Advertisement

ಕರಾವಳಿಯಲ್ಲಿ ಕಸದಿಂದ ತಯಾರಾಗಲಿದೆ ವಿದ್ಯುತ್‌!

09:11 PM Aug 26, 2020 | mahesh |

ಮಹಾನಗರ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಪ್ರತೀದಿನ ಉತ್ಪಾದನೆಯಾಗುವ ಒಣಕಸವು ಇನ್ನು ಮುಂದೆ ವ್ಯರ್ಥವಾಗುವುದಿಲ್ಲ; ಬದಲಾಗಿ, ಒಣಕಸದ ಮೂಲಕವೇ ಸುಮಾರು 5 ಮೆ.ವ್ಯಾ. ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದಿಸುವ ಹೊಸ ಯೋಜನೆಗೆ ಕರಾವಳಿ ಜಿಲ್ಲೆ ಅಣಿಯಾಗುತ್ತಿದೆ. ಎರಡೂ ಜಿಲ್ಲೆಯಲ್ಲಿ ಪ್ರತೀ ದಿನ ಉತ್ಪಾದನೆಯಾಗುವ ಸುಮಾರು 300 ಟನ್‌ ಒಣಕಸವನ್ನು ಬಳಸಿಕೊಂಡು ವಿದ್ಯುತ್‌ ಉತ್ಪಾದಿಸಲು ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ (ಕೆ.ಪಿ.ಸಿ.ಎಲ್‌.)ಉದ್ದೇಶಿಸಿದೆ. ತ್ಯಾಜ್ಯದಿಂದ ಬೇರ್ಪಡಿಸಬಹುದಾದ ಪ್ಲಾಸ್ಟಿಕ್‌ನ ವಿವಿಧ ಪ್ರಕಾರಗಳು, ಮರದ ವಸ್ತುಗಳು, ಬಟ್ಟೆ, ಟಯರ್‌ ಸಹಿತ ಸುಡಲು ಸೂಕ್ತವಾಗುವ (ಆರ್‌ಡಿಎಫ್‌) ವಸ್ತುಗಳಿಂದ ವಿದ್ಯುತ್‌ ಉತ್ಪಾದನೆಗೆ ಯೋಚಿಸಲಾಗಿದೆ. ಸುಮಾರು 15 ಎಕರೆ ಪ್ರದೇಶದಲ್ಲಿ ಈ ಯೋಜನೆ ಜಾರಿಗೊಳ್ಳುವ ನಿರೀಕ್ಷೆಯಿದೆ.

Advertisement

ಸದ್ಯ ಬೆಂಗಳೂರು ಪಾಲಿಕೆ ವ್ಯಾಪ್ತಿ ಯಲ್ಲಿ ಇದೇ ಮಾದರಿಯಲ್ಲಿ ಕೆಪಿಸಿಎಲ್‌ ವತಿಯಿಂದ ಪ್ರಾಯೋಗಿಕ ಯೋಜನೆ ಅನುಷ್ಠಾನಿಸಲಾಗಿದೆ. ಅಲ್ಲಿ ಪ್ರತೀದಿನ 500 ಟನ್‌ನಷ್ಟು ಒಣಕಸ ಲಭ್ಯವಾಗುತ್ತಿದ್ದು, 11.5 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆಯ ಯೋಜನೆ ಇದಾಗಿದೆ.

ಕನಿಷ್ಠ 250 ಟನ್‌ ಅಗತ್ಯ
ಕೆಪಿಸಿಎಲ್‌ ಪ್ರಕಾರ, 5 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆಗೆ ಕನಿಷ್ಠ 250ರಿಂದ 300 ಟನ್‌ ಒಣಕಸ ಪ್ರತೀದಿನ ಅಗತ್ಯವಿದೆ. ಆದರೆ ಮಂಗಳೂರು ಪಾಲಿಕೆಯಿಂದ ಕೇವಲ 170 ಟನ್‌ ಒಣಕಸ ಮಾತ್ರ ಸಿಗಲಿದೆ. ಹೀಗಾಗಿ ದ.ಕ. ಜಿಲ್ಲೆಯ ಎಲ್ಲ ನಗರಾಡಳಿತ ಸಂಸ್ಥೆಗಳಿಂದ 50 ಟನ್‌ ಹಾಗೂ ಉಡುಪಿ ಜಿಲ್ಲೆಯಿಂದ ಸುಮಾರು 100 ಟನ್‌ನಷ್ಟು ಒಣಕಸವನ್ನು ಪಡೆಯಲು ನಿರ್ಧರಿಸಲಾಗಿದೆ.

