Advertisement

ಚುನಾವಣ ಸೇತುವೆ ಮೇಕೆದಾಟು

12:12 AM Feb 13, 2023 | Team Udayavani |

ಬೆಂಗಳೂರು ನಗರ ಹಾಗೂ ಸುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರನ್ನು ಪೂರೈಸುವ ಯೋಜನೆಯಾದ ಮೇಕೆದಾಟು ಯೋಜನೆ ಈ ಬಾರಿಯ ಚುನಾವಣ ಅಸ್ತ್ರವಾಗುವ ಸಾಧ್ಯತೆಗ­ಳಿವೆ. ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ರಾಜಕೀಯ ಮತ್ತು ಭಾವನಾತ್ಮಕ ಸಂಘರ್ಷಕ್ಕೆ ಕಾರಣವಾಗುವ ಮೇಕೆದಾಟು ಯೋಜನೆ ರಾಜಕೀಯ ಪಕ್ಷಗಳಿಗೆ ಆಯಾ ಸಂದರ್ಭ­ದಲ್ಲಿ ರಾಜಕೀಯ ದಾಳ ಮತ್ತು ಚುನಾವಣ ಅಸ್ತ್ರವೂ ಆಗಿರುತ್ತದೆ. ಈ ಬಾರಿಯೂ ಅಷ್ಟೇ ದಕ್ಷಿಣ ಕರ್ನಾಟಕ­ದಲ್ಲಿ ಮೇಕೆದಾಟು ಯೋಜನೆಯನ್ನು ಚುನಾವಣೆ ಅಸ್ತ್ರವನ್ನಾಗಿಸಲು ಎಲ್ಲ ಪಕ್ಷಗಳು ಪ್ರಯತ್ನಿಸಿವೆ.

Advertisement

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೂ ಮೇಕೆದಾಟು ಯೋಜನೆ ವಿವಾದ ತಳಕು ಹಾಕಿಕೊಂಡಿ­ರುವುದರಿಂದ ಇದು ಕರ್ನಾಟಕದ ರಾಜಕೀಯ ಪಕ್ಷಗಳಿಗೆ ಕತ್ತಿ ಮೇಲಿನ ನಡಿಗೆ ಆಗಿರುತ್ತದೆ. ತಮಿಳು­ನಾಡಿನ ವಿಚಾರ ಬಂದಾಗ ಇಲ್ಲಿನ ರಾಜಕೀಯ ಪಕ್ಷಗಳಲ್ಲಿ ಒಗ್ಗಟ್ಟು ಕಾಣುತ್ತದೆ. ಇದೇ ವೇಳೆ ಆಡಳಿತ ಮತ್ತು ವಿಪಕ್ಷಗಳ ವಿಚಾರ ಬಂದಾಗ ಪರಸ್ಪರ ದೂಷಣೆಯ ರಾಜಕೀಯ ಅಸ್ತ್ರಗಳು ಬಳಕೆಯಾಗುತ್ತಿರುತ್ತವೆ.

“ನಾವು ಮೇಕೆದಾಟು ಪರ, ನಮ್ಮ ಸರಕಾರ ಬಂದರೆ ಯೋಜನೆ ಜಾರಿಗೆ ತರುತ್ತೇವೆ’ ಎಂದು ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಈ ಮೂರು ಪಕ್ಷಗಳು ಹೇಳುತ್ತವೆ. ಚುನಾವಣೆಗಳ ಸಂದರ್ಭದಲ್ಲಿ ಭರವಸೆ­ಗಳನ್ನೂ ನೀಡುತ್ತಾರೆ. ಪಕ್ಷಗಳ ಚುನಾವಣ ಪ್ರಣಾಳಿಕೆಯಲ್ಲೂ ಈ ವಿಚಾರ ಪ್ರತ್ಯಕ್ಷ-ಪರೋಕ್ಷವಾಗಿ ಪ್ರಸ್ತಾವವೂ ಆಗಿರುತ್ತದೆ. ಅಧಿಕಾರ ಸಿಕ್ಕು ಯೋಜನೆ ಜಾರಿಗೆ ತರುವ ಸಂದರ್ಭ ಬಂದಾಗ ವರಸೆಗಳು ಬದಲಾಗುತ್ತವೆ, ರಾಜಕೀಯ ಇಚ್ಛಾಶಕ್ತಿಯ ಕೊರತೆಯೂ ಕಾಣುತ್ತದೆ. ಒಂದು ರಾಜಕೀಯ ಪಕ್ಷ ಈ ವಿಚಾರ ಎತ್ತಿದಾಗ, ನಾವು ಹಿಂದೆ ಇದನ್ನೇ ಹೇಳಿದ್ದೆವು, ನಮ್ಮ ಉದ್ದೇಶವೂ ಇದೇ ಆಗಿತ್ತು ಎಂದು ಉಳಿದ ರಾಜಕೀಯ ಪಕ್ಷಗಳು ಸಮರ್ಥನೆಗೆ ಇಳಿಯುತ್ತವೆ. ಮುಂದೇನು ಮಾಡಬೇಕು ಎಂಬುದಕ್ಕಿಂತ ಹಿಂದೆ ನಾವೇನು ಮಾಡಿದ್ದೆವು ಅನ್ನುವುದಕ್ಕೆ ಸಮಜಾಯಿಷಿ, ಸಮರ್ಥನೆಗಳಲ್ಲೇ ಹೆಚ್ಚು ಕಾಲ ಕಳೆಯಲಾಗುತ್ತದೆ.

