Advertisement

ಪಿಲಿಕುಳಕ್ಕೆ ಎಲೆಕ್ಟ್ರಿಕ್‌ ಬಸ್‌ :ಪ್ರವಾಸಿಗರು ಆಯಾಸ ಪಡಬೇಕಿಲ್ಲ !

03:45 AM Jul 06, 2017 | Harsha Rao |

ಮಹಾನಗರ: ಸುಮಾರು 400 ಎಕ್ರೆ ಪ್ರದೇಶದಲ್ಲಿರುವ ಪಿಲಿಕುಳ ನಿಸರ್ಗಧಾಮದೊಳಗೆ ಇನ್ನು ನೀವು ನಡೆದೂ ನಡೆದು ಸುಸ್ತಾಗಬೇಕಿಲ್ಲ. ಅದಕ್ಕೆ ಬಸ್‌ಗಳು ನೆರವಾಗಲಿವೆ.

Advertisement

ನಿಸರ್ಗಧಾಮದೊಳಗಿನ ಎಲ್ಲ ಸ್ಥಳಗಳಿಗೂ ತೆರಳಲು ಪ್ರವಾಸಿಗರಿಗೆ ಅನುಕೂಲವಾಗುವಂತೆ ಶಬ್ದ ಹಾಗೂ ಮಾಲಿನ್ಯ ರಹಿತ  ವಾಹನಗಳ ಸೌಲಭ್ಯ ಕಲ್ಪಿಸಲು ಚಿಂತನೆ ನಡೆದಿದೆ.

ನಿಸರ್ಗಧಾಮಕ್ಕೆ ತೆರಳುವ‌ ಮುಖ್ಯ ರಸ್ತೆಯಿಂದ ಇಲ್ಲಿನ ವಿವಿಧ ವಿಭಾಗಗಳಿಗೆ ತೆರಳಲಿರುವ ಈ ಬಸ್‌ ಪ್ರಾಣಿ ಸಂಗ್ರಹಾಲಯದ  ಒಳಗೂ ಹೋಗಲಿದೆ. 

ಈವರೆಗೆ ಪ್ರಾಣಿ ಸಂಗ್ರಹಾಲಯದ  ಒಳಗೆ ಬಗ್ಗೀಸ್‌ಗಳನ್ನು ಮಾತ್ರ ಬಳಸಲಾಗುತ್ತಿತ್ತು. ಕೆಲವೇ ದಿನಗಳಲ್ಲಿ ವಾಹನದಲ್ಲೇ ಕುಳಿತು ಪಿಲಿಕುಳವನ್ನು ವೀಕ್ಷಿಸಬಹುದು. 

ಮುಖ್ಯ ರಸ್ತೆಯಿಂದ ಟಿಕೆಟ್‌ ತೆಗೆದುಕೊಂಡು ಈ ವಾಹನದಲ್ಲಿ ಕುಳಿತರೆ ವಿಜ್ಞಾನ ಕೇಂದ್ರ,  ಪ್ರಾಣಿ ಸಂಗ್ರಹಾಲಯ, ಗುತ್ತು ಮನೆ, ಬೋಟಿಂಗ್‌, ವಾಟರ್‌ ಪಾರ್ಕ್‌, ಆಯುರ್ವೇದ ಥೆರಪಿ ಮೊದಲಾದೆಡೆ ತಿರುಗಿ ವಾಪಸಾಗಬಹುದು.

Advertisement

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ
ಪಿಲಿಕುಳ ನಿಸರ್ಗಧಾಮ ಅಭಿವೃದ್ಧಿ ಬಗ್ಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ನಿಸರ್ಗಧಾಮದ ದ್ವಾರದ ಬಳಿಯ ಮುಖ್ಯ ರಸ್ತೆಯಿಂದ ಧಾಮದವರೆಗೆ ರಿಕ್ಷಾ ಗಳಿಗ ಸಾಕಷ್ಟು  ಹಣ ತೆರುವುದನ್ನು ತಪ್ಪಿಸಲು ಹಾಗೂ ಪ್ರವಾಸಿಗರಿಗೆ ಎಲ್ಲ ಭಾಗಗಳನ್ನು ವೀಕ್ಷಿಸಲು ಅನುಕೂಲ ವಾಗಲು ಈ ಯೋಜನೆ ರೂಪಿಸಲು ಜಿಲ್ಲಾಧಿಕಾರಿ ಸೂಚಿಸಿದ್ದರು. ಆ ಪ್ರಕಾರ ಮುಖ್ಯ ರಸ್ತೆಯಿಂದ ಎಲೆಕ್ಟ್ರಿಕಲ್‌ ಅಥವಾ ಬ್ಯಾಟರಿ ಚಾಲಿತ ಮಿನಿ ಬಸ್‌ ಧಾಮದೊಳಗೆ ತಿರುಗಲಿದೆ.

ರಸ್ತೆ ಅಗಲಕ್ಕೆ ಸರ್ವೇ
ಪ್ರಾಣಿ ಸಂಗ್ರಹಾಲಯ ಹಾಗೂ ಗುತ್ತು ಮನೆ ಸಹಿತ ಎಲ್ಲ ಕಡೆಗಳಲ್ಲೂ ರಸ್ತೆಯನ್ನು ಅಗಲಗೊಳಿಸುವ ನಿಟ್ಟಿನಲ್ಲಿ ಸರ್ವೇ ನಡೆಯುತ್ತಿದೆ. 