ಸಿಎಸ್‌ ಭೇಟಿ-ಕೆಪಿಸಿಎಲ್‌ಗೆ ಪತ್ರ
ಫೆಬ್ರವರಿಯಲ್ಲಿ ಮಂಗಳೂರಿಗೆ ಆಗಮಿ ಸಿದ್ದ ಸರಕಾರದ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರು ಮಂ ದಾರ ತ್ಯಾಜ್ಯ ದುರಂತ ಸ್ಥಳಕ್ಕೆ ಭೇಟಿ ನೀಡಿ, ತ್ಯಾಜ್ಯದಿಂದ ವಿದ್ಯುತ್‌ ತಯಾರಿಸುವ ಘಟಕ ನಿರ್ಮಿಸುವ ಕುರಿತು ಅವಲೋಕಿಸಿದ್ದರು. ಕೆ.ಪಿ.ಸಿ.ಎಲ್‌.ನ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್‌ ಅವರಿಗೆ ಪತ್ರ ಬರೆದು ಈ ಬಗ್ಗೆ ಪರಿಶೀಲಿಸುವಂತೆ ಕೋರಿದ್ದರು. ಇದರಂತೆ ಮಂಗಳೂರಿಗೆ ಆಗಮಿಸಿದ್ದ ಕೆಪಿಸಿಎಲ್‌ ಅಧಿಕಾರಿಗಳು ಪರಿಶೀಲಿಸಿ ದ.ಕ. ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದು, ಮಂಗಳೂರಿನ ಒಣಕಸ ಮಾತ್ರ ಅಲ್ಲದೆ, ಉಡುಪಿ ಭಾಗದ ಕಸವನ್ನು ಕೂಡ ಬಳಸಿಕೊಂಡರೆ ಯೋಜನೆ ಮಾಡಲು ಸಾಧ್ಯವಿದೆ ಎಂದಿದ್ದರು.

ಮಂಗಳೂರು ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯದಿಂದ ಇಂಧನ ತಯಾರಿ ಘಟಕ ಸ್ಥಾಪನೆಗೆ ಈ ಹಿಂದೆ ಉದ್ದೇಶಿಸಲಾಗಿತ್ತು. ಇದಕ್ಕಾಗಿ ಪಚ್ಚನಾಡಿಯಲ್ಲಿ 100 ಕೋ.ರೂ. ವೆಚ್ಚದಲ್ಲಿ ಕಂಪೆನಿಯೊಂದರಿಂದ ಈ ಯೋಜನೆಯ ಪ್ರಸ್ತಾವನೆ ಸಿದ್ಧಗೊಂಡಿತ್ತಾದರೂ ಅನುಷ್ಠಾನವಾಗದೆ ಯೋಜನೆ ಕಡತದಲ್ಲೇ ಬಾಕಿಯಾಗಿತ್ತು. ಆದರೆ ಇದೀಗ ಇದೇ ಯೋಜನೆ ವಿಸ್ತಾರವಾಗಿ ರೂಪುಗೊಳ್ಳುವ ನಿರೀಕ್ಷೆಯಿದೆ.

Advertisement

ಕಸದಿಂದ ವಿದ್ಯುತ್‌; ಪ್ರಸ್ತಾವನೆ ಅನುಷ್ಠಾನ
ತ್ಯಾಜ್ಯದಿಂದ ವಿದ್ಯುತ್‌ ತಯಾರಿಸುವ ಬಗ್ಗೆ ಕರ್ನಾಟಕ ವಿದ್ಯುತ್‌ ನಿಗಮ ನಿ.ದಿಂದ ಈಗಾಗಲೇ ಪ್ರಸ್ತಾವನೆ ಬಂದಿದೆ. ಜಿಲ್ಲೆಯಲ್ಲಿ ಒಟ್ಟು ಲಭ್ಯವಾಗುವ ಒಣಕಸ, ಉಡುಪಿ ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಒಣಕಸವನ್ನು ಒಟ್ಟು ಸೇರಿಸಿ ವಿದ್ಯುತ್‌ ತಯಾರಿಸಲು ಉದ್ದೇಶಿಸಲಾಗಿದೆ. ಹೀಗಾಗಿ ಉಡುಪಿ ಜಿಲ್ಲಾಧಿಕಾರಿಗಳ ಜತೆಗೆ ಈ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
 - ಡಾ| ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿ, ದ.ಕ

ಶೀಘ್ರ ಚರ್ಚಿಸಿ ಕ್ರಮ
ಒಣಕಸದಿಂದ ವಿದ್ಯುತ್‌ ಉತ್ಪಾದಿಸುವ ಸಾಧ್ಯತೆಗಳ ಬಗ್ಗೆ ದ.ಕ. ಜಿಲ್ಲಾಡಳಿತದಿಂದ ಈಗಾಗಲೇ ಪತ್ರ ಬಂದಿದೆ. ಯಾವ ಪ್ರಮಾಣದಲ್ಲಿ ಒಣಕಸ ನೀಡಬಹುದು ಎಂಬುದರ ಬಗ್ಗೆ ಉಡುಪಿ ಜಿಲ್ಲೆಯ ವಿವಿಧ ನಗರಾಡಳಿತ ಸಂಸ್ಥೆಗಳ ಜತೆಗೆ ಶೀಘ್ರವೇ ಚರ್ಚಿಸಿ, ದ.ಕ. ಜಿಲ್ಲಾಧಿಕಾರಿಯವರಿಗೆ ತಿಳಿಸಲಾಗುವುದು. ಈ ಮೂಲಕ ವಿದ್ಯುತ್‌ ಉತ್ಪಾದಿಸುವ ಯೋಜನೆಯಲ್ಲಿ ಕೈ ಜೋಡಿಸಲಾಗುವುದು.
 - ಜಿ. ಜಗದೀಶ್‌, ಜಿಲ್ಲಾಧಿಕಾರಿ, ಉಡುಪಿ

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next