Advertisement

Power Shortage; ವಿದ್ಯುತ್‌ ಇದ್ದರೂ ಖರೀದಿ ಯಾಕಿಲ್ಲ?

10:46 AM Oct 12, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಈಗ ತೀವ್ರ ವಿದ್ಯುತ್‌ ಅಭಾವ ಉಂಟಾಗಿದ್ದು, ಪೂರೈಕೆಯಲ್ಲಿ ಪದೇಪದೆ ವ್ಯತ್ಯಯ ಉಂಟಾಗುತ್ತಿದೆ. ವಿದ್ಯುತ್‌ಗಾಗಿ ನಾನಾ ಕಡೆ ಸರಕಾರ ಹುಡುಕಾಟ ನಡೆಸಿದೆ. ಆದರೆ, ವಿಜಯಪುರದ ಕೂಡಿಗಿಯಲ್ಲೇ ಆ ಕೊರತೆ ನೀಗಿಸುವಷ್ಟು ವಿದ್ಯುತ್‌ ಲಭ್ಯವಿದೆ. ಈ ನಿಟ್ಟಿನಲ್ಲಿ ಮನಸ್ಸು ಮಾಡಬೇಕಿದೆ ಅಷ್ಟೇ. ಅಲ್ಲಿ ಇರುವ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್‌ ನಿಗಮ (ಎನ್‌ಟಿಪಿಸಿ)ದ ಉಷ್ಣ ವಿದ್ಯುತ್‌ ಸ್ಥಾವರದಲ್ಲಿ ತಲಾ 800 ಮೆ. ವಾ. ಸಾಮರ್ಥ್ಯದ ಮೂರು ಘಟಕಗಳು ಸೇರಿ 2,400 ಮೆ.ವಾ. ಉತ್ಪಾದನೆ ಆಗುತ್ತಿದೆ. ಅದರಲ್ಲಿ ರಾಜ್ಯದ ಪಾಲು ಶೇ. 50ರಷ್ಟಿದ್ದು, 1,200 ಮೆ.ವಾ. ವಿದ್ಯುತ್‌ ರಾಜ್ಯಕ್ಕೆ ಪೂರೈಕೆಯಾಗುತ್ತಿದೆ. ಉಳಿದುದು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದು, ಇದನ್ನು ಖರೀದಿಸಿದರೆ ರಾಜ್ಯದ ವಿದ್ಯುತ್‌ ಕೊರತೆಯನ್ನು ಬಹುತೇಕ ಪ್ರಮಾಣವನ್ನು ನೀಗಿಸ ಬಹುದು.

Advertisement

ರಾಜ್ಯದ ಪಾಲು 1,200 ಮೆ. ವಾ. ವಿದ್ಯುತ್‌ ಈ ಮೊದಲೇ ಆದ ಒಪ್ಪಂದದ ಪ್ರಕಾರ ಯೂನಿಟ್‌ಗೆ 5.10 ರೂ. ದರದಲ್ಲಿ ಪೂರೈಕೆ ಆಗುತ್ತಿದೆ. ಹೆಚ್ಚುವರಿ ಬೇಕಾದಾಗ ಮುಕ್ತ ಮಾರುಕಟ್ಟೆಯಲ್ಲಿ ದಿನದ ದರದಲ್ಲಿ ಖರೀದಿಸಬಹುದು. ಬುಧವಾರಕ್ಕೆ ಆ ವಿದ್ಯುತ್‌ನ ದರ ಯೂನಿಟ್‌ ಗೆ 10 ರೂ. ಇದ್ದು, ಯಾರು ಬೇಕಾದರೂ ಅದನ್ನು ಪಡೆಯಬಹುದು ಎಂದು ಕೂಡಿಗಿ ಉಷ್ಣ ವಿದ್ಯುತ್‌ ಸ್ಥಾವರದ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಇಲ್ಲಿ ಉತ್ಪಾದನೆಯಾಗುವ ವಿದ್ಯುತ್‌ ಕೇರಳ ಮತ್ತು ತಮಿಳುನಾಡಿಗೂ ಪೂರೈಕೆ ಮಾಡಲಾಗುತ್ತಿದೆ. ಒಂದು ವೇಳೆ ಆ ರಾಜ್ಯಗಳಿಗೆ ಅಷ್ಟೊಂದು ಅಗತ್ಯವಿಲ್ಲ ಎಂದಾದರೆ, ಆಯಾ ರಾಜ್ಯಗಳೊಂದಿಗೆ ಸರಕಾರದ ಮಟ್ಟದಲ್ಲಿ ಮಾತುಕತೆ ನಡೆಸುವ ಮೂಲಕ ಮತ್ತಷ್ಟು ಕಡಿಮೆ ದರದಲ್ಲಿ ಖರೀದಿಗೂ ಅವಕಾಶ ಇದೆ. ಈಚೆಗೆ ಕೇರಳದಲ್ಲಿ ಹೆಚ್ಚುವರಿ ವಿದ್ಯುತ್‌ ಇದ್ದುದರಿಂದ ಇದೇ ಕೂಡಿಗಿಯಿಂದ ಪೂರೈಕೆಯಾಗಿದ್ದರಲ್ಲಿ ಸ್ವಲ್ಪ ಭಾಗವನ್ನು ಕರ್ನಾಟಕಕ್ಕೆ ನೀಡಿದ್ದೂ ಇದೆ ಎಂದೂ ಅಲ್ಲಿನ ಅಧಿಕಾರಿ ಸ್ಪಷ್ಟಪಡಿಸಿದರು.

