರ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಟೀಕೆ :  ನದಿ ಪಾತ್ರದ ಗ್ರಾಮಗಳ ಭೂಮಿಗೆ ಪಂಪ್‌ಸೆಟ್‌ ನೀರು ಆಧಾರವಾಗಿದ್ದು, ಒಂದು ವಾರದಿಂದ ಅಸಮರ್ಪಕ ವಿದ್ಯುತ್‌ ಪೂರೈಕೆಯಿಂದ ಭತ್ತದ ಬೆಳೆ ಒಣಗುತ್ತಿದೆ. ಈ ಹಿಂದೆ ಕಾಂಗ್ರೆಸ್‌ ಮತ್ತು ಸಮಿಶ್ರ ಸರಕಾರದ ಸಂದರ್ಭದಲ್ಲಿ ವಿದ್ಯುತ್‌ ಅಡಚಣೆಯಾದ ವೇಳೆ ಜೆಸ್ಕಾಂ ಕಚೇರಿ ಎದುರು ರೈತರು ಮತ್ತು ಬಿಜೆಪಿ ಕಾರ್ಯಕರ್ತರ ಜತೆ ಹೋರಾಟ ನಡೆಸಿದ್ದ ಶಾಸಕ ಬಸವರಾಜ ದಢೇಸುಗೂರು ಅವರನ್ನು ಕನಕಗಿರಿ ಕ್ಷೇತ್ರದ ಜತೆಗೆ ಗೆಲ್ಲಿಸಿದ್ದಾರೆ. ಇದೀಗ ಸರಿಯಾದ ವಿದ್ಯುತ್‌ ಪೂರೈಕೆ ಮಾಡದ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಶಾಸಕರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ನದಿ ಪಾತ್ರದ ರೈತರೊಬ್ಬರು ಫೇಸ್‌ಬುಕ್‌ ಹಾಗೂ ವಾಟ್ಸ್‌ಆ್ಯಪ್‌ ಗಳಲ್ಲಿ ಒಣಗಿದ ಭತ್ತದ ಗದ್ದೆ ಸಮೇತ ಸ್ಟೇಟಸ್‌ ಹಾಕಿ ಶಾಸಕರ ಕಾರ್ಯವೈಖರಿ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರೈತರು ಸಂಕಷ್ಟದಲ್ಲಿದ್ದರೂ ಮಾಜಿ ಸಚಿವ ಶಿವರಾಜ್‌ ತಂಗಡಗಿ ಹಾಗೂ ಕಾಂಗ್ರೆಸ್‌ ಮುಖಂಡರು ಮೌನವಹಿಸಿರುವುದನ್ನು ರೈತರು ಖಂಡಿಸಿದ್ದಾರೆ.

ಸರಕಾರದ ಆದೇಶದಂತೆ 7 ತಾಸು ವಿದ್ಯುತ್‌ ಪೂರೈಸುತ್ತಿದ್ದು ಮಳೆಗಾಲವಾಗಿದ್ದರಿಂದ ತಾಂತ್ರಿಕ ತೊಂದರೆ ಸಹಜವಾಗಿದೆ. ಇದುವರೆಗೂ ಯಾವ ರೈತರು ಲಿಖೀತ ದೂರು ನೀಡಿಲ್ಲ. ಮಳೆಗಾಲವಾಗಿರುವುದರಿಂದ 7 ತಾಸು ವಿದ್ಯುತ್‌ ಪೂರೈಸಲಾಗುತ್ತಿದ್ದು 9 ತಾಸು ವಿದ್ಯುತ್‌ ಪೂರೈಸುವಂತೆ ರೈತರ ಬೇಡಿಕೆ ಇದೆ. ಸರಕಾರದ ಆದೇಶ ಬಂದ ತಕ್ಷಣ 9 ತಾಸು ಪೂರೈಕೆ ಮಾಡಲಾಗುತ್ತದೆ.  –ಅರುಣಕುಮಾರ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಜೆಸ್ಕಾಂ

Advertisement

 

-ಕೆ. ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next