Advertisement

ಮನ್ನಾ ಆಗದ ವಿದ್ಯುತ್‌ ಬಿಲ್‌: ಹೆಚ್ಚಿದ ಆತಂಕ

04:02 PM Aug 26, 2021 | Team Udayavani |

ಸಕಲೇಶಪುರ: ಕೃಷಿಗೆ ಬಳಕೆ ಮಾಡುವ ವಿದ್ಯುತ್‌ ಬಿಲ್‌ ಮನ್ನವಾಗುವ ನಿರೀಕ್ಷೆಯಲ್ಲಿದ್ದ ತಾಲೂಕಿನ ಕಾಫಿ ಬೆಳೆಗಾರರು ಇದೀಗ ಸರ್ಕಾರ ಬಿಲ್‌ ಮನ್ನ ಮಾಡಲು ಮುಂದಾಗದ ಕಾರಣ ಐಪಿಸೆಟ್‌ಗಳಿಗಾಗಿ(ಕೃಷಿಗಾಗಿ ವಿದ್ಯುತ್‌ ಪೂರೈಕೆ) ಬಳಸಿದ್ದ ಐದು ಕೋಟಿ ರೂ. ವಿದ್ಯುತ್‌ ಬಿಲ್‌ ಬಾಕಿ ಕಟ್ಟಬೇಕಾದ ಪರಿಸ್ಥಿತಿ ತಾಲೂಕಿನಲ್ಲಿ ನಿರ್ಮಾಣವಾಗಿದೆ.

Advertisement

ಕಾಡಾನೆಗಳ ಹಾವಳಿ, ಅತಿವೃಷ್ಟಿಯಿಂದ ತತ್ತರಿಸಿರುವ ಕಾಫಿ ಬೆಳೆಗಾರರು ಇದೀಗ ಲಕ್ಷಾಂತರ ರೂ. ವಿದ್ಯುತ್‌ ಬಿಲ್‌ ಪಾವತಿ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ನಿಲುವಿನಿಂದ ಬೆಳೆಗಾರರು ಆತಂಕಕ್ಕೆ ಈಡಾಗಿದ್ದಾರೆ. ರಾಜ್ಯದಲ್ಲಿಕೃಷಿ ಚಟುವಟಿಕೆಗಳಿಗೆ 5ರಿಂದ 10 ಎಚ್‌.ಪಿ ಸಾಮರ್ಥ್ಯದ ಮೋಟಾರ್‌ ಗೆ ಸರ್ಕಾರ ಉಚಿತವಾಗಿ ವಿದ್ಯುತ್‌ ಒದಗಿಸುತ್ತಿದೆ. ಆದರೆ ಕಾಫಿ ಬೆಳೆಯನ್ನು ವಾಣಿಜ್ಯ ಬೆಳೆಯಾಗಿ ಪರಿಗಣಿಸಿರುವುದರಿಂದ ಕೃಷಿ ಇಲಾಖೆ ವ್ಯಾಪ್ತಿಯಿಂದ ಹೊರಗೆ ಇಡಲಾಗಿದೆ. ಆದರೂ ಉಚಿತ ವಿದ್ಯುತ್‌ ನೀಡಬಹುದೆಂಬ ಆಶಾ ಭಾವನೆಯನ್ನು ಬೆಳೆಗಾರರು ಹೊಂದಿದ್ದರು. ಆದರೆ ಇದೀಗ ಕಾಫಿ ಬೆಳೆಗಾರರ ಆಶಾ ಭಾವನೆಗೆ ಪೆಟ್ಟು ಬಿದ್ದಿದ್ದು ಚೆಸ್ಕಾಂ ಇಲಾಖೆ ಬಡ್ಡಿ ಸಮೇತ ವಿದ್ಯುತ್‌
ಬಿಲ್‌ ವಸೂಲಾತಿಗೆ ಮುಂದಾಗಿದೆ. ಜತೆಗೆ ಐಪಿ ಸೆಟ್‌ ಸಂಪರ್ಕ ಪಡೆದು ಬಳಕೆ ಮಾಡದವರೂ ಸಹ ಹಣ ಪಾವತಿ ಮಾಡಬೇಕಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

