ಲಕ್ನೋ: ‘ಈ ನಮ್ಮ ಗಾಂಧಿ ಕುಟುಂಬಕ್ಕೆ ಚುನಾವಣೆಗಳೆಂದರೆ ಪಿಕ್ ನಿಕ್ ಇದ್ದಂತೆ. ಚುನಾವಣಾ ಸಂದರ್ಭದಲ್ಲಿ ತಮಗೆ ಬೇಕಾದಲ್ಲಿ ಬೇಕಾದ ರೀತಿಯಲ್ಲಿ ತಿರುಗಾಡುತ್ತಾರೆ. ಮತ್ತೆ ಅವರು ನಿಮಗೆ ಸಿಗುವುದು ಐದು ವರ್ಷಗಳ ಬಳಿಕವೇ’ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಅವರು ವ್ಯಂಗ್ಯವಾಡಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಕ್ರಿಯ ರಾಜಕಾರಣಕ್ಕೆ ಧುಮುಕಿರುವ ಪ್ರಿಯಾಂಕ ವಾಧ್ರಾ ಗಾಂಧಿ ಅವರು ತಮ್ಮ ಪಕ್ಷದ ಪರವಾಗಿ ಉತ್ತರಪ್ರದೇಶದಲ್ಲಿ ಭರ್ಜರಿ ಪ್ರಚಾರ ಅಭಿಯಾನವನ್ನು ಕೈಗೊಂಡಿದ್ದಾರೆ. ತಮ್ಮ ‘ತ್ರಿ ದಿನ’ ಪ್ರಯಾಗ್ ರಾಜ್ ಪ್ರಚಾರದ ಮೊದಲನೇ ದಿನ ಪ್ರಿಯಾಂಕ ಅವರು ದೇವಸ್ಥಾನಗಳಿಗೆ ಭೇಟಿ ನೀಡಿದ್ದರು ಮತ್ತು ಗಂಗಾ ನದಿಯಲ್ಲಿ ದೋಣಿ ವಿಹಾರವನ್ನೂ ನಡೆಸಿದ್ದರು. ಈ ಎಲ್ಲಾ ವಿಚಾರಗಳನ್ನು ಗಮನಿಸಿ ರಾಜ್ಯದ ಉಪಮುಖ್ಯಮಂತ್ರಿ ಶರ್ಮಾ ಅವರು ಕೈ ನಾಯಕಿಯನ್ನು ಟೀಕಿಸಿದ್ದಾರೆ. ‘ಚುನಾವಣಾ ಸಂದರ್ಭಗಳಲ್ಲಿ ಬಂದು ಪಿಕ್ ನಿಕ್ ರೀತಿಯಲ್ಲಿ ಸುತ್ತಾಡಿ ಮರಳಿ ಹೋಗುವ ಇವರು ಮತ್ತೆ ನಿಮ್ಮ ಕೈಗೆ ಸಿಗುವುದು ಐದು ವರ್ಷಗಳ ಬಳಿಕವೇ. ಇದು ತಲೆತಲಾಂತರಗಳಿಂದ ನಡೆದು ಬಂದಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆ ಎನ್ನುವ ಅರಿವು ಇವರಿಗೆಲ್ಲಾ ಇದ್ದಂತಿಲ್ಲ, ‘ರಾಜ ಘರಾಣೆ’ ಎಂಬುದಾಗಿ ತಿಳಿದುಕೊಂಡಂತಿದೆ ಎಂದವರು ಅಣಕವಾಡಿದ್ದಾರೆ.
ಉತ್ತರಪ್ರದೇಶದಲ್ಲಿ ಮೈತ್ರಿ ಪ್ರಯತ್ನ ವಿಫಲಗೊಳ್ಳುವ ಮೂಲಕ ಕಾಂಗ್ರೆಸ್ ಗೆ ಅಂದೇ ಮುಖಭಂಗವಾಗಿದೆ. ಇದೀಗ ಇವರೆಲ್ಲಾ ಮುಖ ಉಳಿಸಿಕೊಳ್ಳುವ ಸಲುವಾಗಿ ಇಂತಹ ನೌಟಂಕಿಗಳನ್ನು ಮಾಡುತ್ತಿದ್ದಾರೆ. ಇದರಲ್ಲಿ ನಿನ್ನೆ ಪ್ರಿಯಾಂಕ ಅವರು ನಡೆಸಿದ ‘ದೋಣಿ ವಿಹಾರ’ವೂ ಒಂದು ಎಂದು ಉಪಮುಖ್ಯಮಂತ್ರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.