ಇನ್ನು ಈ ಮೂರೂ ಘಟಕಗಳಿಗೆ ಕಲ್ಲಿದ್ದಲು ಕೊರತೆ ಉಂಟಾಗಿಲ್ಲ. ಉದ್ದೇಶಿತ ಸ್ಥಾವರಕ್ಕೆ ಸ್ವತಃ ಎನ್‌ಟಿಪಿಸಿಯ ಝಾರ್ಖಂಡ್‌ನ‌ ಪಾಕ್ರಿ ಬರ್ವಾಡಿ ಮತ್ತು ಸಿಂಗರೇಣಿ ಕಲ್ಲಿದ್ದಲು ಗಣಿಯಿಂದ ಪೂರೈಕೆ ಆಗುತ್ತಿದೆ. ಸ್ಥಾವರದ ಸಂಪೂರ್ಣ ಸಾಮರ್ಥ್ಯದ ವಿದ್ಯುತ್‌ ಉತ್ಪಾದನೆ ಆಗುತ್ತಿದೆ ಎಂದೂ ಅಧಿಕಾರಿಗಳು ಹೇಳಿದರು.

ಪಂಜಾಬ್‌, ಉ.ಪ್ರ.ಮೊರೆ

Advertisement

ರಾಜ್ಯದಲ್ಲಿ ಪ್ರಸ್ತುತ ಸುಮಾರು 1,500 ಮೆ. ವ್ಯಾ. ವಿದ್ಯುತ್‌ ಕೊರತೆ ಇದೆ. ಇದನ್ನು ನೀಗಿಸಲು ಸರಕಾರವು ಉತ್ತರ ಪ್ರದೇಶದಿಂದ 2023ರ ಅಕ್ಟೋಬರ್‌ನಿಂದ 2024ರ ಸೆಪ್ಟಂಬರ್‌ವರೆಗೆ 300-600 ಮೆ.ವ್ಯಾ ಪಡೆಯುತ್ತಿದೆ. ಇದು ಸೌರವಿದ್ಯುತ್‌ ಉತ್ಪಾದನೆ ಆರಂಭಕ್ಕೂ ಮೊದಲು ಮತ್ತು ಬಳಿಕದ ಅವಧಿಯಲ್ಲಿ ನಿತ್ಯ ವಿನಿಮಯ (ಸ್ವಾéಪಿಂಗ್‌) ಪೂರೈಕೆ ಆಗಲಿದೆ. ಇದನ್ನು 2024ರ ಜೂನ್‌- ಸೆಪ್ಟಂಬರ್‌ ಅವಧಿಯಲ್ಲಿ ಕರ್ನಾಟಕ ಆ ರಾಜ್ಯಕ್ಕೆ ಹಿಂದಿರುಗಿಸಲಿದೆ. ಇದೇ ಮಾದರಿಯಲ್ಲಿ ಪಂಜಾಬ್‌ನಿಂದ 500 ಮೆ.ವಾ. ಅನ್ನು 2023ರ ನವೆಂಬರ್‌- 2024ರ ಮೇ ಅವಧಿಗೆ ಪಡೆಯಲಾಗುತ್ತಿದೆ.

ಇದಲ್ಲದೆ, ಪರಿಸ್ಥಿತಿ ನಿಭಾಯಿಸಲು ಅಧಿಕ ವಿದ್ಯುತ್‌ ಖರೀದಿಗಾಗಿ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ದ ಅನುಮತಿಯೊಂದಿಗೆ 1,250 ಮೆ.ವಾ. ಆರ್‌ಟಿಸಿ ಆಧಾರದಲ್ಲಿ ಮತ್ತು 250 ಮೆ.ವಾ. ಅತ್ಯಧಿಕ ಬೇಡಿಕೆ (ಪೀಕ್‌ ಅವರ್‌) ಅವಧಿಗಾಗಿ ಅಲ್ಪಾವಧಿ ಟೆಂಡರ್‌ ಕರೆಯಲು ಕೂಡ ಸರಕಾರ ಉದ್ದೇಶಿಸಿದೆ.

ಏರಿಳಿಕೆಯೇ ಸಮಸ್ಯೆ

ರಾಜ್ಯದಲ್ಲಿ ಒಂದೆಡೆ ವಿದ್ಯುತ್‌ ಬೇಡಿಕೆ ಹೆಚ್ಚಾಗಿದ್ದರೆ, ಮತ್ತೂಂದೆಡೆ ಉತ್ಪಾದನೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ. ಅದರಲ್ಲೂ ಪವನ ಮತ್ತು ಸೌರ ವಿದ್ಯುತ್‌ನಲ್ಲಿ ಗಣನೀಯವಾಗಿ ಕುಸಿತವಾಗಿದೆ. ಇದು ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ ಎಂದು ಇಂಧನ ಇಲಾಖೆ ತಿಳಿಸಿದೆ.

ವಿಜಯ ಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next