Advertisement

10 ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ

12:34 AM Jan 23, 2020 | Lakshmi GovindaRaj |

ಬೆಂಗಳೂರು: ಪಾಲಿಕೆಯ 12 ಸ್ಥಾಯಿ ಸಮಿತಿಗಳ ಪೈಕಿ 10 ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆ ಜ.23ರ ಗುರುವಾರ ಬೆಳಗ್ಗೆ 9 ಗಂಟೆಗೆ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಮೇಯರ್‌ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಲೆಕ್ಕಪತ್ರ ಹಾಗೂ ತೋಟಗಾರಿಕೆ ಸ್ಥಾಯಿ ಸಮಿತಿ ಹೊರತುಪಡಿಸಿ ಉಳಿದ 10 ಸ್ಥಾಯಿ ಸಮಿತಿಗೆ ಅಧ್ಯಕ್ಷರನ್ನು ನೇಮಕಕ್ಕೆ ಬಿಬಿಎಂಪಿ ಮೇಯರ್‌ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆಯಲಿದೆ.

Advertisement

ಈಗಾಗಲೇ ಆಡಳಿತ ಪಕ್ಷದ ಮುಖಂಡರು ಅನೌಪಚಾರಿಕಾವಾಗಿ ಅಧ್ಯಕ್ಷರು ಯಾರಾಗಬೇಕು ಎಂಬುದನ್ನು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಅಧ್ಯಕ್ಷರ ಚುನಾವಣೆಯಲ್ಲಿ ಬಹುತೇಕ ಎಲ್ಲ ಸ್ಥಾಯಿ ಸಮಿತಿಗೂ ಅವಿರೋಧ ಅಧ್ಯಕ್ಷರು ಆಯ್ಕೆಯಾಗುವ ಸಾಧ್ಯತೆ ಇದೆ. ಅಧ್ಯಕ್ಷ ಸ್ಥಾನಕ್ಕೆ ಸ್ಥಾಯಿ ಸಮಿತಿಯ 11 ಸದಸ್ಯರ ಪೈಕಿ ಒಬ್ಬರನ್ನು ಚುನಾಯಿಸಲಾಗುತ್ತದೆ. ಚುನಾವಣೆ ಪ್ರಕ್ರಿಯೆಯಲ್ಲಿ ಆಯಾ ಸಮಿತಿ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಬಹುದು.

ಒಂದಕ್ಕಿಂತ ಹೆಚ್ಚು ನಾಮಪತ್ರ ಬಂದಲ್ಲಿ ಚುನಾವಣೆ ನಡೆಯಲಿದೆ. ಇಲ್ಲವಾದರೆ ಅವಿರೋಧ ಆಯ್ಕೆ ನಡೆಯಲಿದೆ. ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಕೇವಲ 10 ಮಂದಿ ಸದಸ್ಯರು ಮಾತ್ರ ಆಯ್ಕೆಯಾಗಿರುವುದರಿಂದ ಬಾಕಿ ಇರುವ ಇನ್ನೊಂದು ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಸಿದ ಬಳಿಕ ಅಧ್ಯಕ್ಷರ ಚುನಾವಣೆ ನಡೆಸುವುದಕ್ಕೆ ಆಡಳಿತ ಪಕ್ಷ ನಿರ್ಧರಿಸಿದೆ.

ಇನ್ನು ತೋಟಗಾರಿಕೆ ಸ್ಥಾಯಿ ಸಮಿತಿಯ ಅಧ್ಯಕ್ಷ ಆಯ್ಕೆ ವಿಚಾರದಲ್ಲಿ ಗೊಂದಲ ಪರಿಹಾರವಾಗದೆ ಇರುವ ಹಿನ್ನೆಲೆಯಲ್ಲಿ ಗುರುವಾರ 12ರ ಪೈಕಿ 10 ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆ ನಡೆಯಲಿದೆ. ತೋಟಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಗೊಂದಲ ಪರಿಹಾರವಾದರೆ ತೋಟಗಾರಿಕೆ ಸ್ಥಾಯಿ ಸಮಿತಿಗೂ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್‌ ತಿಳಿಸಿದ್ದಾರೆ.

