ದೇವದುರ್ಗ: ಬೇಸಿಗೆಯಲ್ಲಿ ಜನರು ಮನೆ ಬಿಟ್ಟು ಹೊರಗಡೆ ಬರಲಾರದಂತಹ ಸ್ಥಿತಿ ಮಧ್ಯೆಯೇ ಆಗಾಗ ವಿದ್ಯುತ್ ವ್ಯತ್ಯಯ ಗ್ರಾಹಕರ ಜೀವ ಹಿಂಡುತ್ತಿದೆ. ದಿನಕ್ಕೆ ಹತ್ತಾರು ಸಲ ಕರೆಂಟ್ ಕೈ ಕೊಡುತ್ತಿರುವ ಕಾರಣ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಗಿದೆ. ಇನ್ನು ಗ್ರಾಮೀಣ ಭಾಗದ ಜನರ ಪರಿಸ್ಥಿತಿಯಂತೂ ಹೇಳತೀರದಾಗಿದೆ.
ತಡರಾತ್ರಿ ವಿದ್ಯುತ್ ವ್ಯತ್ಯಯ ಆಗುತ್ತಿರುವ ಹಿನ್ನೆಲೆ ಜಾಗರಣೆ ಮಾಡಬೇಕಾಗಿದೆ. ಆಗಾಗ ವಿದ್ಯುತ್ ವ್ಯತ್ಯಯ ಸಮಸ್ಯೆ ಜೆಸ್ಕಾಂ ಅಧಿಕಾರಿಗಳಿಗೆ ಪೂರಕ ಮಾಹಿತಿ ಲಭ್ಯವಿಲ್ಲದಾಗಿದೆ. ಬೆಳಗ್ಗೆ, ಮಧ್ಯಾಹ್ನ, ಸಂಜೆ, ತಡರಾತ್ರಿ ವಿದ್ಯುತ್ ವ್ಯತ್ಯಯ ಆಗಿದ್ದರಿಂದ ಗ್ರಾಹಕರು ಬೇಸತ್ತಿದ್ದಾರೆ.
ಕೆ.ಇರಬಗೇರಾ, ಆಲ್ಕೋಡ್, ಜಾಲಹಳ್ಳಿ ಸೇರಿದಂತೆ 33 ವಿದ್ಯುತ್ ಘಟಕಗಳಿದ್ದರೂ ಸಮರ್ಪಕ ವಿದ್ಯುತ್ ಪೂರೈಸುತ್ತಿಲ್ಲ. ಪಟ್ಟಣದಲ್ಲಿ 110 ಕೆವಿ ಘಟಕವಿದ್ದರೂ ವಿದ್ಯುತ್ ಪೂರೈಕೆಯಲ್ಲಿ ತೊಂದರೆ ಉಂಟಾಗುತ್ತಿದೆ. ವಾಲಿದ ಕಂಬಗಳು ಹಳೆ ತಂತಿಗಳು ಸರಿಪಡಿಸಲು ಅಧಿಕಾರಿಗಳಿಗೆ ಸಮಸ್ಯೆ ತಂದಿದೆ.
ವಿದ್ಯುತ್ ವ್ಯತ್ಯಯ ಉಂಟಾದಲ್ಲಿ, ನಿತ್ಯ ತಾಂತ್ರಿಕ ದೋಷ ಹೇಳುತ್ತಲೇ ಜಾರಿಕೊಳ್ಳುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭಗೊಂಡಿದ್ದು, ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ತೊಂದರೆ ಆಗಿದೆ.
ಇನ್ನು ಹಳ್ಳಿಗಳಲ್ಲಿ ಬೆಳಗ್ಗೆ ಹೋದ ಕರೆಂಟ್ ಸಂಜೆವತ್ತಾದರೂ ಬಾರದಿರುವುದರಿಂದ ಗ್ರಾಮಸ್ಥರು ಅನೇಕ ಸಮಸ್ಯೆ ಎದುರಿಸುವಂತಾಗಿದೆ. ತಾಲೂಕಿನಲ್ಲಿ ತಾಂಡಾ, ದೊಡ್ಡಿಗಳು ಹೆಚ್ಚಿದ್ದು, ಅಂತಹ ಗ್ರಾಮಗಳಿಗೆ ಸಮರ್ಪಕ ವಿದ್ಯುತ್ ಇಲ್ಲವಾಗಿದೆ.
ಕೆಲ ತಾಂತ್ರಿಕ ಸಮಸ್ಯೆಯಿಂದ ಆಗಾಗ ವಿದ್ಯುತ್ ವ್ಯತ್ಯಯ ಆಗುತ್ತಿದೆ. ಸಮಸ್ಯೆ ಇರುವ ಕಡೆ ಸರಿಪಡಿಸಲು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.
-ಕಳಕಪ್ಪ, ಜೆಸ್ಕಾಂ ಇಲಾಖೆ ಎಇಇ