Advertisement

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

01:51 AM Apr 18, 2024 | Team Udayavani |

ಮಂಡ್ಯ: “ಚುನಾವಣ ಬಾಂಡ್‌ ಎನ್ನುವುದು ವಿಶ್ವದಲ್ಲೇ ಅತಿ ದೊಡ್ಡ ಹಗರಣವಾಗಿದೆ. ಅದರ ವಿಚಾರ ಪ್ರಸ್ತಾವಿಸು ವಾಗ ಪ್ರಧಾನಿ ನರೇಂದ್ರ ಮೋದಿಯವರ ಕೈ ನಡುಗುತ್ತಿತ್ತು’.

Advertisement

ಹೀಗೆಂದು ಎಲೆಕ್ಟೋರಲ್‌ ಬಾಂಡ್‌ ಬಗ್ಗೆ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ.

ಮಂಡ್ಯ ವಿವಿ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್‌ನ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಚುನಾವಣ ಬಾಂಡ್‌ ಕಾನೂನುಬಾಹಿರ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಕಂಪೆನಿಗಳ ಮೇಲೆ ಐಟಿ, ಇ.ಡಿ. ತನಿಖೆ ನಡೆಸುವ ಬೆದರಿಕೆ ಹಾಕಿ ಬಿಜೆಪಿ ಹಣ ವಸೂಲಿ ಮಾಡಿದೆ ಎಂದು ಆರೋಪಿಸಿದರು.

“ಗೂಂಡಾಗಳು ಮಾಡುವ ಕೆಲಸವನ್ನು ಬಿಜೆಪಿ ಮಾಡಿದೆ. ಬಿಜೆಪಿ  ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಚುನಾವಣ  ಬಾಂಡ್‌ ಹೆಸರಲ್ಲಿ ಹಫ್ತಾ ವಸೂಲಿ ಮಾಡಿದೆ. ಪ್ರಧಾನಿ ಮೋದಿಯವರು ಇತ್ತೀಚೆಗಿನ  ಸಂದರ್ಶನದಲ್ಲಿ  ಚುನಾವಣ ಬಾಂಡ್‌ಗಳನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಅವರ ಕೈಗಳು ನಡುಗುತ್ತಿದ್ದವು. ಯಾಕೆಂದರೆ, ಎಲೆಕ್ಟೋರಲ್‌ ಬಾಂಡ್‌ ಎನ್ನುವುದು ಭಾರತ ದಲ್ಲಿ ಹಿಂದೆಂದೂ ನಡೆಯದಂಥ ಅತಿದೊಡ್ಡ ಹಗರಣ’ ಎಂದು ರಾಹುಲ್‌ ಹೇಳಿದರು.

ಕೇಂದ್ರದ ಬಿಜೆಪಿ ಸರಕಾರ ಹಾಗೂ ಆರೆಸ್ಸೆಸ್‌ ದೇಶದ ಸಂವಿಧಾನ ಹಾಗೂ ಪ್ರಜಾ ಪ್ರಭುತ್ವವನ್ನು ದಮನಿಸುವ ನೀತಿಯನ್ನು ಅನುಸರಿಸುತ್ತಿವೆ. ಕೇಂದ್ರ ಸರಕಾರವು ಕೇವಲ 25 ಮಂದಿಗೋಸ್ಕರ ಕೆಲಸ ಮಾಡುತ್ತಿದ್ದು, ಬಡವರನ್ನು ನಿರ್ಲಕ್ಷಿಸಿದೆ. ಆದರೆ ನಾವು ಬಡವರಿಗಾಗಿ ಶ್ರಮಿಸುತ್ತಿದ್ದೇವೆ. ಬಡವರ ಆರ್ಥಿಕ ಸಬಲೀಕರಣಕ್ಕಾಗಿ ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಶ್ರೀಮಂತರ ಸಾಲ ಮನ್ನಾ ಮಾಡುತ್ತಾರೆ. ಆದರೆ ರೈತರ ಸಾಲ ಮನ್ನಾ ಮಾಡಲು ಮುಜುಗರಪಡುತ್ತಿದ್ದಾರೆ. ಪ್ರಧಾನಮಂತ್ರಿ ವಿಮಾ ಯೋಜನೆಯಲ್ಲಿ ರೈತರು ತಮ್ಮ ಪಾಲಿನ ಹಣ ಕಟ್ಟಿದ್ದರೂ ಪ್ರವಾಹ, ನೆರೆ, ಬರ ಬಂದಾಗ ಆ ಹಣ ರೈತರಿಗೆ ಸಿಗಲಿಲ್ಲ ಎಂದೂ  ವಾಗ್ಧಾಳಿ ನಡೆಸಿದರು.

Advertisement

ಮಂಡ್ಯದಲ್ಲಿ ಪ್ರಚಾರ ಮುಗಿಸಿ ಸಂಜೆ ಕೋಲಾರದಲ್ಲಿ
ಪ್ರಜಾಧ್ವನಿ-2 ಪ್ರಚಾರ ಸಭೆಯಲ್ಲಿ ಮಾತನಾಡಿದ ರಾಹುಲ್‌, ದೇಶದ ಬಹುಸಂಖ್ಯಾಕ ವರ್ಗಕ್ಕೆ ಆಗಿರುವ ತಾರತಮ್ಯ ನಿವಾರಿಸುವಲ್ಲಿ ಎಂಥದ್ದೇ ಅಡೆತಡೆ ಎದುರಾದರೂ ಹಿಂಜರಿಯುವುದಿಲ್ಲ, ಎದೆಗುಂದದೆ ಹೋರಾಡುತ್ತೇನೆ ಎಂದರು.