10 ಸಾವಿರದಿಂದ ಲಕ್ಷದವರೆಗೆ ಬಿಲ್‌ ಬಾಕಿ:
ತಾಲೂಕಿನ ಚೆಸ್ಕಾಂ ಇಲಾಖೆಗೆ ಸೇರಿದ ಸಕಲೇಶಪುರ, ಬಾಳ್ಳುಪೇಟೆ, ಯಸಳೂರು, ಹೆತ್ತೂರು ಹಾಗೂ ಹಾನುಬಾಳ್‌ ಸೇರಿದಂತೆ ಐದು ಉಪವಿಭಾಗಗಳ 898 ಬಳೆಕೆದಾರರು 10 ಎಚ್‌ಪಿ ಐಪಿಸೆಟ್‌ ಗಿಂತ ಕಡಿಮೆ ಐಪಿಸೆಟ್‌ ಬಳಕೆದಾರರು ಬಳಸಿದ್ದ 2.71 ಕೋಟಿ ರೂ. ಹಣವನ್ನು ಇಲಾಖೆಗೆ ಪಾವತಿಸಬೇಕಾಗಿದೆ. ಈ ಐದು ಉಪಕೇಂದ್ರಗಳಲ್ಲಿ ಹತ್ತು ಎಚ್‌ಪಿಗಿಂತ ಹೆಚ್ಚಿನ ಐಪಿ ಸೆಟ್‌ ಬಳಸಿರುವ 247 ಬಳಕೆದಾರರು 1.89 ರೂ. ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ಪ್ರತಿಯೊಬ್ಬ ಗ್ರಾಹಕ ಕನಿಷ್ಠ 10 ಸಾವಿರದಿಂದ 2 ಲಕ್ಷದವರೆಗೆ ಒಂದು ವರ್ಷದಿಂದ ಕಳೆದ 10 ವರ್ಷಗಳ ಬಿಲ್‌ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಸೆಸ್ಕ್ ತಿಳಿಸಿದೆ.

ಇದನ್ನೂ ಓದಿ:ಕೇರಳದಲ್ಲಿ ಸೋಂಕು ಏರಿಕೆ : ಇದು ಸರ್ಕಾರದ ಅಸಲಿ ಮುಖವನ್ನು ತೋರಿಸುತ್ತದೆ : ಥಾಮಸ್

ಅತಿಹೆಚ್ಚು ಬಾಕಿ ಉಳಿಸಿಕೊಂಡಿರುವ ಉಪಕೇಂದ್ರಗಳ ಪೈಕಿ ಹೆಚ್ಚಿನ ಸುಸ್ತಿದಾರರಿರುವ ಬಾಳ್ಳುಪೇಟೆ ಉಪಕೇಂದ್ರ ಮೊದಲ ಸ್ಥಾನದಲ್ಲಿದೆ.
ಇಲ್ಲಿನ 549 ಐಪಿಸೆಟ್‌ ಬಳಕೆದಾರರು 2 ಕೋಟಿ ಹನ್ನೊಂದು ಲಕ್ಷ ಹಣ ಪಾವತಿಸ ಬೇಕಿದ್ದರೆ, ಸುಸ್ಥಿದಾರರಲ್ಲಿ 2ನೇ ಸ್ಥಾನದಲ್ಲಿರುವ ಹಾನುಬಾಳ್‌ ಉಪಕೇಂದ್ರಕ್ಕೆ ಸೇರ್ಪಡೆಗೊಳ್ಳುವ 204 ಐಪಿಸೆಟ್‌ ಬಳಸುವ ವಿದ್ಯುತ್‌ ಬಳಕೆದಾರರು 1.35 ಕೋಟಿ ಹಣ ಪಾವತಿಸಬೇಕಿದೆ. ಸಕಲೇಶಪುರ ಉಪವಿಭಾಗದ 133 ಬಳಕೆದಾರರು 40 ಲಕ್ಷ ಪಾವತಿಸಬೇಕಿದೆ. ಯಸಳೂರು ಉಪಕೇಂದ್ರಕ್ಕೆ ಸೇರುವ 180 ಐಪಿಸೆಟ್‌ ಬಳಸುವ ಕಾಫಿ ಬೆಳೆಗಾರರು 57ಲಕ್ಷ ಹಣ ಪಾವತಿಸಬೇಕಿದೆ. ಹೆತ್ತೂರು ಉಪಕೇಂದ್ರದ 79 ಐಪಿಸೆಟ್‌ ಬಳಕೆದಾರರು 13 ಲಕ್ಷ ರೂ. ಪಾವತಿಸಬೇಕಿದೆ

