Advertisement

ಮಹಾನಗರಗಳಲ್ಲಿ ಎಲೆಕ್ಟ್ರಿಕ್‌ ಬಸ್‌ ಆರಂಭಕ್ಕೆ ಯತ್ನ’

06:50 AM Dec 01, 2017 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಎಲ್ಲ ಮಹಾನಗರಗಳಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್‌ ಬಸ್‌ಗಳ ಸಂಚಾರ ಆರಂಭಿಸುವ ಕುರಿತು ರಾಜ್ಯ ಸರ್ಕಾರ ಗಂಭೀರ ಪ್ರಯತ್ನ ನಡೆಸಿದೆ ಎಂದು ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅನೇಕ ಕಂಪನಿಗಳು ಎಲೆಕ್ಟ್ರಿಕ್‌ ಬಸ್‌ಗಳ ಉತ್ಪಾದನೆಗೆ ಆಸಕ್ತಿ ತೋರಿವೆ. ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಎಲೆಕ್ಟ್ರಿಕ್‌ ವೆಹಿಕಲ್‌ ನೀತಿಯನ್ನು ಜಾರಿಗೆ ತಂದಿದೆ.

ಬೆಂಗಳೂರಿನಲ್ಲಿ ಎಲೆಕ್ಟ್ರಿಕ್‌ ವೆಹಿಕಲ್‌ ಸಂಚಾರ ಆರಂಭಿಸಲು ನೀಲನಕ್ಷೆ ಸಿದಟಛಿಪಡಿಸುವ ಕುರಿತು ಶುಕ್ರವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಪರಿಸರಸ್ನೇಹಿ ಬಸ್‌ಗಳನ್ನು ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಆರಂಭಿಸಿ ನಂತರ ಧಾರವಾಡ ಹಾಗೂ ಬೆಳಗಾವಿಯಲ್ಲಿ ಆರಂಭಿಸಲಾಗುವುದು.

ಹೈಬ್ರಿಡ್‌ ವಾಹನಗಳಿಗೆ ಜಿಎಸ್‌ಟಿ ಪ್ರಮಾಣ ಹೆಚ್ಚಾಗಿದ್ದು, ಕೇಂದ್ರ ಸರ್ಕಾರ ಅದನ್ನು ಕಡಿಮೆ ಮಾಡಬೇಕು. 2030ರ ಹೊತ್ತಿಗೆ ಪೆಟ್ರೋಲ್‌ ಮತ್ತು ಡೀಸೆಲ್‌ಗೆ ಪರ್ಯಾಯ ಇಂಧನ ಬಳಕೆಯಾಗಬೇಕು ಎಂದು ಹೇಳಿದರು.

Advertisement

ಭವಿಷ್ಯದಲ್ಲಿ ಅನುಕೂಲ: ಕೇಂದ್ರ ಸರ್ಕಾರ ಜಿಎಸ್‌ಟಿ ಜಾರಿಗೊಳಿಸಿದ ದಿನದಿಂದ ರಾಜ್ಯದ ಕೈಗಾರಿಕಾ ವಲಯದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಇದೊಂದು ಗೇಮ್‌ ಚೇಂಜಿಂಗ್‌ ನೀತಿ. ಮುಂದಿನ ದಿನಗಳಲ್ಲಿ ಸಾಕಷ್ಟು
ಅನುಕೂಲವಾಗಲಿದೆ ಎಂದು ಹೇಳಿದರು.

ಜಿಎಸ್‌ಟಿ ವ್ಯವಸ್ಥೆಯನ್ನು ಆರಂಭದಲ್ಲಿಯೇ ಸ್ವಾಗತ ಮಾಡಿದ್ದೇವೆ. ಆದರೆ, ಅದರ ಅನುಷ್ಠಾನದಲ್ಲಿ ಗೊಂದಲಗಳಿರುವ ಕಾರಣ ಸಾಕಷ್ಟು ಸಮಸ್ಯೆಯಾಗಿದೆ. ಏಕರೂಪದ ತೆರಿಗೆ ಜಾರಿಯಾಗುವುದರಿಂದ ರಾಜ್ಯಗಳ ಗಡಿ ಭಾಗದಲ್ಲಿ ಚೆಕ್‌ಪೋಸ್ಟ್‌ಗಳು ಇರುವುದಿಲ್ಲ ಎಂದು ಹೇಳಿದರು.

ಸಾರಿಗೆ, ಅರಣ್ಯ ಚೆಕ್‌ಪೋಸ್ಟ್‌: ಆದರೆ, ರಾಜ್ಯದಲ್ಲಿ ಇನ್ನೂ ಚೆಕ್‌ಪೋಸ್ಟ್‌ಗಳು ಕಾರ್ಯ ನಿರ್ವಹಿಸುತ್ತಿವೆಯಲ್ಲ ಎಂಬ ಪ್ರಶ್ನೆಗೆ, ವಾಣಿಜ್ಯ ತೆರಿಗೆ ಇಲಾಖೆಯ ಚೆಕ್‌ಪೋಸ್ಟ್‌ಗಳನ್ನು ತೆರವುಗೊಳಿಸಲಾಗಿದೆ. ಸಾರಿಗೆ ಮತ್ತು ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದರು. ಪ್ರತಿಪಕ್ಷಗಳ ನಾಯಕರು ಮಾಡುವ ಎಲ್ಲ ಆರೋಪಗಳು ಸತ್ಯವಾಗಿರುವುದಿಲ್ಲ ಎಂದು ಹೇಳಿದರು.

ನವೆಂಬರ್‌ 23, 24ರಂದು ನಡೆದ ಹೂಡಿಕೆದಾರರ ಶೃಂಗಸಭೆ ಯಶಸ್ವಿಯಾಗಿದೆ. 20 ಸಾವಿರ ಕೋಟಿ ರೂ.ಗಿಂತ ಅಧಿಕ ಬಂಡವಾಳ ಹೂಡಿಕೆಗೆ ಒಪ್ಪಂದವಾಗಿದೆ. ಸುಮಾರು 86,750 ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next