ಮೂಡುಬಿದಿರೆ : ಪಡುಬಿದ್ರಿ ಯುಪಿಸಿಎಲ್‌ನಿಂದ ಕೇರಳಕ್ಕೆ ವಿದ್ಯುತ್ ಸರಬರಾಜಿಗಾಗಿ ಲೈನ್ ಎಳೆಯುವ ಉದ್ದೇಶದಿಂದ ಸ್ಥಳೀಯ ರೈತರಿಗೆ ತಪ್ಪು ಮಾಹಿತಿ ನೀಡಿ ಸರ್ವೇ ನಡೆಸಲು ಯತ್ನಿಸಿದ ಘಟನೆ ಬುಧವಾರ ನಿಡ್ಡೋಡಿ ಕೊಲತ್ತಾರು ಪದವು ಬಳಿ ನಡೆದಿದೆ.
ತೆಂಕಮಿಜಾರು ಗ್ರಾಮ ವ್ಯಾಪ್ತಿ ಯಲ್ಲಿ ರೈತರಿಂದ ಬಲಾತ್ಕಾರವಾಗಿ ಸಹಿ ಪಡೆದು ಸರ್ವೇ ನಡೆಸಲು ತಂಡ ಆಗಮಿಸಿತ್ತು. ಸ್ಥಳೀಯರು ಹಾಗೂ ಮಾತೃಭೂಮಿ ಸಂರಕ್ಷಣ ಸಮಿತಿಯ ಅಧ್ಯಕ್ಷ ಅಲ್ಫೋನ್ಸ್ ಡಿ’ಸೋಜಾ ಮೊದಲಾದವರು ಸ್ಥಳಕ್ಕಾಗಮಿಸಿ ಸರ್ವೇ ನಡೆಸದಂತೆ ತಡೆದರು.
ಈ ಸಂದರ್ಭ ಮಾತಿನ ಚಕಮಕಿ ನಡೆಯಿತು. ತೆಂಕಮಿಜಾರು ಗ್ರಾಮಕರಣಿಕರ ನೆರವು ಪಡೆದು ಸ್ಥಳೀಯ ರೈತರಿಗೆ ತಪ್ಪು ಮಾಹಿತಿ ನೀಡಲಾಗಿದೆ ಎನ್ನಲಾಗುತ್ತಿದ್ದು, ವಾಸ್ತವ ಅರಿತ ಸ್ಥಳೀಯರು ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ತಿಳಿಸಿದರು.
ಕಲ್ಲಮುಂಡ್ಕೂರು ಗ್ರಾ.ಪಂ. ಅಧ್ಯಕ್ಷ ಕೇಶವ ಪೂಜಾರಿ, ರಾಮ ಗೌಡ, ಜನಾರ್ದನ ಗೌಡ, ಮಾಧವ ಗೌಡ ಸೇರಿದಂತೆ ನೂರಾರು ಮಂದಿ ಸ್ಥಳೀಯರು ಜಮಾಯಿಸಿದ್ದರು.
ಕೆಲವು ದಿನಗಳ ಹಿಂದೆ ಇದೇ ತಂಡ ಆಗಮಿಸಿ ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ಹಿಮ್ಮೆಟ್ಟಿದ್ದು ಪ್ರಸ್ತುತ ನಾಲ್ಕನೇ ಪ್ರಯತ್ನವಾಗಿದೆ ಎಂದು ಅಲ್ಫೋನ್ಸ್ ತಿಳಿದಿದ್ದಾರೆ.
ಇದನ್ನೂ ಓದಿ : ಮಂಗಳೂರು ವಿಮಾನ ನಿಲ್ದಾಣ: ಬಳಕೆದಾರರ ಶುಲ್ಕ ಏರಿಕೆಗೆ ನಿಯಂತ್ರಣ ಪ್ರಾಧಿಕಾರ ತಡೆ