ಸಾಗರ: ಪಶ್ಚಿಮ ಘಟ್ಟದ ಪೂರ್ವದ ಇಳಿಜಾರಿನಲ್ಲಿ ಸೀತಾಮಾತೆಯ ಬಾಯಾರಿಕೆ ತಣಿಸಲು ಶ್ರೀರಾಮನ ಬಾಣದಿಂದ ಉಗಮಿಸಿದ ಶರಾವತಿ ನಾಡಿಗೆ ಸಿರಿ ಬೆಳಕಾದಳು ಎಂದು ಕೂಡ್ಲಿ ಸಂಸ್ಥಾನ ಮಠದ ವಿದ್ವಾನ್ ಸಿದ್ದವೀರ ಮಹಾಸ್ವಾಮಿಗಳು ಹೇಳಿದರು.
ಅಂಬುತೀರ್ಥದಿಂದ ಸಾಗರ ಸಂಗಮದವರೆಗಿನ ಕಾಸರಗೋಡಿನವರೆಗೆ ನಡೆದ ‘ಶರಾವತಿ ದೀಪಾರತಿ’ ಕಾರ್ಯಕ್ರಮದಲ್ಲಿ ನದಿಗೆ ಪೂಜೆ ಸಲ್ಲಿಸಿ ದೀಪಾರತಿ ಬೆಳಗಿ ಅವರು ಮಾತನಾಡಿದರು.
ಹುಟ್ಟಿನಿಂದ ಸಮುದ್ರ ಸಂಗಮದವರೆಗೆ ಕೇವಲ 132 ಕಿಮೀ ಹರಿದ ಶರಾವತಿ ಚಿಕ್ಕ ನದಿಯಾದರೂ 1400ಕ್ಕೂ ಹೆಚ್ಚು ಮೆಗಾವ್ಯಾಟ್ ಉತ್ಪಾದಿಸುವ ವಿದ್ಯುದಾಗಾರವಿದೆ. ತನ್ನ ಹರಿವಿನ ಜೋಗದ ಬಳಿ ಪ್ರಪಾತಕ್ಕೆ ಧುಮುಖೀ ಅತ್ಯಂತ ಸೌಂದರ್ಯದ ಜಲಪಾತವಾಗಿದ್ದು ಅದು ಜಗತ್‌ಪ್ರಸಿದ್ಧವಾಗಿದೆ. ಶರಾವತಿ ಹಾಗೂ ಮೆಣಸಗಾರು ಹೊಳೆಯ ಸಂಗಮಸ್ಥಾನದಲ್ಲಿದ್ದ ಕೂಡ್ಲಿ ಸಂಸ್ಥಾನ ಮಠವನ್ನು ನೆನಪಿಸಿಕೊಂಡ ಅವರು ಜಲಸಮಾಧಿ ಯಾದರೂ ನಾಡಿಗೆ ಬೆಳಕು ನೀಡಿದ ಪವಿತ್ರ ಕಾರ್ಯದಲ್ಲಿ ಭಾಗಿಯಾದ ತೃಪ್ತಿ ಇದೆ ಎಂದರು.
ಜಿಪಂ ಮಾಜಿ ಸದಸ್ಯ ರಾಜಶೇಖರ ಗಾಳಿಪುರ ಮಾತನಾಡಿ, ಗಂಗೆ, ಸರಸ್ವತಿ, ತುಂಗೆ ಮುಂತಾದ ಪವಿತ್ರ ನದಿಗಳ ಸಾಲಿನಲ್ಲಿ ಶರಾವತಿಯೂ ಸೇರುತ್ತದೆ. ಶರಾವತಿ ತೀರದ ತೆಂಗು, ಕಂಗು, ಮಾವು, ಹಲಸು ಮುಂತಾದ ಬೆಳೆಗಳು ನದೀ ತೀರದ ಜನರನ್ನು ಸಮೃದ್ಧವಾಗಿಸಿರಿಸಿದೆ. ಶರಾವತಿ ನದಿ ತೀರದ ಸಂಸ್ಕೃತಿ ಮಲೆನಾಡಿನಲ್ಲಿಯೇ ಸುಸಂಸ್ಕೃತವೆನಿಸಿದೆ. ಶರಾವತಿ ಆರತಿ ಕಾರ್ಯಕ್ರಮವು ನದಿಗೆ ಸಲ್ಲಿಸುವ ಗೌರವ ಕಾರ್ಯಕ್ರಮವಾಗಿದ್ದು ಪ್ರತಿ ವರ್ಷವೂ ಆಚರಿಸಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಪ್ರೇಮಾ ಭಾಸ್ಕರ್, ಉಪಾಧ್ಯಕ್ಷ ಲಕ್ಷೀನಾರಾಯಣ, ವಾಸುದೇವ ಕೊಠಾರಿ, ಮೋಹನ ಶೇಟ್, ಮಾರುತಿ, ಓಂಕಾರ ಸಕ್ರೆ, ಲೀಲಾ ಮತ್ತಿತರರು ಇದ್ದರು. ಇದಕ್ಕೂ ಮುನ್ನ ತಾಳಗುಪ್ಪದಿಂದ ಶರಾವತಿ ಹಿನ್ನೀರು ಆವೃತ ಬೆಳ್ಳಣ್ಣೆಯವರೆಗೆ ಸುಮಾರು 5 ಕಿಮೀವರೆಗೆ ಯುವಕರು ಬೈಕ್ ರಾಲಿ ನಡೆಸಿದರು. ನೂರಾರು ದೊಂದಿಗಳು ನದಿತಟದಲ್ಲಿ ಬೆಳಕು ನೀಡಿ ಕತ್ತಲೆಯ ರಾತ್ರಿಯಲ್ಲಿ ವಿಶಿಷ್ಠ ಸೌಂದರ್ಯ ಮೂಡಿಸಿತು.