Advertisement
ಬಿಜೈಯಲ್ಲಿರುವ ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಮೆಸ್ಕಾಂ)ಯ ಮುಖ್ಯ ಕಚೇರಿ ಎದುರೇ ಶಾಕಿಂಗ್ ಸ್ಪಾಟ್ ಇದ್ದು, ವಿದ್ಯುತ್ ಸರಬರಾಜು ಪೆಟ್ಟಿಗೆಯೊಂದು ರಸ್ತೆ ವಿಭಜಕದ ಮೇಲೆಯೇ ತೆರೆದುಕೊಂಡು ವೈಯರ್‌ಗಳು ರಸ್ತೆಗೆ ಜೋತು ಬಿದ್ದ ಸ್ಥಿತಿಯಲ್ಲಿವೆ.
Related Articles
ನಗರದ ಪ್ರಮುಖ ಬಸ್ ತಂಗುದಾಣವಾದ ಸ್ಟೇಟ್‌ಬ್ಯಾಂಕ್‌ನಿಂದ ದಿನಂಪ್ರತಿ ನೂರಾರು ಬಸ್‌ಗಳು ಹೊರಡುತ್ತಿದ್ದು, ಸಾವಿರಾರು ಮಂದಿ ಪ್ರಯಾಣಿಕರು ಇಲ್ಲೇ ಬಸ್‌ಗೆ ಕಾಯುತ್ತಾರೆ. ಆದರೆ ಸ್ಟೇಟ್‌ಬ್ಯಾಂಕ್ ಖಾಸಗಿ ಬಸ್ ನಿಲ್ದಾಣದ ಮುಂಭಾಗವೇ ವಿದ್ಯುತ್ ತಂತಿಗಳು ಅಪಾಯಕ್ಕೆ ಆಹ್ವಾನ ನೀಡುವಂತಿದೆ.
Advertisement
ಇಲ್ಲಿರುವ ವಿದ್ಯುತ್ ಸರಬರಾಜು ಬಾಕ್ಸ್ ಬಾಗಿಲು ತೆರೆದಿದ್ದು, ವಯರ್‌ಗಳು ಕಾಣಿಸುತ್ತಿದೆ. ಇದರ ಪಕ್ಕದಲ್ಲೇ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಬೆಂಚು ಕೂಡ ಇದ್ದು, ಸಂಬಂಧಪಟ್ಟ ಇಲಾಖೆ ಮುಂಜಾಗೃತಾ ಕ್ರಮ ವಹಿಸಿಕೊಂಡಿಲ್ಲ. ಬಸ್ ನಿಲ್ದಾಣದಲ್ಲಿ ಕಬ್ಬಿಣದ ಕಂಬ ಅಳವಡಿಸಲಾಗಿದ್ದು, ಕಂಬದ ಮೇಲೆ ವಿದ್ಯುತ್ ಪ್ಯೂಸ್ ಇದೆ. ಇದರ ವಯರ್‌ಗಳು ಕೂಡ ಅಪಾಯ ಸೂಚಿಸುತ್ತಿದೆ.
ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಒಳಗೆ ಯಾವುದೇ ಅಪಾಯದ ಮುನ್ಸೂಚನೆ ಇಲ್ಲವಾದರೂ ಹೊರಗಡೆ ಇರುವ ಗಾಡಿ ಪಾರ್ಕಿಂಗ್ ಜಾಗದಲ್ಲಿ ದಾರಿ ದೀಪ ಅಳವಡಿಸಲಾಗಿದೆ. ಈ ಕಂಬದ ಕೆಳಗಿನ ವಿದ್ಯುತ್ ಬಾಕ್ಸ್ ತೆರೆದಿಟ್ಟಿದ್ದು, ಸ್ಕಿನ್ ತೆಗೆದ ವಯರ್ ಗಳು ಕಾಣಿಸುತ್ತಿವೆ.