ರಾಜಕೀಯ ಪಕ್ಷಗಳ ನಿಲುವು-ಒಲವು
ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಳೆದ ವರ್ಷ ಜನವರಿ ಮತ್ತು ಫೆಬ್ರವರಿಯಲ್ಲಿ ಕಾಂಗ್ರೆಸ್‌ ಪಕ್ಷ ನೀರಿಗಾಗಿ ನಡಿಗೆ ಎಂಬ ಹೆಸರಲ್ಲಿ ಮೇಕೆದಾಟುವಿನಿಂದ ಬೆಂಗಳೂರುವರೆಗೆ ಪಾದಯಾತ್ರೆ ಕೈಗೊಂಡಿತ್ತು. ಈ ವೇಳೆ ಬಿಜೆಪಿ ಮತ್ತು ಜೆಡಿಎಸ್‌ ಅನ್ನು ರಾಜಕೀಯವಾಗಿ ಟಾರ್ಗೆಟ್‌ ಮಾಡಿದ್ದ ಕಾಂಗ್ರೆಸ್‌, ಹಳೆ ಮೈಸೂರು ಭಾಗದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ಚುನಾವಣ ಲೆಕ್ಕಚಾರವೂ ಇಟ್ಟುಕೊಂಡಿತ್ತು. ನಡೆಯುವುದು ಆರೋಗ್ಯ­­ಕ್ಕಾಗಿ ಒಳ್ಳೆಯದು ಎಂದು ಬಿಜೆಪಿ ಮೂದಲಿ­ಸಿತ್ತು. ಡಿ.ಕೆ. ಶಿವಕುಮಾರ್‌ ಅವರ ವ್ಯಕ್ತಿ ವೈಭವೀಕರಣದ ಯಾತ್ರೆ ಇದು ಎಂದು ಲೇವಡಿ ಮಾಡಿತ್ತು.

ಈ ವಿಚಾರ ರಾಜಕೀಯಕರಣಗೊಳ್ಳುತ್ತಿರುವ ಬೆನ್ನಲ್ಲೇ ವಿಧಾನ­ಮಂಡಲ­ದಲ್ಲಿ ಮೇಕೆದಾಟು ಪರ ನಿರ್ಣಯವನ್ನು ಅನುಮೋದನೆ­ಗೊಳಿಸುವ ಮೂಲಕ ತಮಗೂ ಬದ್ಧತೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಮೇಕೆದಾಟು ಯೋಜನೆ ಜಾರಿ ವಿಚಾರದಲ್ಲಿ ನಮ್ಮ ನಿಲುವು ಬಹಳ ಸ್ಪಷ್ಟ. ಯೋಜನೆ ಅನುಷ್ಠಾನಕ್ಕೆ ನಮ್ಮ ಸರಕಾರ ಬದ್ಧ ಎಂದು ಬೊಮ್ಮಾಯಿ ಸದನದಲ್ಲಿ ಘೋಷಿಸಿದ್ದರು. ಹಿಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸಹ ಈ ವಿಚಾರದಲ್ಲಿ ಅಚಲತೆ ಹೊಂದಿದ್ದರು.

Advertisement

ತಮಿಳುನಾಡು ತಗಾದೆಗೆ ದಿಟ್ಟ ತಿರುಗೇಟು ನೀಡಿದ್ದ ಅವರು ಈ ವಿಚಾರವಾಗಿ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್‌ ಅವರಿಗೆ ಪತ್ರ ಬರೆದು ತಮಿಳುನಾಡು ಸರಕಾರದ ಉಚಿತವೂ, ನ್ಯಾಯಸಮ್ಮತವೂ ಅಲ್ಲ. ಮೇಕೆ­ದಾಟು ಯೋಜನೆಯಿಂದ ಎರಡೂ ರಾಜ್ಯಗಳ ಜಲಾ­ನಯನದ ಪ್ರದೇಶಗಳ ಜನತೆಗೆ ಅನುಕೂಲವಾಗಲಿದೆ.

