ಕಡಬ: ಎರಡು ವಾರಗಳಿಂದ ಕುಡಿಯುವ ನೀರಿಲ್ಲದೆ ಐತ್ತೂರು ಗ್ರಾಮದ ಕಲ್ಲಾಜೆ ಕಾಲನಿಯ ನಿವಾಸಿಗಳು ಪ್ರತಿಭಟನೆ ಹಾಗೂ ಮತದಾನ ಬಹಿಷ್ಕಾರಕ್ಕೆ ಸಿದ್ಧರಾದ ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ, ಪಂಪ್ ದುರಸ್ತಿ ಮಾಡಿಸಿ, ಕೊಳವೆ ಬಾವಿಗೆ ಇಳಿಸಿದ್ದಾರೆ. ವಿದ್ಯುತ್ ಸಮಸ್ಯೆಯನ್ನು ಮೆಸ್ಕಾಂ ಸಿಬಂದಿ ಸರಿಪಡಿಸಿದ್ದಾರೆ. ಸಮಸ್ಯೆಗೆ ಇದು ತಾತ್ಕಾಲಿಕ ಪರಿಹಾರವಾಗಿದ್ದು, ಶಾಶ್ವತ ಪರಿಹಾರ ಒದಗಿಸುವಂತೆ ಕಾಲನಿ ನಿವಾಸಿಗಳು ಆಗ್ರಹಿಸಿದ್ದಾರೆ.
ಸುಮಾರು 50ಕ್ಕೂ ಹೆಚ್ಚು ಮನೆಗಳಿರುವ ಕಲ್ಲಾಜೆ ಕಾಲನಿಯಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ರಬ್ಬರ್ ವಿಭಾಗದ ವತಿಯಿಂದ ಹಾಗೂ ಐತ್ತೂರು ಗ್ರಾ.ಪಂ. ವತಿಯಿಂದ ಕೊರೆಸಲಾದ ಎರಡು ಕೊಳವೆ ಬಾವಿಗಳಿವೆ. ಆದರೂ ಎರಡು ವಾರಗಳಿಂದ ಇಲ್ಲಿನವರಿಗೆ ಕುಡಿಯುವುದಕ್ಕೂ ನೀರಿಲ್ಲದಂತಾಗಿತ್ತು. ಪಂಚಾಯತ್ ಕೊಳವೆ ಬಾವಿಯ ಪಂಪ್ ಕೆಟ್ಟು ಹೋಗಿದ್ದು, ರಿಪೇರಿಗೆ ಒಯ್ದು ಹಲವು ದಿನಗಳಾಗಿದ್ದವು. ಮತ್ತೆ ಅಳವಡಿಸಿರಲಿಲ್ಲ.
ನಿಗಮದ ಕೊಳವೆಬಾವಿಯ ಪಂಪ್ ಕೂಡ ಹೈ ವೋಲ್ಟೇಜ್ ನಿಂದಾಗಿ ಕೆಟ್ಟು ಹೋಗಿದ್ದು, ಅದನ್ನು ಸರಿಪಡಿಸುವ ಗೋಜಿಗೆ ಯಾರೂ ಹೋಗಿರಲಿಲ್ಲ. ಕಾಲನಿಯ ನಿವಾಸಿಗಳು ತೊಟ್ಟು ನೀರಿಗೂ ಪರದಾಡುವಂತಾಗಿತ್ತು. ಅನ್ಯ ಮಾರ್ಗವಿಲ್ಲದೆ ಪಕ್ಕದ ಗುಡ್ಡದಲ್ಲಿರುವ ಪಾಚಿಗಟ್ಟಿದ ಗುಂಡಿಯಲ್ಲಿ ಶೇಖರವಾಗಿರುವ ಕಲುಷಿತ ನೀರನ್ನೇ ಉಪಯೋಗಿಸುತ್ತಿದ್ದರು. ಸ್ಥಳೀಯ ಅಂಗನವಾಡಿಗೂ ನೀರಿಲ್ಲದೆ, ಪೌಷ್ಟಿಕ ಆಹಾರ ತಯಾರಿಗೆ ಸಮಸ್ಯೆ ಎದುರಾಗಿತ್ತು. ನಾಲ್ಕು ದಿನಗಳಿಂದ ವಿದ್ಯುತ್ ಕೈಕೊಟ್ಟಿದ್ದರಿಂದ ನಿವಾಸಿಗಳು ಕತ್ತಲಲ್ಲಿ ಕಾಲ ಕಳೆಯುವ ಸ್ಥಿತಿಯೂ ನಿರ್ಮಾಣವಾಗಿತ್ತು.
ಇದರಿಂದ ಬೇಸತ್ತ ಸ್ಥಳೀಯರು ಮಂಗಳವಾರ ಸಭೆ ಸೇರಿ, ಪ್ರತಿಭಟನೆಗೆ ಮುಂದಾಗಿದ್ದರು. ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದಿದ್ದರೆ ಶಾಶ್ವತ ಪರಿಹಾರ ನೀಡದಿದ್ದರೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ತಿಳಿಸಿದ್ದರು. ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಐತ್ತೂರು ಗ್ರಾ.ಪಂ. ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರಾಡ್ರಿಗಸ್ ಅವರು ಸಂಜೆ ವೇಳೆಗೆ ಪಂಪ್ ದುರಸ್ತಿ ಮಾಡಿಸಿದ್ದಾರೆ. ಮೆಸ್ಕಾಂ ಸಿಬಂದಿಯೂ ಆಗಮಿಸಿ, ವಿದ್ಯುತ್ ಸಮಸ್ಯೆ ಪರಿಹರಿಸಿದ್ದಾರೆ.
ಹೈವೋಲ್ಟೇಜ್: ಹಾನಿ
ಐತ್ತೂರು ಪರಿಸರದಲ್ಲಿ ಹೈ ವೋಲ್ಟೇಜ್ ನಿಂದಾಗಿ ವಿದ್ಯುತ್ ಚಾಲಿತ ಗೃಹೋಪಯೋಗಿ ವಸ್ತುಗಳು ಹಾನಿಗೀಡಾಗಿವೆ. ಹೈವೋಲ್ಟೇಜ್ ಸಮಸ್ಯೆಯಿಂದಾಗಿ ಕಲ್ಲಾಜೆ ಕಾಲನಿಯಲ್ಲಿನ ಹಲವು ಟಿವಿ, ಫ್ರಿಜ್, ಎಲ್‌ಇಡಿ ಬಲ್ಬ್ ಗಳು ಸಹಿತ ಹಲವು ವಿದ್ಯುತ್ ಉಪಕರಣಗಳು ಹಾನಿಗೀಡಾಗಿವೆ. ಮಂಗಳವಾರ ವಿದ್ಯುತ್ ಲೈನ್‌ನಲ್ಲಿ ಹೈವೋಲ್ಟೇಜ್ ಬಂದ ಪರಿಣಾಮ ಐತ್ತೂರು ಗ್ರಾ.ಪಂ.ನ ಇನ್‌ವರ್ಟರ್, ಪ್ರಿಂಟರ್, ಇಂಟರ್ನೆಟ್ ಮಾಡೆಮ್‌ಗಳೂ ಹಾನಿಗೀಡಾಗಿವೆ.