ಕುದ್ರೋಳಿ ಬಸ್ ನಿಲ್ದಾಣ, ಲಾಲ್‌ಬಾಗ್, ಆರ್‌ಟಿಒ, ಬೆಸೆಂಟ್ ಮುಂಭಾಗದ ಬಸ್ ನಿಲ್ದಾಣ, ಎಂ.ಜಿ. ರಸ್ತೆ ಸಹಿತ ಇನ್ನಿತರ ಬಸ್ ನಿಲ್ದಾಣಗಳ ಬಳಿ ಟ್ರಾನ್ಸ್‌ಫಾರ್ಮರ್, ವಿದ್ಯುತ್ ಸರಬರಾಜು ಪೆಟ್ಟಿಗೆ ಇದ್ದು, ಕೆಲವೊಂದು ಪ್ರದೇಶಗಳಲ್ಲಿ ಅಪಾಯಕ್ಕೆ ಮುನ್ಸೂಚನೆ ನೀಡುವಂತಿದೆ.
ಮುರಿದ ಕಂಬದಲ್ಲಿ ವಿದ್ಯುತ್ ಶಾಕ್!ನಗರದ ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣದ ಎದುರಿರುವ ರಸ್ತೆ (ರಾವ್ ಆ್ಯಂಡ್ ರಾವ್ ವೃತ್ತ ಬಳಿ) ವಿಭಜಕದಲ್ಲಿ ಮುರಿದ ಕಂಬವಿದ್ದು, ಈ ಕಂಬದ ಕೆಳಗೆ ವಿದ್ಯುತ್ ವಯರ್‌ಗಳನ್ನು ಹಾಗೇ ಬಿಡಲಾಗಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ರಸ್ತೆ ದಾಟಲು ಸಾರ್ವಜನಿಕರು ಇದೇ ವಿಭಜಕವನ್ನು ಉಪಯೋಗಿಸುತ್ತಾರೆ. ಕನಿಷ್ಠ ವಯರ್‌ಗೆ ಬಾಕ್ಸ್ ಅಳವಡಿಸಿದರೆ ಮುಂದಾಗುವ ಅಪಾಯ ತಪ್ಪಿಸಬಹುದು. ಖಾಸಗಿ ಸಿಟಿ ಬಸ್ ನಿಲಾಣದಲ್ಲೂ ಅವ್ಯವಸ್ಥೆ
ನಗರದ ಸ್ಟೇಟ್‌ಬ್ಯಾಂಕ್ ಖಾಸಗಿ ಸಿಟಿ ಬಸ್ ನಿಲ್ದಾಣಕ್ಕೆ ದಿನಂಪ್ರತಿ 300ಕ್ಕೂ ಹೆಚ್ಚು ಬಸ್‌ಗಳು ಬರುತ್ತದೆ. ಬೆಳಗ್ಗೆಯಿಂದ ರಾತ್ರಿವರೆಗೆ ಸಾವಿರಾರು ಪ್ರಯಾಣಿಕರು ಆಗಮಿಸುತ್ತಾರೆ. ಆದರೆ ಈ ಪ್ರದೇಶಗಳಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿದೆ. ವಿದ್ಯುತ್ ಕಂಬಗಳಲ್ಲಿರುವ ಪ್ಯೂಸ್‌ಗಳಿಗೆ ಪೆಟ್ಟಿಗೆ ಅಳವಡಿಸದೆ ಹಾಗೇ ಬಿಡಲಾಗಿದ್ದು, ಯಾವುದೇ ಮುಂಜಾಗೃತಾ ಕ್ರಮ ಕೈಗೊಂಡಿಲ್ಲ. ಕಂಬಗಳಲ್ಲಿ ವಿದ್ಯುತ್ ವಯರ್‌ಗಳು ಜೋತಾಡುತ್ತಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ.. ನವೀನ್ ಭಟ್ ಇಳಂತಿಲ