ಅಧ್ಯಕ್ಷರ ಆಯ್ಕೆ ಮುಂದೂಡಲು ಮನವಿ
ಬೆಂಗಳೂರು: ಪಾಲಿಕೆಯ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಚುನಾವಣೆ ಇಂದು (ಜ.23ಕ್ಕೆ ) ನಡೆಯಲಿದೆ. ಈ ಮಧ್ಯೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡುವಂತೆ ಪಾಲಿಕೆಯ ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಪಾಲಿಕೆಯ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಅವರಿಗೆ ಮನವಿ ಮಾಡಿದ್ದಾರೆ.

Advertisement

ಜ.23ಕ್ಕೆ 10 ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಸುವುದಾಗಿ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಆದರೆ, ಕರ್ನಾಟಕ ಪೌರ ನಿಗಮ ನಿಯಮಾನುಸಾರ ಚುನಾವಣೆ ನಡೆಸುವುದಕ್ಕೆ ಏಳು ದಿನಗಳ ಮುಂಚೆ ನೋಟಿಸ್‌ ನೀಡಬೇಕು. ಈ ರೀತಿ ಕಾಲಾವಕಾಶ ನೀಡದೆ ಚುನಾವಣೆ ನಡೆಸುವುದು ಕಾನೂನು ಬಾಹಿರ. ಹೀಗಾಗಿ, ಈ ಕೂಡಲೇ ನೋಟಿಸ್‌ ಹಿಂಪಡೆಯಬೇಕು ಇಲ್ಲವಾದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ವಾಜೀದ್‌ ಹೇಳಿದ್ದಾರೆ.

ಇನ್ನೂ ಕೋರಂ ಇದ್ದರೂ ತೋಟಗಾರಿಕೆ ಮತ್ತು ಲೆಕ್ಕಪತ್ರ ಸ್ಥಾಯಿ ಸಮಿತಿಗಳನ್ನು ಮುಂದೂಡಲಾಗಿದೆ. ಈ ಹಿಂದೆ 9 ಜನ ಇದ್ದಾಗಲೂ ಸ್ಥಾಯಿ ಸಮಿತಿ ರಚನೆ ಮಾಡಲಾಗಿದೆ. ಹೀಗಾಗಿ, ಚುನಾವಣೆ ನಡೆಯುವ ಏಳು ದಿನಗಳ ಮುನ್ನವೇ ನೋಟಿಸ್‌ ನೀಡಿ ಪಾಲಿಕೆಯ 12 ಸ್ಥಾಯಿ ಸಮಿತಿಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಸ್ಥಾಯಿ ಸಮಿತಿಯ ಸಂಭವನೀಯ ಅಧ್ಯಕ್ಷರ ಪಟ್ಟಿ
1.ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ- ಎಲ್‌.ಶ್ರೀನಿವಾಸ್‌
2.ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ- ಜಿ.ಮಂಜುನಾಥ ರಾಜು
3.ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ- ಆಶಾ ಸುರೇಶ್‌ (ಬೆಳ್ಳಂದೂರು ವಾರ್ಡ್‌)
4.ಬೃಹತ್‌ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ- ಮೋಹನ್‌ಕುಮಾರ್‌
5.ವಾರ್ಡ್‌ ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ- ಜಿ.ಕೆ.ವೆಂಕಟೇಶ್‌ (ಎನ್‌ಟಿಆರ್‌)
6.ಲೆಕ್ಕ ಪತ್ರ ಸ್ಥಾಯಿ ಸಮಿತಿ – (ಮುಂದೂಡಿಕೆ)
7.ಶಿಕ್ಷಣ ಸ್ಥಾಯಿ ಸಮಿತಿ- ಮಂಜುಳಾ ಎನ್‌.ಸ್ವಾಮಿ
8.ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ-ಹನುಮಂತಯ್ಯ
9.ಅಪೀಲುಗಳ ಸ್ಥಾಯಿ ಸಮಿತಿ- ಸಿ.ಆರ್‌.ಲಕ್ಷ್ಮೀ ನಾರಾಯಣ (ಗುಂಡಣ್ಣ)
10.ತೋಟಗಾರಿಕೆ ಸ್ಥಾಯಿ ಸಮಿತಿ- ಉಮಾದೇವಿ
11.ಮಾರುಕಟ್ಟೆ ಸ್ಥಾಯಿ ಸಮಿತಿ- ಆರ್‌.ಪದ್ಮಾವತಿ (ಚೌಡೇಶ್ವರಿ ವಾರ್ಡ್‌)
12.ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸ್ಥಾಯಿ ಸಮಿತಿ- ಅರುಣಾ ರವಿ

Advertisement

Udayavani is now on Telegram. Click here to join our channel and stay updated with the latest news.

Next