ರಾಮನಗರ: ರಾಜ್ಯ ಬಿಜೆಪಿ ನಾಯಕರ ತಪ್ಪಿನಿಂದಾಗಿ ರಾಮನಗರದಲ್ಲಿ ಬಿಜೆಪಿ ಸೋಲು ಕಾಣುವಂತಾಗಿದೆ. ಇದು ಉಪ ಚುನಾವಣೆಯಲ್ಲ ಡಿಕೆ ಶಿವಕುಮಾರ್, ಎಚ್ ಡಿ ಕುಮಾರಸ್ವಾಮಿ ಅವರ ದಬ್ಬಾಳಿಕೆ ಎಂದು ರಾಮನಗರ ಬಿಜೆಪಿ ಜಿಲ್ಲಾ ಅಧ್ಯಕ್ಷ ಎಂ.ರುದ್ರೇಶ್ ಆರೋಪಿಸಿದ್ದಾರೆ.
ರಾಮನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಪ್ರಕಟವಾದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರು ರಾತ್ರೋರಾತ್ರಿ ಬಳ್ಳಾರಿಯಿಂದ ಬೆಂಗಳೂರಿಗೆ ಬಂದಿದ್ದರು. ಲಿಂಗಪ್ಪ ಮತ್ತು ಅವರ ಕುಟುಂಬವನ್ನು ಹಣದಿಂದ ಖರೀದಿಸುವ ಮೂಲಕ ಬಲಿಪಶು ಮಾಡಿದ್ದಾರೆ ಎಂದರು.
ಸಿಎಂ ಕುಮಾರಸ್ವಾಮಿ ಮತ್ತು ಡಿಕೆಶಿ ಯಾವ ಹೋಟೆಲ್ ನಲ್ಲಿ ಮಾತುಕತೆ ನಡೆಸಿದ್ದು, ಹಣ ಕೊಟ್ಟು ಖರೀದಿಸಿದ್ದು ಸೇರಿದಂತೆ ಎಲ್ಲಾ ಪ್ರಶ್ನೆಗಳಿಗೆ ಡಿಕೆಶಿ ಅವರು ಉತ್ತರ ನೀಡಲಿ ಎಂದು ಹೇಳಿದರು. ರಾಜ್ಯ ನಾಯಕರು ನಮ್ಮನ್ನು ಸವತಿ ಮಕ್ಕಳಂತೆ ಕಾಣುವುದನ್ನು ಬಿಟ್ಟುಬಿಡಲಿ, ರಾಮನಗರದಲ್ಲಿ ಬಿಜೆಪಿ ಕಾರ್ಯಕರ್ತರಿದ್ದಾರೆ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯ ಅಭ್ಯರ್ಥಿಯನ್ನು ಈಗಲೇ ಘೋಷಿಸಲಿ ಎಂದು ತಿಳಿಸಿದರು.
ನಾನೂ ಕೂಡಾ ಟಿಕೆಟ್ ಆಕಾಂಕ್ಷಿ: ರುದ್ರೇಶ್
ರಾಮನಗರದಲ್ಲಿ ರಾಜ್ಯ ಸಮ್ಮಿಶ್ರ ಸರ್ಕಾರದಿಂದ ನಡೆದ ಭ್ರಷ್ಟ ಚುನಾವಣೆಯಾಗಿದೆ. ಮುಂದಿನ ಲೋಕಸಭಾ ಚುನಾವಣೆಗಾಗಿ ಬಿಜೆಪಿ ಈಗಲೇ ತಯಾರಿ ನಡೆಸಬೇಕಾಗಿದೆ. ಅದಕ್ಕಾಗಿ ಅಭ್ಯರ್ಥಿ ಯಾರೆಂಬುದನ್ನು ಘೋಷಿಸಿಬಿಡಲಿ. ನಾನು ಕೂಡಾ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ರುದ್ರೇಶ್ ಹೇಳಿದರು.