ಯೋಜನೆ ರೂಪಿಸಿದ ಬಳಿಕ  ಅನುದಾನ ಬಿಡುಗಡೆಯ ಬಗ್ಗೆ  ಚಿಂತನೆ ನಡೆಸಲಾಗುವುದು ಎಂದು ಅಧಿಕಾರಿಗಳು ಉದಯವಾಣಿ ಸುದಿನಕ್ಕೆ ತಿಳಿಸಿದ್ದಾರೆ. 

ಎಲ್ಲವೂ ಅಂದುಕೊಂಡಂತೆ ನಡೆದರೆ ಮಳೆಗಾಲದ ಬಳಿಕ ಈ ಬಸ್‌ ಸೇವೆ ಆರಂಭವಾಗಲಿದೆ.

ಹಿಂದೆ ಇದ್ದ ಮಿನಿಬಸ್‌ ಸ್ಟಾಪ್‌
ಮುಖ್ಯರಸ್ತೆಯಿಂದ ಪಿಲಿಕುಳ ಒಳಕ್ಕೆ ಚಲಿಸಲು ಖಾಸಗಿ ಸಹಭಾಗಿತ್ವದಲ್ಲಿ ನಿಯೋಜನೆಗೊಂಡಿದ್ದ ಮಿನಿಬಸ್‌ ಮಳೆಗಾಲದ ಹಿನ್ನೆಲೆಯಲ್ಲಿ ಪ್ರವಾಸಿಗರ ಕೊರತೆಯಿಂದ ನಿಂತಿದೆ. ಈ ವಾಹನ 20 ರೂ. ದರದಲ್ಲಿ ಮುಖ್ಯರಸ್ತೆಯಿಂದ ಎಲ್ಲ ಭಾಗಗಳಿಗೂ ಪ್ರವಾಸಿಗರನ್ನು ಕೊಂಡೊಯ್ಯುತ್ತಿತ್ತು.

ಬಗ್ಗೀಸ್‌ ಮಾತ್ರ ಸಂಚಾರ
ಪ್ರಸ್ತುತ ಮೃಗಾಲಯದ ಒಳಭಾಗದಲ್ಲಿ ಮೂರು ಚಕ್ರದ ಏಳು ಬಗ್ಗೀಸ್‌ಗಳು ಮಾತ್ರ ಸಂಚರಿಸುತ್ತಿವೆ. ಇದರಲ್ಲಿ ಒಂದು ಬಾರಿಗೆ ಆರು ಜನರು ಮಾತ್ರ ತೆರಳಬಹುದು. ಶೈಕ್ಷಣಿಕ ಪ್ರವಾಸಕ್ಕೆ ಬರುತ್ತಿದ್ದ ಮಕ್ಕಳು ನಡೆದೇ ಹೋಗಬೇಕಿತ್ತು. ಈ ಸಮಸ್ಯೆಗೆ ಪರಿಹಾರಕ್ಕಾಗಿಯೇ ಒಂದು ಬಾರಿ 25 ಜನರಿಗೆ ತೆರಳಬಹುದಾದ ಎಲೆಕ್ಟ್ರಿಕಲ್‌ ಅಥವಾ ಬ್ಯಾಟರಿ ಚಾಲಿತ ಬಸ್‌  ಬರಲಿದೆ.

ಶೀಘ್ರದಲ್ಲೇ  ಯೋಜನೆ ಜಾರಿ
ಪಿಲಿಕುಳದಲ್ಲಿ ಬೋಟಿಂಗ್‌, ಗುತ್ತಿನ ಮನೆ ಮಾಡಲಾಗಿದೆ. ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರಿಗೆ ಈ ಬಗ್ಗೆ ಸೂಕ್ತ ಮಾಹಿತಿ ಇರುವುದಿಲ್ಲ.  ಬಸ್‌ ಸೌಲಭ್ಯ ಕಲ್ಪಿಸಿದರೆ ಈ ಎಲ್ಲ ಭಾಗಗಳಿಗೆ ತೆರಳಬಹುದು ಎಂಬ ನಿಟ್ಟಿನಲ್ಲಿ ಈ  ಬಗ್ಗೆ ಚಿಂತನೆ ನಡೆಸಲಾಗಿದೆ. ಈಗಾಗಲೇ ಕಿರಿದಾಗಿರುವ ಕಡೆ ರಸ್ತೆ ಅಗಲೀಕರಣ ಮಾಡಲಾಗುತ್ತಿದೆ. ಅನುದಾನಗಳ ಬಗ್ಗೆ ಚರ್ಚೆ ಆಗಬೇಕಷ್ಟೆ. ಮಳೆಗಾಲ ಮುಗಿದೊಡನೆ ಎಲೆಕ್ಟ್ರಿಕಲ್‌ 
ಬಸ್‌ಗೆ ಚಾಲನೆ ದೊರೆಯಲಿದೆ.
– ಜಯಪ್ರಕಾಶ್‌ ಭಂಡಾರಿ ಜೈವಿಕ ಉದ್ಯಾನವನದ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next