Advertisement

Election Update: ಸೋಮಣ್ಣಗೆ ಟಿಕೆಟ್‌: ಶಮನಗೊಳ್ಳದ ಅಸಮಾಧಾನ

08:50 PM Apr 14, 2023 | Team Udayavani |

ಚಾಮರಾಜನಗರ: ಸಚಿವ ವಿ. ಸೋಮಣ್ಣ ಅವರು ಬಯಸಿದಂತೆಯೇ ಬಿಜೆಪಿ ವರಿಷ್ಠರು ಚಾಮರಾಜನಗರ ಕ್ಷೇತ್ರದ ಟಿಕೆಟ್‌ ನೀಡಿದ್ದಾರೆ. ಆದರೆ ಕ್ಷೇತ್ರದಲ್ಲಿ ಟಿಕೆಟ್‌ ಬಯಸಿದ್ದ ಪ್ರಮುಖರ ಪೈಕಿ ಇಬ್ಬರು ಮುಖಂಡರ ಅಸಮಾಧಾನ ಇನ್ನೂ ಶಮನಗೊಂಡಿಲ್ಲ.

Advertisement

ಈ ಬಾರಿ ಸ್ವಕ್ಷೇತ್ರ ಗೋವಿಂದರಾಜನಗರಕ್ಕಿಂತ ಚಾಮರಾಜನಗರ ಕ್ಷೇತ್ರವೇ ಸುರಕ್ಷಿತ ಎನಿಸಿದ ಕಾರಣ ಸೋಮಣ್ಣ ಇಲ್ಲಿ ಟಿಕೆಟ್‌ ಬಯಸಿದ್ದರು. ಕ್ಷೇತ್ರದಲ್ಲಿ ಸ್ಥಳೀಯವಾಗಿ ಅರ್ಧ ಡಜನ್‌ಗೂ ಮಿಕ್ಕಿ ಆಕಾಂಕ್ಷಿಗಳಿದ್ದರು. ಕೆಲವು ತಿಂಗಳ ಹಿಂದೆ ಕೆಆರ್‌ಐಡಿಎಲ್‌ ಅಧ್ಯಕ್ಷ, ರಾಮನಗರದ ಎಂ. ರುದ್ರೇಶ್‌ ಕೂಡ ಆಕಾಂಕ್ಷಿಗಳ ಪಟ್ಟಿಗೆ ಸೇರ್ಪಡೆಯಾದರು. ರುದ್ರೇಶರನ್ನು ಯಡಿಯೂರಪ್ಪ ಅವರೇ ಕ್ಷೇತ್ರಕ್ಕೆ ಕಳುಹಿಸಿದ್ದಾರೆಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬಂದವು.

ಟಿಕೆಟ್‌ ಘೋಷಣೆ ಬಳಿಕ ಪ್ರಮುಖ ಟಿಕೆಟ್‌ ಆಕಾಂಕ್ಷಿಗಳಲ್ಲಿ ಇಬ್ಬರನ್ನು ಬಿಟ್ಟರೆ ಮಿಕ್ಕೆಲ್ಲರೂ ಪಕ್ಷದ ನಿರ್ಧಾರಕ್ಕೆ ಬದ್ಧ, ಸೋಮಣ್ಣ ಗೆಲುವಿಗೆ ಶ್ರಮಿಸುತ್ತೇವೆಂದು ಪ್ರಕಟಿಸಿದ್ದಾರೆ. ಆದರೆ ಕೆಆರ್‌ಐಡಿಎಲ್‌ ಅಧ್ಯಕ್ಷ ಎಂ. ರುದ್ರೇಶ್‌ ಬಹಿರಂಗವಾಗಿಯೇ ಸೋಮಣ್ಣ ವಿರುದ್ಧ ಕಿಡಿಕಾರಿದ್ದಾರೆ. ಕಾಂಗ್ರೆಸ್‌ಗೆ ಸೇರುತ್ತೇನೆಂದು ಬ್ಲ್ಯಾಕ್‌ವೆುಲ್‌ ಮಾಡಿದ ಅವರಿಗೆ ಎರಡು ಕಡೆ ಟಿಕೆಟ್‌ ನೀಡಿರುವುದು ಸರಿಯಲ್ಲ. ಅವರಿಗೆ ತಾಕತ್ತಿದ್ದರೆ ವರುಣಾ ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲಲಿ ಎಂದು ಸವಾಲು ಹಾಕಿದ್ದಾರೆ. ಈ ಬಗ್ಗೆ ಮಾಧ್ಯಮಗಳು ಪ್ರತಿಕ್ರಿಯೆ ಕೇಳಿದಾಗ, ನಾಯಿ ನರಿಗಳ ಮಾತಿಗೆಲ್ಲ ನಾನು ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಕೆಂಡ ಕಾರಿದರು.