ಈ ವಿಚಾರದಲ್ಲಿ ಜೆಡಿಎಸ್‌ ಸಹ ತನ್ನ ನಿಲುವನ್ನು ಸ್ಪಷ್ಟಪಡಿಸಿತ್ತು. ಹಳೆ ಮೈಸೂರು ಭಾಗದಲ್ಲಿ ಪ್ರಾಬಲ್ಯ ಹೊಂದಿರುವ ಜೆಡಿಎಸ್‌, ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್‌ ನಿಲುವು ಕೇವಲ ಮತಕ್ಕಾಗಿ ಮಾತ್ರ ಅಧಿಕಾರದಲ್ಲಿ ಇದ್ದಾಗ ಅವರು ಏನೂ ಮಾಡಿಲ್ಲ ಎಂದು ದೂರುತ್ತದೆ. ಈ ಕುರಿತು ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮಾಜಿ ಪ್ರಧಾನಿ ದೇವೇಗೌಡರು, ಜೆಡಿಎಸ್‌ ಪಕ್ಷದ ನಿಲುವು ಮೇಕೆದಾಟು ಅಣೆಕಟ್ಟು ಕಟ್ಟಲೇಬೇಕು. ತಾಂತ್ರಿಕ ಅಂಶಗಳು ಇಟ್ಟುಕೊಂಡು ಕೆಲಸ ಶುರುಮಾಡಬೇಕು. ನಾನು ಪ್ರಧಾನಿ ಆಗಿದ್ದಾಗ ಮೇಕೆದಾಟು ವಿವಾದ ಬಗೆಹರಿಸಲು ಕಾಂಗ್ರೆಸ್‌ ಮತ್ತು ಬಿಜೆಪಿ ನನಗೆ ಸಹಕರಿಸಿಲ್ಲ ಎಂದು ಹೇಳಿದ್ದರು.

ಯೋಜನೆಯ ಹಿನ್ನೆಲೆ
ಕರ್ನಾಟಕ ಸರಕಾರ ಮೇಕೆದಾಟು ಯೋಜನೆ ಪರಿಕಲ್ಪನೆಯನ್ನು ತಂದಿತ್ತು. 2008ರಲ್ಲಿ ರಾಜ್ಯ ಸರಕಾರ ಯೋಜನೆಯನ್ನು ಆರಂಭಿಸಿತ್ತು. ಕಾವೇರಿ ಜಲಾನಯನ ಪ್ರದೇಶದಲ್ಲಿ ಯಾವುದೇ ಯೋಜನೆಯನ್ನು ಕೈಗೆತ್ತಿ­ಕೊಳ್ಳುವ ಮೊದಲು ತಮ್ಮ ಅನುಮತಿ ಪಡೆದುಕೊಳ್ಳಬೇಕು ಎಂದು ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್‌ ಮುಂದೆ ಅರ್ಜಿ ಸಲ್ಲಿಸಿತು. ಕರ್ನಾಟಕ ಸರಕಾರದ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗ ತೆರವುಗೊಳಿಸಿದೆ. ಯೋಜನೆಯ ಅನುಷ್ಠಾನಕ್ಕಾಗಿ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್‌) ಸಿದ್ಧಪಡಿಸಲು ಆಯೋಗವು ತನ್ನ ತಾತ್ವಿಕ ಅನುಮೋದನೆಯನ್ನು ನೀಡಿತ್ತು. 400 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಒಂದು ಘಟಕವನ್ನು ಹೊಂದಿರುವ ಉದ್ದೇಶಿತ ಮೇಕೆದಾಟು ಯೋಜನೆಯಡಿ ಈ ಹೆಚ್ಚುವರಿ ನೀರನ್ನು ಬಳಸುವುದು ಸರಕಾರದ ಉದ್ದೇಶವಾಗಿದೆ. 67 ಟಿಎಂಸಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಕರ್ನಾಟಕ ಮೇಕೆದಾಟು ಮೂಲಕ ಹೆಚ್ಚುವರಿ 4.75 ಟಿಎಂಸಿ ನೀರನ್ನು ಕುಡಿಯುವ ಅಗತ್ಯಕ್ಕೆ ಬಳಸಿಕೊಳ್ಳುವ ಯೋಜ ನೆಯನ್ನು ಹೊಂದಿದ್ದು ಇದರಿಂದ ಬೆಂಗಳೂರು ನಗರದ ಕುಡಿಯುವ ನೀರಿನ ಅಗತ್ಯಕ್ಕೂ ಅನುಕೂಲವಾಗಲಿದೆ. ಯೋಜನೆಯ ಪರಿಷ್ಕೃತ ಯೋಜನಾ ವೆಚ್ಚ 9 ಸಾವಿರ ಕೋಟಿ ರೂ. ಆಗಿದೆ.

-ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next