Advertisement

ದ.ಕ.: ಮತದಾರರ ಪಟ್ಟಿಯಿಂದ  21,537 ಮೃತರ ಹೆಸರು ರದ್ದು

11:29 PM Dec 08, 2022 | Team Udayavani |

ಮಂಗಳೂರು: ಜಿಲ್ಲೆಯಲ್ಲಿ ಕಳೆದ 10 ವರ್ಷಗಳಿಂದ ಮೃತಪಟ್ಟವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯುವ ಕಾರ್ಯ ನಡೆದಿರಲಿಲ್ಲ, ಅದನ್ನು ಈ ಬಾರಿ ನಡೆಸಲಾಗುತ್ತಿದೆ. ಈಗಾಗಲೇ 21,537 ಮಂದಿ ಮೃತರ ಹೆಸರನ್ನು ತೆರವು ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

2022ರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅಂತಿಮ ಮತದಾರರ ಪಟ್ಟಿಯ ಅನಂತರ 29,410 ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದ್ದರೆ, ಆ ಅವಧಿಯಲ್ಲಿ 73,783 ಹೆಸರುಗಳನ್ನು ತೆಗೆದುಹಾಕಲಾಗಿದೆ. ಇದರಲ್ಲಿ 21,537 ಹೆಸರುಗಳನ್ನು ಮರಣ ಹೊಂದಿದ ಕಾರಣಕ್ಕೆ, 30580 ಮಂದಿಯ ಹೆಸರನ್ನು ಅವರು ಬೇರೆಡೆಗೆ ಸ್ಥಳಾಂತರಗೊಂಡಿರುವ ಕಾರಣಕ್ಕೆ ಮತ್ತು 21,666 ಹೆಸರುಗಳನ್ನು ಅವರ ಹೆಸರು ಅಥವಾ ಫೋಟೋ ಒಂದೇ ರೀತಿ ಇದ್ದ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ ಎಂದರು.

ಮರಣ ಪ್ರಮಾಣ ಪತ್ರ ದಾಖಲೆಗಳನ್ನು ನೀಡದ ಕಾರಣ ಮತದಾರರ ಪಟ್ಟಿಯಲ್ಲಿ ಉಳಿದಿದ್ದ ಹೆಸರುಗಳನ್ನು ತೆಗೆದು ಹಾಕುವಂತೆ ರಾಜಕೀಯ ಪಕ್ಷಗಳ ಮೂಲಕವೂ ಒತ್ತಾಯ ಬಂದಿತ್ತು. ಅದರಂತೆ ನಗರ ಮಟ್ಟದಲ್ಲಿ ಹಾಗೂ ಗ್ರಾಮಾಂತರದಲ್ಲಿ ಮೃತಪಟ್ಟವರ ಕುಟುಂಬದವರು ಪ್ರಮಾಣ ಪತ್ರ ನೀಡದಿದ್ದರೆ, ಅಧಿಕಾರಿಗಳೇ ಡೌನ್‌ಲೋಡ್‌ ಮಾಡಿಕೊಂಡು ಅದನ್ನು ಅಟ್ಯಾಚ್‌ ಮಾಡಿಕೊಂಡು ಹೆಸರು ರದ್ದುಪಡಿಸಲಾಗುವುದು ಎಂದು ವಿವರಿಸಿದರು.

63,829 ಆಕ್ಷೇಪಣೆ ಸಲ್ಲಿಕೆ:

ಮತದಾರರ ಪಟ್ಟಿ ಪರಿಷ್ಕರಣೆಯಂತೆ 2022ರ ನವೆಂಬರ್‌ 9ರಿಂದ ಡಿಸೆಂಬರ್‌ 7ರ ವರೆಗೆ 63,829 ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಇದರಲ್ಲಿ ಈಗಾಗಲೇ 16,065 ಅರ್ಜಿಗಳ ಕ್ಷೇತ್ರ ಪರಿಶೀಲನೆಗೆ ವಹಿಸಲಾಗಿದ್ದು, 1,449 ಅರ್ಜಿಗಳು ತಿರಸ್ಕೃತಗೊಂಡಿವೆ. 8,173 ಅರ್ಜಿಗಳು ಸ್ವೀಕೃತಗೊಂಡಿವೆ ಎಂದು ಡಿಸಿ ತಿಳಿಸಿದರು.

Advertisement

ದ.ಕ. ಜಿಲ್ಲೆಯಲ್ಲಿ ಈ ಹಿಂದೆ ಪ್ರಕಟಿಸಲಾದ ಕರಡು ಮತದಾರರ ಪಟ್ಟಿ ಅನುಸಾರ 18ರಿಂದ 20 ವರ್ಷ ವಯಸ್ಸಿನ 9,925 ಹೊಸ ಮತದಾರರಿದ್ದು, ಪರಿಷ್ಕರಣೆಯ ಸಂದರ್ಭ 21,000 ಮಂದಿಯಿಂದ ಅರ್ಜಿ ಬಂದಿದೆ. ಅದನ್ನು ಪರಿಶೀಲನೆ ಮಾಡಲಾಗುತ್ತಿದೆ. ಎರಡೆರಡು ಕ್ಷೇತ್ರಗಳಲ್ಲಿ ಮತದಾರರ ಚೀಟಿಯನ್ನು ಹೊಂದಿದ 27 ಪ್ರಕರಣಗಳನ್ನು ಗುರುತಿಸಲಾಗಿದೆ. ದ.ಕ. ಜಿಲ್ಲೆಯಲ್ಲಿ ಮತದಾರರ ಹೆಸರು ಡಿಲೀಟ್‌ ಆಗಿರುವ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಈಗಾಗಲೇ ರಾಜಕೀಯ ಪಕ್ಷಗಳಿಂದ ಕರಡು ಮತದಾರರ ಪಟ್ಟಿ ಪರಿಶೀಲಿಸಿ ಅರ್ಹ ಮತದಾರರು ಇರುವುದನ್ನು ಖಾತರಿಪಡಿಸಲು ಸೂಚಿಸಲಾಗಿದೆ. ಚುನಾವಣೆ ದಿನದಂದು ಯಾವುದೇ ರೀತಿಯ ಗೊಂದಲಕ್ಕೆ ಆಸ್ಪದ ನೀಡದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದೂ ಅವರು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next