ಮಂಡ್ಯದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಕಳೆದ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌. ಡಿ.ಕುಮಾರಸ್ವಾಮಿಗೆ  ಪುತ್ರನನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ ಯಾಕೆ? ಈಗ ಅವರೇ ಸ್ಪರ್ಧಿಸಿದ್ದಾರೆ. ಇವರನ್ನು ಸೋಲಿಸಿ ಮನೆಗೆ ಕಳುಹಿಸಿ. ನೀವೆಲ್ಲರೂ ಕಾಂಗ್ರೆಸನ್ನು ಬೆಂಬಲಿಸಿ’ ಎಂದು ಮನವಿ ಮಾಡಿದರು.

ಎಚ್‌ಡಿಕೆ ಕೊಡುಗೆಯೇನು?
ಇದಕ್ಕೂ ಮುನ್ನ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್‌, “ಮಂಡ್ಯ ಮೈತ್ರಿ ಅಭ್ಯರ್ಥಿ ಎಚ್‌.ಡಿ. ಕುಮಾರಸ್ವಾಮಿ ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದನ್ನು ತಿಳಿಸಲಿ. ಜಿಲ್ಲೆಯಲ್ಲಿ ನಮ್ಮವರ್ಯಾರೂ ಇರಲಿಲ್ಲವೇ ಎಂದು ಪ್ರಶ್ನಿಸಿದರು.

ಮೋದಿ ನಿಲುವು ಬಹಿರಂಗಪಡಿಸಲಿ
ಜಾತಿ ಗಣತಿ ವಿಚಾರ ಬಂದಾಗಲೆಲ್ಲ ಪ್ರಧಾನಿ ಮೋದಿ ಮೌನಕ್ಕೆ ಶರಣಾಗುತ್ತಿದ್ದಾರೆ. ಜಾತಿ ಗಣತಿ ಪರವೋ, ವಿರುದ್ಧವೋ ಎಂಬ ನಿಲುವನ್ನು ಅವರು ಬಹಿರಂಗಪಡಿಸಲಿ. ಜನಸಂಖ್ಯೆಗೆ ತಕ್ಕಂತೆ ಹಕ್ಕು ಕೊಡಲು ಜಾತಿ ಗಣತಿಯಿಂದ ಮಾತ್ರ ಸಾಧ್ಯ. ಕರ್ನಾಟಕ ಮಾತ್ರವಲ್ಲ, ಇಡೀ ದೇಶದಲ್ಲೇ ನಾವು ಜಾತಿಗಣತಿ ನಡೆಸಲಿದ್ದೇವೆ.
-ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

ಬಿಜೆಪಿಗೆ ಮತ ಕೇಳ್ಳೋ ನೈತಿಕ ಹಕ್ಕಿಲ್ಲ
ಕರ್ನಾಟಕಕ್ಕೆ ದೊಡ್ಡ ಅನ್ಯಾಯ ಮಾಡಿರುವ ಕೇಂದ್ರದ ಬಿಜೆಪಿ ಸರಕಾರಕ್ಕೆ ಇಲ್ಲಿ ಮತ ಕೇಳುವ ನೈತಿಕ ಹಕ್ಕಿಲ್ಲ. ರಾಜ್ಯಕ್ಕೆ ಬರಬೇಕಿರುವ ಪಾಲಿನ ಬಗ್ಗೆ ಸಿಎಂ, ಡಿಸಿಎಂ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಕೇಂದ್ರದ ವಿತ್ತ ಸಚಿವರಿಗೆ ಸಾಧ್ಯವಾಗಿಲ್ಲ. ಪ್ರಧಾನಿ ತಮ್ಮ ಅಭಿವೃದ್ಧಿಯನ್ನು 10 ನಿಮಿಷ ವಿವರಿಸಿದರೆ, ಕಾಂಗ್ರೆಸನ್ನು 20 ನಿಮಿಷ ಟೀಕಿಸುತ್ತಾರೆ.
-ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ವಿದೇಶದಲ್ಲಿನ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದ್ದ ಪ್ರಧಾನಿ ಮೋದಿ ಅವರು, 10 ವರ್ಷಗಳಲ್ಲಿ 15 ರೂ.ಗಳನ್ನೂ ಬ್ಯಾಂಕ್‌ ಖಾತೆಗೆ ಹಾಕಿಲ್ಲ. ರಾಜ್ಯದಲ್ಲಿ ಎನ್‌ಡಿಎಯ 27  ಸಂಸದರಿದ್ದರೂ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಕೇಳಲಿಲ್ಲ. ನಮಗೆ ನ್ಯಾಯ ಕೇಳದ ಸಂಸದರು ಲೋಕಸಭೆಗೆ ಯಾಕೆ ಹೋಗಬೇಕು?
-ಸಿದ್ದರಾಮಯ್ಯ, ಮುಖ್ಯಮಂತ್ರಿ

“ಎ’ ಟೀಂ ಮುಗಿಸುವ ಕೆಲಸವಾಗಲಿ
ಮಂಡ್ಯ ಮೈತ್ರಿ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದಾರೆಂಬುದಕ್ಕೆ ಸಾಕ್ಷಿ ತೋರಿಸಲಿ. ಮೊದಲು ಬಿಜೆಪಿಯ “ಬಿ’ ಟೀಂ ಆಗಿ ಜೆಡಿಎಸ್‌ ಇತ್ತು. ಈಗ ಅವೆರಡೂ ಸೇರಿ “ಎ’ ಟೀಂ ಆಗಿವೆ. “ಎ’ ಟೀಂ ಅನ್ನು ಮುಗಿಸುವ ಕೆಲಸವನ್ನು ನಾವು ಮಾಡಬೇಕು.
-ಡಿ.ಕೆ. ಶಿವಕುಮಾರ್‌, ಉಪಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next