Advertisement

ಶಾಸಕರಿಂದ ಇಂಧನ
ಸಚಿವರಿಗೆ ಪತ್ರ
ಸಕಲೇಶಪುರ, ಆಲೂರು, ಅರಕಲಗೂಡು, ಬೇಲೂರು ತಾಲೂಕಿನಕಾಫಿ ಬೆಳೆಗಾರರು ಮತ್ತು ಇತರೆ ರೈತರು ಹತ್ತಾರು ವರ್ಷಗಳಿಂದ ಅಕ್ರಮ- ಸಕ್ರಮ ಪಂಪ್‌ ಸೆಟ್‌ಗಳ ಮೂಲಕ ಕೃಷಿ ಮಾಡುತ್ತಿದ್ದು, ಅತಿವೃಷ್ಟಿ- ಅನಾವೃಷ್ಟಿಯಿಂದ ಆರ್ಥಿಕ ನಷ್ಟದಲ್ಲಿದ್ದಾರೆ. ಇತ್ತೀಚೆಗೆ ಸೆಸ್ಕ್ ಉನ್ನತಾಧಿಕಾರಿಗಳು ಬಾಕಿ ವಸೂಲಿಗೆ ಮುಂದಾಗಿದ್ದು ವಿದ್ಯುತ್‌ ನಿಲುಗಡೆ ಮಾಡುತ್ತಿದ್ದಾರೆ. ಬೆಳೆಗಾರರು10 ಎಚ್‌.ಪಿಗೆ ಉಚಿತ
ವಿದ್ಯುತ್‌ ನೀಡಬೇಕೆಂದು ಒತ್ತಾಯಿಸುತ್ತಿದ್ದು, ಬೆಳಗಾರರ ಪರವಾಗಿ ವಿನಾಯಿತಿ ನೀಡುವಂತೆ ಶಾಸಕ ಎಚ್‌.ಕೆ. ಕುಮಾರಸ್ವಾಮಿ ಇಂಧನ ಸಚಿವ ಸುನೀಲ್‌ಕುಮಾರ್‌ ಅವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.


ಬೆಳೆಗಾರರು ಸಕಾಲಕ್ಕೆ ವಿದ್ಯುತ್‌ ಬಿಲ್‌ ಪಾವತಿಸಿದರೆ ಇಲಾಖೆ ಉಳಿಯಲಿದೆ. ವಿದ್ಯುತ್‌ ಬಿಲ್‌ ಇದೆ ರೀತಿಯಲ್ಲಿ ಬಾಕಿ ಉಳಿದರೆ ಇಲಾಖೆ ಖಾಸಗಿಯವರ ಪಾಲಾಗಲಿದೆ. ಈ ಬಗ್ಗೆ ಬಳಕೆದಾರರೆ ಚಿಂತಿಸಬೇಕಿದೆ.
– ಭಾರತಿ, ಸಕಲೇಶಪುರ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್‌

ಸರ್ಕಾರ ಕೂಡಲೆ ತಾಲೂಕಿನ ಕಾಫಿ ಬೆಳೆಗಾರರು ಬಳಕೆ ಮಾಡಿರುವ ವಿದ್ಯುತ್‌ ಬಿಲ್‌ ಮನ್ನಾ ಮಾಡಲು ಕ್ರಮ ಕೈಗೊಳ್ಳಬೇಕು.
-ಮೋಹನ್‌ಕುಮಾರ್‌, ಕರ್ನಾಟಕ
ಬೆಳೆಗಾರರ ಒಕ್ಕೂಟದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next