ಇತ್ತ ಸ್ಥಳೀಯ ಆಕಾಂಕ್ಷಿ, ಜಿ.ಪಂ. ಮಾಜಿ ಅಧ್ಯಕ್ಷೆ ಜಿ. ನಾಗಶ್ರೀ ಪ್ರತಾಪ್‌ ಈ ಬಾರಿ ಬಿಜೆಪಿ ಟಿಕೆಟ್‌ ತಮಗೇ ಎಂದು ಬಲವಾಗಿ ನಂಬಿದ್ದರು. ಕೋರ್‌ ಕಮಿಟಿ ಪಟ್ಟಿಯಲ್ಲಿ ಅವರ ಹೆಸರೂ ಇತ್ತು. ಚಾಮರಾಜನಗರ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ 1999ರಲ್ಲಿ ಕಮಲ ಅರಳಿಸಿದ್ದ ಶಾಸಕ ಸಿ. ಗುರುಸ್ವಾಮಿ ಅವರ ಪುತ್ರಿಯಾದ ನಾಗಶ್ರೀ ಪ್ರತಾಪ್‌ ಅವರಿಗೆ ತಮ್ಮ ತಂದೆಯವರ ಹೆಸರಿನಿಂದಾಗಿ ಸಾಕಷ್ಟು ಬೆಂಬಲಿಗರಿದ್ದಾರೆ. ಮೂರು ದಿನಗಳಿಂದಲೂ ಅವರು ಮೌನಕ್ಕೆ ಶರಣಾಗಿದ್ದಾರೆ. ಗುರುವಾರ ಅವರ ಬೆಂಬಲಿಗರು ಕಲ್ಯಾಣಮಂದಿರವೊಂದರಲ್ಲಿ ಸಭೆ ನಡೆಸಿ, ಪಕ್ಷೇತರವಾಗಿ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ.

ಗುರುವಾರ ಸಂಜೆ ನಗರಕ್ಕೆ ಭೇಟಿ ನೀಡಿದ್ದ ಸೋಮಣ್ಣ, ನಾಗಶ್ರೀ ಅವರ ಮನೆಗೂ ಭೇಟಿ ನೀಡಿದ್ದರು. ಎ. 19ರಂದು ಚಾ.ನಗರದಲ್ಲಿ ನಾಮಪತ್ರ ಸಲ್ಲಿಸುತ್ತೇನೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧ. ನಾನು ಏನು ಹೇಳಬೇಕೋ ಹೇಳಿದ್ದೇನೆ. ತೀರ್ಮಾನ ಆಕೆಗೇ ಬಿಟ್ಟಿದ್ದು ಎಂದು ಹೇಳಿದ್ದರು. ಇನ್ನೆರಡು ದಿನಗಳಲ್ಲಿ ನನ್ನ ತೀರ್ಮಾನ ತಿಳಿಸುತ್ತೇನೆ ಎಂದು ನಾಗಶ್ರೀ ಒಂದೇ ಮಾತಿನ ಉತ್ತರ ನೀಡಿದ್ದಾರೆ. ಅವರ ಮುಂದಿನ ನಡೆ ಇನ್ನೂ ತಿಳಿದುಬಂದಿಲ್ಲ.

Advertisement

~ ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next