ಬೆಳಗಾವಿ: ಕಾಂಗ್ರೆಸ್ ಪಕ್ಷ ಮುಂಬರುವ ವಿಧಾನಸಭಾ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ. ಹೀಗಾಗಿ, ಸಾಮೂಹಿಕ ನಾಯಕತ್ವದಲ್ಲಿಯೇ ಚುನಾವಣೆಯನ್ನು ಎದುರಿಸುತ್ತೇವೆ ಎಂದರು.
ಇನ್ನೂ ಚುನಾವಣೆ ಆಗಿಲ್ಲ, ಚುನಾವಣೆ ಯಾವಾಗ ಬರುತ್ತದೆ ಗೊತ್ತಿಲ್ಲ. ಮೊದಲು ಚುನಾವಣೆ ನಡೆಯಬೇಕು, ಶಾಸಕರ ಆಯ್ಕೆಯಾಗಬೇಕು, ನಂತರವೇ ಮುಖ್ಯಮಂತ್ರಿ ಯಾರೆಂಬುದು ತೀರ್ಮಾನವಾಗುತ್ತದೆ. ಈಗಲೇ ಅದರ ಬಗ್ಗೆ ಹೇಳಲು ಆಗುವುದಿಲ್ಲ. ಅಭಿಮಾನಿಗಳು ತಮ್ಮ ನಾಯಕರೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಾರೆ, ಅದರಲ್ಲಿ ಯಾವುದೇ ತಪ್ಪಿಲ್ಲ. ಮುಖ್ಯಮಂತ್ರಿ ಯಾರಾಗಬೇಕೆಂದು ಪಕ್ಷದ ಎಲ್ಲ ಶಾಸಕರು ಹಾಗೂ ಹೈಕಮಾಂಡ್ ನಿರ್ಧರಿಸುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ:ರಾಹುಲ್ ಗಾಂಧಿ ಭೇಟಿ ಮಾಡಿದ ಡಿ.ಕೆ.ಶಿವಕುಮಾರ್: ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ
ಶಾಸಕ ರಮೇಶ ಜಾರಕಿಹೊಳಿ ರಾಜೀನಾಮೆ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ನೀವು ಅವರನ್ನೇ ಕೇಳಿ ಎಂದು ಸತೀಶ ಪ್ರತಿಕ್ರಿಯಿಸಿದರು.
ರಮೇಶ ಜಾರಕಿಹೊಳಿ ಅವರು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಬರುವ ಬಗ್ಗೆ ನನ್ನೊಂದಿಗೆ ಚರ್ಚಿಸಿಲ್ಲ. ಹೀಗಾಗಿ, ನಾನು ಈ ಬಗ್ಗೆ ಯಾವ ಅಭಿಪ್ರಾಯವನ್ನು ಹೇಳುವ ಪ್ರಶ್ನೆಯಿಲ್ಲ. ಅದು ನಮ್ಮ ವರಿಷ್ಠರಿಗೆ ಬಿಟ್ಟ ವಿಚಾರ. ಜಿಲ್ಲಾ ಮಟ್ಟದಲ್ಲಿದ್ದಂತವರು ಇದರ ಬಗ್ಗೆ ಮಾತನಾಡಲು ಆಗುವುದಿಲ್ಲ ಎಂದು ಹೇಳಿದರು.